Advertisement

ಮನೆಯಲ್ಲೇ ಮದ್ದು; ಆಸ್ಪತ್ರೆ ದಾಖಲಾತಿ ಇಳಿಕೆ; ಕೋವಿಡ್‌ದಿಂದ ಚೇತರಿಕೆ  ಅಧಿಕ 

11:21 PM Jan 16, 2022 | Team Udayavani |

ಬೆಂಗಳೂರು: ಹೆಚ್ಚುತ್ತಿರುವ ಕೊರೊನಾ ಮಧ್ಯೆ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಇದ್ದು, ಈಗಿನ ರೂಪಾಂತರಿ ಅಷ್ಟೇನೂ ಅಪಾಯಕಾರಿಯಲ್ಲ ಎಂಬ ಸಮಾಧಾನಕರ ಅಂಶ ಬಹಿರಂಗವಾಗಿದೆ. ಅಷ್ಟೇ ಅಲ್ಲ, ಹೆಚ್ಚು ಕಡಿಮೆ 3ರಿಂದ 5 ದಿನಗಳಲ್ಲಿ ಸೋಂಕಿನ ಲಕ್ಷಣಗಳು ವಾಸಿಯಾಗುತ್ತಿದ್ದು, ಚೇತರಿಕೆ ಹೆಚ್ಚಾಗಿದೆ.

Advertisement

ಸದ್ಯ ಚಳಿಗಾಲ ಇರುವುದರಿಂದ ಮಕ್ಕಳ ಸಹಿತ ಬಹುತೇಕರು ಶೀತ, ಕೆಮ್ಮು, ಜ್ವರ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಕೊರೊನಾವೋ ಅಥವಾ ಸಾಮಾನ್ಯ ಶೀತ ಜ್ವರವೋ ಎಂಬ ಗೊಂದಲ ಇದೆ. ಈ

ಅಂಶಗಳನ್ನು ಮನಗಂಡು ಸರಕಾರವು ಶನಿವಾರಮುಂದಿನ ಎರಡು ವಾರ ಸಣ್ಣಪುಟ್ಟ ಅನಾರೋಗ್ಯಕ್ಕೆ ಆಸ್ಪತ್ರೆಗೆ ಬರಬೇಡಿ ಎಂದು ಸೂಚನೆ ನೀಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಒಮಿಕ್ರಾನ್‌ ಸೋಂಕು ಅಷ್ಟೇನೂ ಅಪಾಯಕಾರಿಯಲ್ಲ, ಮನೆ ಮದ್ದಿನಿಂದ ವಾಸಿ ಮಾಡಿ ಕೊಳ್ಳಬಹುದು ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಆದರೆ ಹತ್ತಿರದ ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆಯಿರಿ; ಈ ವಿಚಾರದಲ್ಲಿ ಉದಾಸೀನ ಬೇಡ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಹೆಚ್ಚುತ್ತಿದೆ ಚೇತರಿಕೆ
3ನೇ ಅಲೆಯಲ್ಲಿ ಸೋಂಕುಪೀಡಿತರು 7 ದಿನ ಮಾತ್ರ ಚಿಕಿತ್ಸೆ /ಐಸೋಲೇಶನ್‌ನಲ್ಲಿದ್ದರೆ ಸಾಕು ಎಂದು ಸೂಚಿಸಲಾಗಿದೆ. ಜನವರಿ ಮೊದಲ ವಾರದಲ್ಲಿ ಒಮಿಕ್ರಾನ್‌ ಹೆಚ್ಚಾಗಿದ್ದು, ಅನಂತರ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಚೇತರಿಕೆ ಸಂಖ್ಯೆಯೂ ಹೆಚ್ಚಾಗುತ್ತಿದೆ.

Advertisement

ಇದನ್ನೂ ಓದಿ:ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ 20% ಸಮೀಪಕ್ಕೆ : ಇಂದು 13 ಸಾವು

ವೀಡಿಯೋ ಸಮಾಲೋಚನೆ ಅಗತ್ಯ
ಎಲ್ಲ ಕೋವಿಡ್‌ ಸೋಂಕುಪೀಡಿತರು ಮತ್ತು ಇತರ ರೋಗಿಗಳು ಆಸ್ಪತ್ರೆಗೆ ಬರಬೇಕಾಗಿಲ್ಲ. ಆದರೆ ಮೂತ್ರಪಿಂಡ ಮತ್ತು ಯಕೃತ್‌ ವೈಫ‌ಲ್ಯ, ಕ್ಯಾನ್ಸರ್‌, ಮಧುಮೇಹ ಮತ್ತಿತರ ಕಾಯಿಲೆ ಇರುವವರು ತಮ್ಮಷ್ಟಕ್ಕೆ ತಾವೇ ನಿರ್ಧರಿಸುವುದು ತಪ್ಪು. ಮನೆಯಿಂದಲೇ ತಮ್ಮ ವೈದ್ಯರೊಂದಿಗೆ ನಿಯಮಿತವಾಗಿ ವೀಡಿಯೋ ಸಮಾಲೋಚನೆ ನಡೆಸಬೇಕು. ಅವರು ನೀಡುವ ಸಲಹೆಗಳನ್ನು ಸರಿಯಾಗಿ ಪಾಲಿಸಬೇಕು. ಒಂದು ವೇಳೆ ಕೊರೊನಾ ಸೋಂಕುಪೀಡಿತರಾಗಿದ್ದರೆ ಸರಕಾರದ  ನಿಯಮಗಳನ್ನು ಅನುಸರಿಸಬೇಕು.
-ಡಾ| ಸುದರ್ಶನ್‌ ಬಲ್ಲಾಳ್‌, ಮಣಿಪಾಲ್‌ ಆಸ್ಪತ್ರೆ ಸಮೂಹ ಸಂಸ್ಥೆಗಳ ಮುಖ್ಯಸ್ಥರು.

ಮನೆಮದ್ದು ಅತ್ಯುತ್ತಮ ಆಯ್ಕೆ
ಪ್ರಕರಣಗಳು ಗರಿಷ್ಠ ಪ್ರಮಾಣದಲ್ಲಿ ಪತ್ತೆಯಾಗುತ್ತಿರುವುದರಿಂದ ಜನರಲ್ಲಿ ಭೀತಿ ಸಹಜ. ಶುಂಠಿ, ಕಾಳುಮೆಣಸು, ಜೀರಿಗೆ, ತುಳಸಿ, ಅರಿಶಿನ ಮತ್ತಿತರ ಸಂಬಾರ ಪದಾರ್ಥಗಳಲ್ಲಿ ವೈರಾಣು ನಾಶಕ ಗುಣಗಳಿವೆ. ನಿಯಮಿತವಾಗಿ ಇವುಗಳ ಕಷಾಯ ಸೇವಿಸ ಬೇಕು. ಇದಲ್ಲದೆ ಅರ್ಧ ಚಮಚ ಈರುಳ್ಳಿ ರಸ ವನ್ನು ಜೇನುತುಪ್ಪ ಬೆರೆಸಿ ಸೇವಿಸಬಹುದು. ಇದರೊಂದಿಗೆ ಪ್ರಾಣಾಯಾಮ, ನಡಿಗೆ ಹೆಚ್ಚಿಸಿ. ಇದು ಕೋವಿಡ್‌ ಮತ್ತು ಕೋವಿಡ್‌ ಅಲ್ಲದ ಎರಡೂ ವರ್ಗದ ರೋಗಿಗಳಿಗೆ ಅನ್ವಯ.
– ಡಾ| ಗಿರಿಧರ್‌ ಕಜೆ, ಮುಖ್ಯಸ್ಥರು, ಪ್ರಶಾಂತಿ ಆಯುರ್ವೇದಿಕ್‌ ಸೆಂಟರ್‌.

ಪ್ರಾಣಾಯಾಮ, ಯೋಗದಿಂದ ನಿಯಂತ್ರಣ
ನಿತ್ಯ ಬೆಳಗ್ಗೆ ಮತ್ತು ಸಂಜೆ ತಲಾ 20 ನಿಮಿಷ ಪ್ರಾಣಾಯಾಮ, ಅರ್ಧ ತಾಸು ಯೋಗಾಭ್ಯಾಸ ಮಾಡಬೇಕು. ಇದು ದೈಹಿಕ ಸಾಮರ್ಥ್ಯ ವೃದ್ಧಿಸುತ್ತದೆ. ಓಂಕಾರ ಧ್ಯಾನವು ಮಾನಸಿಕ ಸಾಮರ್ಥ್ಯ ಹೆಚ್ಚಿಸುತ್ತದೆ. ಸಿರಿಧಾನ್ಯಗಳನ್ನು ಸಾಧ್ಯವಾದಷ್ಟು ಹೆಚ್ಚು ಸೇವಿಸಬೇಕು. ಬಿಸಿ ಹಬೆಯನ್ನು ನಿಯಮಿತವಾಗಿ ಪಡೆಯಬೇಕು. ಇದರ ಜತೆಗೆ ರಾತ್ರಿ ಮಲಗುವ ಮುನ್ನ ಹಾಲಿಗೆ ಅರಿಶಿನ ಬೆರೆಸಿ ಸೇವಿಸಬೇಕು. ಕಷಾಯ ಕೂಡ ಉತ್ತಮ.
– ಡಾ| ಚೇತನ್‌, ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಆರ್‌ ನ್ಯಾಚರೋಪತಿ ಆಸ್ಪತ್ರೆ, ಬೆಂಗಳೂರು.

ಪ್ರತ್ಯೇಕವಾಗಿದ್ದು ನಿಯಮ ಪಾಲಿಸಿ
ಕೋವಿಡ್‌ ಸೋಂಕಿನಿಂದ ಬಳಲುತ್ತಿ ರುವವರು ಪ್ರತ್ಯೇಕವಾಗಿರುವುದು ಸಹಿತ ನಿಯಮಗಳ ಪಾಲನೆ ಮಾಡಬೇಕು. ಉಳಿದಂತೆ ಗಂಟಲು ನೋವು, ಶೀತ, ಕೆಮ್ಮು ಇರುವವರು 2-3 ಲಿಂಬೆಹಣ್ಣುಗಳನ್ನು ವಿವಿಧ ರೂಪದಲ್ಲಿ ಸೇವಿಸಬೇಕು. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಬೇಕು. ಸೋಂಕಿಗೀಡಾಗಿದ್ದರೆ ಆಸ್ಪತ್ರೆಗೆ ಬರಬೇಕೆಂದಿಲ್ಲ; ವೀಡಿಯೋ ಮೂಲಕ ಸಮಾಲೋಚನೆ ನಡೆಸಿ, ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆಯಬಹುದು.
-ಡಾ| ಪ್ರಕಾಶ್‌ ಕುಮಾರ್‌, ನಿವೃತ್ತ ಜಂಟಿ ನಿರ್ದೇಶಕರು, ಆಯುಷ್‌ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next