ಮಂಡ್ಯ: ಆನ್‌ಲೈನ್ ಗೇಮ್ ಆಡಿ ಸಾಲದ ಸುಳಿಗೆ ಸಿಲುಕಿದ ದುಷ್ಕರ್ಮಿಯೊಬ್ಬ ಮನೆಗೆ ಕನ್ನ ಹಾಕಲು ಬಂದು ಮನೆ ಮಾಲಕನನ್ನು ಭೀಬತ್ಸವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಗ್ರಾಮದ ಆರೋಪಿ ಮೊಹಮದ್ ಇಬ್ರಾಹಿಂ ಕೊಲೆ ಆರೋಪಿ. ಆತನನ್ನು ಬಂಧಿಸಲಾಗಿದೆ. ಕ್ಯಾತನಹಳ್ಳಿ ಹೊರವಲಯದ ನಿವಾಸಿ ರಮೇಶ್ (58) ಕೊಲೆಯಾದವರು.
ಇಬ್ರಾಹಿಂ ಸಾಲದ ಸುಳಿಗೆ ಸಿಲುಕ್ಕಿದ್ದರಿಂದ ಒಂಟಿಮನೆಗಳನ್ನು ಗುರಿಯಾಗಿಸಿ ಕೊಂಡು ದರೋಡೆಗೆ ಯತ್ನಿಸಿ ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಇಬ್ರಾಹಿಂ ಶನಿವಾರ ಸಂಜೆ ರಮೇಶ್ ಅವರ ಮನೆ ಗುರಿಯಾಗಿಸಿಕೊಂಡು ಮರ ಕತ್ತರಿಸುವ ಯಂತ್ರದೊಂದಿಗೆ ತೆರಳಿದ್ದ. ಪಾರ್ಶ್ವವಾಯು ಪೀಡಿತ ಮನೆ ಮಾಲಕ ರಮೇಶ್ ಒಳಗಡೆ ಮಲಗಿದ್ದ ಸಂದರ್ಭ ಹೊರಗಡೆ ನಿಂತಿದ್ದ ಪತ್ನಿ ಯಶೋದಮ್ಮಗೆ “ನಿಮ್ಮ ಗಂಡ ಮರ ಕತ್ತರಿಸುವ ಯಂತ್ರ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿದ್ದಾರೆ; ತೆಗೆದುಕೊಳ್ಳಿ’ ಎಂದು ಹೇಳಿ ಏಕಾಏಕಿ ಯಂತ್ರ ವನ್ನು ಚಾಲನೆ ಮಾಡಿ ಯಶೋದಮ್ಮನ ಕುತ್ತಿಗೆ ಕತ್ತರಿಸಲು ಮುಂದಾದನು. ಆಗ ಯಶೋದಮ್ಮ ಯಂತ್ರವನ್ನು ತಳ್ಳಿದ್ದರಿಂದ ಯಂತ್ರವು ಆಕೆಯ ಮುಖಭಾಗವನ್ನು ಕತ್ತರಿಸಿತು. ಆಕೆ ಪ್ರಜ್ಞೆ ತಪ್ಪಿ ಬಿದ್ದಾಗ ಇಬ್ರಾಹಿಂ ಮನೆ ಮಾಲಕ ರಮೇಶ್ ಅವರನ್ನು ಮರ ಕತ್ತರಿಸುವ ಯಂತ್ರದಿಂದ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಆಗ ಎಚ್ಚರಗೊಂಡ ಯಶೋದಮ್ಮ ಮನೆಯ ಬಾಗಿಲು ಹಾಕಿ ಅಕ್ಕಪಕ್ಕದ ಮನೆಯವರನ್ನು ಕರೆದರು. ಸ್ಥಳೀಯರು ಆಗಮಿಸಿ ಇಬ್ರಾಹಿಂಗೆ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.