Advertisement

ಅತಿ ಔಷಧಕ್ಕೆ ಹೋಮಿಯೋಪತಿ ಪರಿಹಾರ

12:59 AM Aug 04, 2019 | Lakshmi GovindaRaj |

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಅತಿ ಔಷಧ ಸೇವನೆ ಸಮಸ್ಯೆಯಿಂದ ಸಾಕಷ್ಟು ಜನ ಬಳಲುತ್ತಿದ್ದಾರೆ. ಅದಕ್ಕೆ ಸೂಕ್ತ ಪರಿಹಾರ ಹೋಮಿಯೋಪತಿಯಲ್ಲಿದೆ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ತಿಳಿಸಿದರು. ಜಯನಗರದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ “ವಿಶ್ವ ಹೋಮಿಯೋಪತಿ ದಿನಾಚರಣೆ’ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ರೋಗ ವಾಸಿಯಾಗುತ್ತದೆ ಎಂಬ ನಂಬಿಕೆಯೇ ರೋಗಿಯ ಅರ್ಧದಷ್ಟು ರೋಗವನ್ನು ಗುಣಪಡಿಸುತ್ತದೆ ಎಂದು ಹೋಮಿಯೋಪತಿ ಹೇಳುತ್ತದೆ. ಇಲ್ಲಿ ರೋಗಿಯನ್ನು ಆತ್ಮೀಯವಾಗಿ ಕಾಣುವ ಮೂಲಕ ನಂಬಿಕೆ ಮೂಡಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅತಿ ಔಷಧ ಸೇವನೆ ಸಮಸ್ಯೆಯಿಂದ ಸಾಕಷ್ಟು ಜನ ಬಳಲುತ್ತಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಹೋಮಿಯೋಪತಿಯಲ್ಲಿದ್ದು, ಒಂದು ಔಷಧವನ್ನು 100 ಭಾಗ ಮಾಡಿ ಇಲ್ಲಿ ಬಳಸಿ ಪರಿಹಾರಕಂಡುಕೊಳ್ಳಲಾಗುತ್ತದೆ ಎಂದರು.

ವೈದ್ಯರು ಮತ್ತು ಅವರು ನೀಡುವ ಚಿಕಿತ್ಸೆಯಲ್ಲಿ ನಂಬಿಕೆ ಅತಿ ಮುಖ್ಯ ಪಾತ್ರವಹಿಸುತ್ತದೆ. ಇಂದಿಗೂ ಸಾಕಷ್ಟು ಜನರು ಚಿಕಿತ್ಸೆಯಲ್ಲಿ ನಂಬಿಕೆಯ ಇಟ್ಟುಕೊಳ್ಳದೆ ರೋಗಿಗಳಾಗಿಯೇ ಉಳಿದಿದ್ದಾರೆ. ಅನೇಕರು ಧರ್ಮಸ್ಥಳಕ್ಕೆ ಬಂದು ನನ್ನ ಬಳಿ ಪರಿಹಾರ ಸೂಚಿಸಿ ಎನ್ನುತ್ತಾರೆ. ಅವರಿಗೆ ಮಂಜನಾಥ ಸ್ವಾಮಿಯ ತೀರ್ಥ ನೀಡಿ ಇದರ ಜತೆ ವೈದ್ಯರು ಕೊಟ್ಟಿರುವ ಅದೇ ಔಷಧವನ್ನು ತೆಗೆದುಕೊಳ್ಳಲು ಹೇಳುತ್ತೇನೆ. ಬಹುತೇಕರು ಮರಳಿ ಬಂದು ನಮಗೆ ವಾಸಿಯಾಗಿದೆ ಎಂದು ಹೇಳುತ್ತಾರೆ. ತೀರ್ಥ ಸೇವಿಸುವಾಗ ಅವರಲ್ಲಿ ಇದ್ದ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಅರ್ಧ ರೋಗವನ್ನು ವಾಸಿ ಮಾಡಿದರೆ ಔಷಧವು ಇನರ್ಧ ರೋಗವನ್ನು ವಾಸಿ ಮಾಡುತ್ತದೆ ಎಂದು ತಿಳಿಸಿದರು.

ಧರ್ಮದ ಸ್ಥಾನ ಅರ್ಥ ಆಕ್ರಮಿಸಿದೆ: ಆಧುನಿಕ ಜೀವನಶೈಲಿ ಆರೋಗ್ಯ ಸಮಸ್ಯೆಗಳಿಗೆ ಮೂಲಕಾರಣವಾಗಿದ್ದು, ಇಲ್ಲಿ ಧರ್ಮದ ಸ್ಥಾನವನ್ನು ಅರ್ಥ (ಹಣ) ಆಕ್ರಮಿಸಿದೆ. ಪಂಚೇಂದ್ರಿಯಗಳು ಹತೋಟಿಯಲ್ಲಿರದಿದ್ದರೆ ಹಾಗೂ ಆಸೆ ಪೂರೈಸಿಕೊಳ್ಳಲು ಧರ್ಮದ ಮಾರ್ಗ ಮೀರಿದರೆ ರೋಗಗಳು ಕಟ್ಟಿಟ್ಟಬುತ್ತಿ. ಬದುಕಲು ಆರಿಸಿಕೊಳ್ಳುವ ಮಾರ್ಗಗಳು ಸರಿಯಾಗಿರಬೇಕು. ಉತ್ತಮ ಜೀವನಶೈಲಿ ಎಂದರೆ ಆಧುನಿಕ ಜೀವನದ ಆಕರ್ಷಣೆಗಳಿದ್ದರೂ ತಡೆದುಕೊಳ್ಳುವ ಸಂಸ್ಕಾರ ಕಲಿತುಕೊಳ್ಳಬೇಕು. ಇದಕ್ಕಾಗಿ ನಾವು ಕಲಿತ ವಿದ್ಯೆ ಹಾಗೂ ನಮ್ಮಲ್ಲಿರುವ ಬುದ್ಧಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಅನಾರೋಗ್ಯದ ಸಮಸ್ಯೆ ಮನುಷ್ಯನನ್ನು ಕಾಡಲು ಸಾಧ್ಯವೇ ಇಲ್ಲ. ಆರೋಗ್ಯವನ್ನು ಕಳೆದುಕೊಂಡವನು ಎಲ್ಲವನ್ನೂ ಕಳೆದುಕೊಂಡ ಹಾಗೆ. ಕಾಯಿಲೆಗಳ ಕುರಿತಂತೆ ಅಹಂಕಾರ, ಆಲಸ್ಯ, ತಿರಸ್ಕಾರ ಒಳ್ಳೆಯದಲ್ಲ ಎಂದ ಅವರು, ವ್ಯಸನಮುಕ್ತ ಜೀವನ ದೇಶೀಯ ಪದ್ಧತಿ ಆಹಾರ ಹಾಗೂ ಸನ್ಮಾರ್ಗದ ನಡವಳಿಕೆಗಳು ಮನುಷ್ಯನ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಲಿವೆ ಎಂದು ಹೇಳಿದರು.

Advertisement

ಕರ್ನಾಟಕ ಹೋಮಿಯೋಪತಿ ಮಂಡಳಿ ಅಧ್ಯಕ್ಷ ನಾಡೋಜ, ಡಾ.ಬಿ.ಟಿ.ರುದ್ರೇಶ್‌ ಮಾತನಾಡಿ, ಮನುಷ್ಯನ ಜೀವನದಲ್ಲಿ ಕಾರ್ಯಕ್ಷೇತ್ರ, ಕುಟುಂಬ ಪ್ರಮುಖ ಪಾತ್ರವಹಿಸುತ್ತವೆ. ಅವುಗಳ ವ್ಯತ್ಯಾಸದಿಂದ ರೋಗಗಳು ಆರಂಭವಾಗುತ್ತವೆ. ಪ್ರಸ್ತುತ 86 ರಾಷ್ಟ್ರಗಳಲ್ಲಿ ಹೋಮಿಯೋಪತಿ ವೈದ್ಯ ಪದ್ಧತಿ ಅನುಸರಿಸಲಾಗುತ್ತಿದೆ. 30 ಲಕ್ಷ ಹೋಮಿಯೋಪತಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

ದೇಶದಲ್ಲಿ 240 ಹೋಮಿಯೋಪತಿ ವೈದ್ಯ ಕಾಲೇಜುಗಳಿವೆ. ಕೇಂದ್ರ ಸರ್ಕಾರದ 2020ರಲ್ಲಿ ಎಲ್ಲರಿಗೂ ಸಂಪೂರ್ಣ ಎಂಬ ಉದ್ದೇಶ ಹೊಂದಿದ್ದು, ಹೋಮಿಯೋಪತಿ ಹೊರತುಪಡಿಸಿ ಅದು ಯಶಸ್ವಿಯಾಗುವುದಿಲ್ಲ ಎಂದರು. ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್‌.ಸಚ್ಚಿದಾನಂದ, ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಲಿಂಗೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next