ರಾಜ್ಯದಲ್ಲೀಗ ಮಹಿಳಾ ಸಶಕ್ತೀಕರಣದ ಬಗ್ಗೆ ಬಿಜೆಪಿ-ಹಾಗೂ ಕಾಂಗ್ರೆಸ್ ಇನ್ನಿಲ್ಲದಂತೆ ತಲೆಕೆಡಿಸಿಕೊಂಡಿರುವುದು ಈಗ “ಗ್ಯಾರಂಟಿ”ಯಾಗಿದೆ. ಚುನಾವಣೆ ಸಂದರ್ಭದಲ್ಲಿ ಮಹಿಳಾ ಮತದಾರರನ್ನು ಓಲೈಸುವುದಕ್ಕಾಗಿ ಬಿಜೆಪಿ “ಗೃಹಿಣಿ ಶಕ್ತಿ’ ಯೋಜನೆಯನ್ನು ಘೋಷಿಸಿದರೆ “ನಾ ನಾಯಕಿ’ ಕಾರ್ಯಕ್ರಮದಲ್ಲಿ “ಗೃಹ ಲಕ್ಷ್ಮೀ’ ಯೋಜನೆ ಮೂಲಕ ಮಾಸಿಕ 2,000 ರೂ. ನೀಡುವ ಭರವಸೆ ಕಾಂಗ್ರೆಸ್ ನೀಡಿದೆ.
ಇದರಿಂದ ಉಭಯ ಪಕ್ಷಕ್ಕೆ ಈ ವರ್ಷ ಪ್ರಣಾಳಿಕೆ ಸಮಿತಿಯೇ ಬೇಡ ಎಂದು ಒಂದು ಕಡೆ ಚರ್ಚೆ ನಡೆಯುತ್ತಿದ್ದರೆ, ಬಿಜೆಪಿಯವರು ನಮ್ಮ “ಐಡಿಯಾ” ಕದ್ದರು ಎಂದು ಕಾಂಗ್ರೆಸ್ ನಾಯಕರು ಸಿಡುಕುತ್ತಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ಅವರ ಗೃಹಿಣಿ ಶಕ್ತಿ ಯೋಜನೆಯ “ಕವರ್ ಡ್ರೈವ್’ ಕಾಂಗ್ರೆಸ್‌ನವರನ್ನು ಸ್ವಲ್ಪ ವಿಚಲಿತಗೊಳಿಸಿದ್ದಂತೂ ಸುಳ್ಳಲ್ಲ. ಏಕೆಂದರೆ “ನಾ ನಾಯಕಿ’ ಕಾರ್ಯಕ್ರಮದಲ್ಲಿ ಘೋಷಣೆಯಾಗಬೇಕಿದ್ದ “ಗ್ಯಾರಂಟಿ ನಂಬರ್ 2” ಲೀಕ್ ಆಗಿದ್ದು ಹೇಗೆ? ಕಾಂಗ್ರೆಸ್ ವಲಯದಲ್ಲೇ ಬೊಮ್ಮಾಯಿ ಏಜೆಂಟ್ಸ್ ಇದ್ದಾರೆಯೇ? ಎಂಬ ಹಂತದವರೆಗೂ ಈ ಚರ್ಚೆ ನಡೆದಿದೆ.
ಆದರೆ ವಾಸ್ತವದಲ್ಲಿ ಈ ಯೋಜನೆಯ ಕಥೆ ಬೇರೆಯದೇ ಇದೆ. ಎಲ್ಲ ವರ್ಗದ ಜನರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಘೋಷಣೆ ಮೂಲಕ ಕಾಂಗ್ರೆಸ್ ಬಿಜೆಪಿ ಸರಕಾರಕ್ಕೆ ಶಾಕ್ ಕೊಟ್ಟ ಅನಂತರ ಸಿಎಂ ಬೊಮ್ಮಾಯಿ, ಕಾಂಗ್ರೆಸ್‌ಗೆ ಶಾಕ್ ನೀಡುವುದಕ್ಕೆ ಮಾರ್ಗೋಪಾಯದ ಬಗ್ಗೆ ಯೋಚಿಸುತ್ತಿದ್ದರು. ಆಗ ಅವರಿಗೆ ಥಟ್ ಎಂದು ನೆನಪಿಗೆ ಬಂದಿದ್ದು, ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಭಾಷಣ.
ಮಹಿಳೆಯರಿಗೆ ನೇರವಾಗಿ ತಲುಪುವ ಯೋಜನೆಗಳನ್ನು ಮುಂದಿನ ಬಜೆಟ್‌ನಲ್ಲಿ ನೀಡಬೇಕೆಂದು ಅವರು ಸದನದಲ್ಲಿ ಆಗ್ರಹಿಸಿದ್ದರು. ತತ್‌ಕ್ಷಣ ಸ್ಪಂದಿಸಿದ ಬೊಮ್ಮಾಯಿ ಅಂದೇ ಈ ಕುರಿತಾದ ಡೇಟಾ ಸಂಗ್ರಹಕ್ಕೆ ಸೂಚಿಸಿದ್ದರು. ಈ ಬಾರಿ ಬಜೆಟ್‌ನಲ್ಲೇ ಗೃಹಿಣಿ ಶಕ್ತಿ ಯೋಜನೆ ಘೋಷಣೆಯಾಗುವುದಿತ್ತು. ಆದರೆ ಪವರ್ ಶಾರ್ಟ್ ಸರ್ಕ್ಯೂಟ್ ನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತುಸು ಮುಂಚಿತವಾಗಿಯೇ “ಗೃಹಿಣಿ ಶಕ್ತಿ” ಮೂಲಕ ಕಾಂಗ್ರೆಸ್‌ನ “ಗೃಹ ಲಕ್ಷ್ಮೀ”ಯನ್ನು ತಣ್ಣಗಾಗಿಸಿದ್ದಾರಂತೆ!