ಕಲಬುರಗಿ: ಹಬ್ಬ ಹರಿದಿನ, ಬಂದೋ ಬಸ್ತ್, ತುರ್ತು ಸೇವೆ ಮತ್ತು ಸುಗಮ ಸಂಚಾರ ನಿರ್ವಹಣೆಯಲ್ಲಿ ಸೇವಾ ಮನೋಭಾವ ದಿಂದ ತೊಡಗುವ ಗೃಹರಕ್ಷಕ ದಳದ ಸಿಬ್ಬಂದಿ ಕಾರ್ಯ ಮಾದರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಶ್ಲಾಘಿ ಸಿದರು.
ರವಿವಾರ ಇಲ್ಲಿನ ಜಿಲ್ಲಾ ಗೃಹರಕ್ಷಕ ದಳ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಖೀಲ ಭಾರತ ಗೃಹರಕ್ಷಕರ
ದಿನಾಚರಣೆಯನ್ನು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಕಲಬುರಗಿ ಗೃಹರಕ್ಷಕ ದಳ ದೊಡ್ಡದಾಗಿದೆ. ನಿಸ್ವಾರ್ಥ ಸೇವೆ ಸಲ್ಲಿಸಲು ಇಲ್ಲಿನ ದಳಕ್ಕೆ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಗೃಹರಕ್ಷಕ ದಳದವರಿಗೆ ನೀಡಲಾಗುವ ಗೌರವಧನ ಹೆಚ್ಚಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಇಲ್ಲಿನ ಗೃಹರಕ್ಷಕ ದಳಕ್ಕೆ ಬೇಕಾಗುವ ಎಲ್ಲ ರೀತಿಯ ನೆರವನ್ನು ಪೊಲೀಸ್ ಇಲಾಖೆಯಿಂದ ನೀಡಲಾಗುವುದು ಎಂದು ಅಭಯ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಗೃಹರಕ್ಷಕ ದಳದ ಸಮಾದೇಷ್ಠರಾದ ಸಂತೋಷಕುಮಾರ ಪಾಟೀಲ ಮಾತನಾಡಿ, 1967ರಲ್ಲಿ ಇಲ್ಲಿ ಗೃಹರಕ್ಷಕ ದಳ ಸ್ಥಾಪಿಸಿಲಾಗಿದೆ. 50 ವರ್ಷಗಳನ್ನು ಸೇವೆಯಲ್ಲಿ ಪೂರೈಸುವ ಮೂಲಕ ಗೃಹರಕ್ಷಕ ದಳವು ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಯಪ್ರಕಾಶ, ನಿವೃತ್ತ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಠ ಬಿ.ಮಹಾಂತೇಶ
ಮಾತನಾಡಿದರು. ಇದೇ ವೇಳೆ ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ 2017-18ನೇ ಸಾಲಿನ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಲಘು ರಕ್ಷಣೆಯಲ್ಲಿ ದ್ವಿತೀಯ ಸ್ಥಾನ ಪಡೆದ ಸೈದಪ್ಪ ಎಸ್.ಕೆ ನೇತೃತ್ವದ ತಂಡಕ್ಕೆ, ವಲಯ ಮಟ್ಟದ ಅಗ್ನಿಶಾಮಕದಲ್ಲಿ ದ್ವಿತೀಯ ಸ್ಥಾನ ಪಡೆದ ಸೋಮಸೇಖರ ನೇತೃತ್ವದ ತಂಡಕ್ಕೆ, ಪ್ರಸ್ತಕ ಸಾಲಿನಲ್ಲಿ ಉತ್ತಮ ಸಾಧನೆಗೈದು ಮುಂಬಡ್ತಿ ಹೊಂದಿರುವ ಮತ್ತು ನಿವೃತ್ತರಾದ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಗೃಹರಕ್ಷಕ ದಳದ ಉಪ ಸಮಾದೇಷ್ಠರಾದ ಮಲ್ಲಪ್ಪ ಪ್ರಸಕ್ತ ಸಾಲಿನ ಗೃಹರಕ್ಷಕ ದಳದ ಸಾಧನೆ ಬಿಂಬಿಸುವ ವಾರ್ಷಿಕ ವರದಿ ಮಂಡಿಸಿದರು. ರಾಮಣ್ಣಗೌಡ ಸ್ವಾಗತಿಸಿದರು. ಸಿದ್ರಾಮ ರಾಜಮಾನೆ ನಿರೂಪಿಸಿದರು.