Advertisement

‘ಹೊಂದಿಸಿ ಬರೆಯಿರಿ’ ಚಿತ್ರ ವಿಮರ್ಶೆ: ಭಾವನೆಗಳ ಮೇಲೆ ಜೀವಯಾನ

05:06 PM Feb 11, 2023 | Team Udayavani |

“ಇಷ್ಟಪಟ್ಟು ಮದುವೆಯಾಗಿದ್ದೇವೆ ಎಂಬ ಕಾರಣಕ್ಕೆ ಕಷ್ಟಪಟ್ಟುಕೊಂಡು ಜೊತೆಗಿರಲು ಸಾಧ್ಯವಿಲ್ಲ…’ – ಆಕೆ ಈ ಡೈಲಾಗ್‌ ಹೇಳುವ ಹೊತ್ತಿಗೆ ಮಾನಸಿಕವಾಗಿ ಇಬ್ಬರು ದೂರವಾಗಿರುತ್ತಾರೆ. ಪ್ರೀತಿಸಿ ಮದುವೆಯಾದ ಜೋಡಿಯ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ. ಬದುಕೇ ಹಾಗೆ, ಆರಂಭದಲ್ಲಿ ಚೆನ್ನಾಗಿದೆ ಅನಿಸಿದ್ದು, ಮುಂದೆ ದುಃಖಕ್ಕೆ, ನೋವಿಗೆ ಕಾರಣವಾಗಬಹುದು. ಬದುಕಿನಲ್ಲಿ ಬರುವ ಸೂಕ್ಷ್ಮ ಅಂಶಗಳು ಹಾಗೂ ಆ ಸಮಯದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ನೆಮ್ಮದಿ-ದುಃಖಕ್ಕೆ ಕಾರಣವಾಗುತ್ತವೆ. ಈ ತರಹದ ಒಂದು ಸೂಕ್ಷ್ಮ ಹಾಗೂ ಮನಸ್ಸಿಗೆ ಮುಟ್ಟುವಂತಹ ಸಂದೇಶದೊಂದಿಗೆ ತೆರೆಕಂಡಿರುವ ಚಿತ್ರ “ಹೊಂದಿಸಿ ಬರೆಯಿರಿ’.

Advertisement

ಇಡೀ ಸಿನಿಮಾ ನಿಂತಿರೋದು ಭಾವನೆಗಳ ಮೇಲೆ. ಹಾಗಾಗಿ, ಸಿನಿಮಾದ ಪಯಣ ಕೂಡಾ ಭಾವನಾ ಹಾದಿಯಲ್ಲೇ ಸಾಗುತ್ತದೆ. ಹರೆಯದ ಹುಡುಗ-ಹುಡುಗಿಯರ ನಿರ್ಧಾರಗಳು ಹೇಗೆ ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಈ ಸಿನಿಮಾದ ಪ್ರಮುಖ ಅಂಶ. ಇದು ರೆಗ್ಯುಲರ್‌ ಜಾನರ್‌ ಬಿಟ್ಟ ಸಿನಿಮಾ. ಹೀರೋ ಇಂಟ್ರೋಡಕ್ಷನ್‌, ಫೈಟ್‌, ಪಂಚಿಂಗ್‌ ಡೈಲಾಗ್‌… ಇವೆಲ್ಲದರಿಂದ ಹೊರತಾಗಿ ಕಥೆಯೇ ಈ ಸಿನಿಮಾದ ಹೀರೋ.

ಚಿತ್ರದಲ್ಲಿ ಭಾವನೆಗಳ ಏರಿಳಿತದ ಪಯಣ ಹೈಲೈಟ್‌ ಆದರೂ ಇಲ್ಲಿ ಕಾಲೇಜು ವಿದ್ಯಾರ್ಥಿಗಳ ಮಜವಾದ ಜರ್ನಿ ಇದೆ. ಚಿತ್ರದ ಮೊದಲಾರ್ಧ ಕಾಲೇಜು, ಅಲ್ಲಿನ ಪ್ರೀತಿ ಪ್ರೇಮ, ಸಣ್ಣಪುಟ್ಟ ಕಿರಿಕ್‌ಗಳ ಮೂಲಕ ಸಿನಿಮಾ ಸಾಗುತ್ತದೆ. ಇಲ್ಲಿ ಜಾಲಿಯಾಗಿ ಸಾಗುವ ಸನ್ನಿವೇಶಗಳು ಪ್ರೇಕ್ಷಕರಿಗೆ ನಗು ತರಿಸುವ ಜೊತೆಗೆ ಎಲ್ಲೂ ಬೋರ್‌ ಆಗದಂತೆ ನೋಡಿಕೊಂಡಿದ್ದಾರೆ ನಿರ್ದೇಶಕರು.

ಇನ್ನು, ಚಿತ್ರದ ದ್ವಿತೀಯಾರ್ಧ ತುಂಬಾ ಗಂಭೀರವಾಗಿ ಸಾಗುವ ಜೊತೆಗೆ ಬೇರೆ ಬೇರೆ ಸನ್ನಿವೇಶಗಳು ತೆರೆದುಕೊಳ್ಳುತ್ತವೆ. ಈ ಸಿನಿಮಾ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಾದರೆ ಮನೆಮಂದಿಯೆಲ್ಲಾ ಕುಳಿತು ನೋಡುವಂತಹ ಒಂದು ನೀಟಾದ ಸಿನಿಮಾ.

ಚಿತ್ರದಲ್ಲಿ ನಟಿಸಿರುವ ಐಶಾನಿ, ಶ್ರೀ ಮಹದೇವ್‌, ನವೀನ್‌ ಶಂಕರ್‌, ಪ್ರವೀಣ್‌ ತೇಜ್‌, ಭಾವನಾ, ಸಂಯುಕ್ತಾ ಹೊರನಾಡು ಸೇರಿದಂತೆ ಪ್ರತಿಯೊಬ್ಬರು ಪಾತ್ರಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಉಳಿದಂತೆ ಚಿತ್ರದ ಹಾಡುಗಳು, ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.

Advertisement

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next