Advertisement

ಲಸಿಕೆ ಪಡೆಯದವರ ಪತ್ತೆಗೆ ಮನೆ ಮನೆ ಭೇಟಿ; ದ.ಕ. ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ.

01:13 AM Jan 20, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಮಾಸಾಂತ್ಯ ದೊಳಗೆ ಮೊದಲ ಡೋಸ್‌ ಲಸಿಕೆ ಪೂರ್ಣಗೊಳಿಸಬೇಕು. ಲಸಿಕೆ ಪಡೆಯ ದವರನ್ನು ಪತ್ತೆಹಚ್ಚಲು ಪ್ರತೀ ಮನೆಯನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ತಮ್ಮ ಕಚೇರಿಯಲ್ಲಿ ಬುಧವಾರ ಆನ್‌ಲೈನ್‌ ಮುಖೇನ ಅಧಿಕಾರಿಗಳು ಹಾಗೂ ಸಿಬಂದಿ ಜತೆ ಸಭೆ ನಡೆಸಿದ ಅವರು, ಮೊದಲ ಡೋಸ್‌ ನೀಡಿಕೆಯಲ್ಲಿ ಜಿಲ್ಲೆ ಶೇ. 100ರ ಗುರಿ ತಲುಪಲೇಬೇಕು. ಅದಕ್ಕಾಗಿ ಆಶಾ – ಅಂಗನವಾಡಿ, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಸರ್ವರೂ ಹೆಚ್ಚು ಶ್ರಮಿಸಬೇಕು ಎಂದರು.

ಲಸಿಕೆ ಪಡೆದವರಿಗೆ ತೊಂದರೆಯಾಗದು
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ 3ರಿಂದ 4 ಸಾವಿರ ಕೋವಿಡ್‌ ಪ್ರಕರಣ ವರದಿಯಾಗುವ ಸಾಧ್ಯತೆ ಇದೆ. ಆದರೆ ಗಾಬರಿ ಅಗತ್ಯವಿಲ್ಲ, ಶೇ. 96ರಷ್ಟು ಮಂದಿಗೆ ಲಸಿಕೆ ನೀಡಿರುವ ಕಾರಣ ಸೋಂಕು ಕಂಡುಬಂದರೂ ಆಸ್ಪತ್ರೆಗೆ ದಾಖಲಾಗುವ ಗಂಭೀರತೆ ಇರುವುದಿಲ್ಲ. ಈಗಾಗಲೇ ಅಸ್ವಸ್ಥತೆ ಇರುವವರಿಗೆ ಲಸಿಕೆ ಅತ್ಯಂತ ಮುಖ್ಯ. ಬಾಕಿ ಇರುವ ಶೇ. 4ರಷ್ಟು ಜನರೇ ಕೋವಿಡ್‌ ಹಾಗೂ ಅದರ ರೂಪಾಂತರಿ ಒಮಿಕ್ರಾನ್‌ನಿಂದ ಬಾಧೆಗೆ ಒಳಗಾಗಿ ತೊಂದರೆ ಅನುಭವಿಸುವ ಸಾಧ್ಯತೆ ಇರುತ್ತದೆ ಎಂದರು.

ಲಸಿಕೆ ಪಡೆಯಲು ಹೆಚ್ಚಿನ ಪ್ರತಿರೋಧ ವ್ಯಕ್ತವಾಗುವಲ್ಲಿಗೆ ಖುದ್ದಾಗಿ ಭೇಟಿ ನೀಡುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು, 15 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಯುದೊœààಪಾದಿಯಲ್ಲಿ ಲಸಿಕೆ ಕೊಡಿಸಬೇಕು. ಜನಪ್ರತಿನಿಧಿಗಳು ಈ ಅಭಿಯಾನಕ್ಕೆ ಕೈ ಜೋಡಿಸಬೇಕು. ತಾಲೂಕು ಮಟ್ಟದಲ್ಲಿ ವಾಹನಗಳ ಅಗತ್ಯವಿದ್ದರೆ ತಹಶೀಲ್ದಾರರ ಮೂಲಕ ಪಡೆದುಕೊಳ್ಳುವಂತೆ ತಿಳಿಸಿದರು.

ಮತ್ತೆ ವೈದ್ಯರ ನಡೆ-ಹಳ್ಳಿಯ ಕಡೆ
ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ನಡೆ-ಹಳ್ಳಿಯ ಕಡೆ ಕಾರ್ಯಕ್ರಮ ಪುನಃ ಆರಂಭಿಸಬೇಕು. ಮಾಸ್ಕ್, ಗ್ಲೌಸ್‌ ಅಗತ್ಯವಿದ್ದರೆ ತಹಶೀಲ್ದಾರರ ಮೂಲಕ ಬೇಡಿಕೆ ಸಲ್ಲಿಸಬೇಕು. ಯಾವುದೇ ಕೊರತೆ ಕಂಡುಬರಬಾರದು ಎಂದರು.
ಕೌಟುಂಬಿಕ ಕಾರ್ಯಕ್ರಮಗಳು, ಮದುವೆ, ಹರಕೆ ಇತ್ಯಾದಿ ಪೂರ್ವ ನಿರ್ಧರಿತ ಕಾರ್ಯಕ್ರಮಗಳನ್ನು ಮಾರ್ಗ ಸೂಚಿಯಂತೆ ನಿರ್ವಹಿಸಬೇಕು. ಗ್ರಾಮ ಮಟ್ಟದಲ್ಲಿ ಬೃಹತ್‌ ಜಾತ್ರೆ, ಉರೂಸ್‌ ಇತ್ಯಾದಿಗೆ ಅನುಮತಿಯಿಲ್ಲ. ಆಯಾ ಸಮಿತಿಯವರು ಮಾತ್ರ ಸೇರಿ ನಡೆಸ ಬಹುದು. ಉಲ್ಲಂಘಿಸಿದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು.
ಡಿಎಚ್‌ಒ ಡಾ| ಕಿಶೋರ್‌ ಕುಮಾರ್‌, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು. ಸಹಾಯಕ ಆಯುಕ್ತರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬಂದಿ ಆನ್‌ಲೈನ್‌ನಲ್ಲಿ ಭಾಗವಹಿಸಿದ್ದರು.

Advertisement

ಮೊದಲ ಡೋಸ್‌: 95 ಸಾವಿರ ಮಂದಿ ಬಾಕಿ
ಜಿ.ಪಂ. ಸಿಇಒ ಡಾ| ಕುಮಾರ್‌ ಮಾತನಾಡಿ, ಬಂಟ್ವಾಳದಲ್ಲಿ 16 ಸಾವಿರ, ಬೆಳ್ತಂಗಡಿ 19 ಸಾವಿರ, ಮಂಗಳೂರು 21 ಸಾವಿರ, ಪುತ್ತೂರು 26 ಸಾವಿರ, ಸುಳ್ಯ 10 ಸಾವಿರ ಸೇರಿದಂತೆ ಜಿಲ್ಲೆಯಲ್ಲಿ ಮೊದಲ ಡೋಸ್‌ ಪಡೆಯಲು ಇನ್ನೂ 95 ಸಾವಿರ ಜನರು ಬಾಕಿ ಉಳಿದಿದ್ದಾರೆ. ಅವರಿಗೆ ಲಸಿಕೆ ನೀಡಲು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಉಪಕೇಂದ್ರಗಳಿಗೆ ಗುರಿ ನಿಗದಿಪಡಿಸಲಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next