Advertisement

ಗೃಹ ಬಂಧನ: ಛಾವಣಿಯಲ್ಲಿ ತೋಟಗಾರಿಕೆ

11:35 AM Apr 05, 2020 | Suhan S |

ಬೆಂಗಳೂರು: ಜನರ “ಗೃಹ ಬಂಧನ’ಕ್ಕೂ ನಗರದಲ್ಲಿರುವ ಮನೆಗಳ ಮೇಲ್ಛಾವಣಿಯಲ್ಲಿನ ಹಸಿರೀಕರಣಕ್ಕೂ ಸಂಬಂಧ ಇದೆಯೇ? – ನಿಕಟ ಸಂಬಂಧ ಇದೆ. ಯಾಕೆಂದರೆ, ಕ್ವಾರಂಟೈನ್‌ ನಂತರದ ದಿನಗಳಲ್ಲಿ ಜನ ತಾರಸಿಯಲ್ಲಿ ತೋಟಗಾರಿಕೆ, ಗಾರ್ಡನಿಂಗ್‌ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಹಸಿರಿನೊಂದಿಗೆ ಹೆಚ್ಚು ಹೊತ್ತು ಕಳೆಯುತ್ತಿರುವುದರ ಜತೆಗೆ ತಾಜಾ ತರಕಾರಿ-ಹಣ್ಣು ಬೆಳೆಯುವುದರಲ್ಲಿ ಬ್ಯುಸಿ ಆಗಿದ್ದಾರೆ ಎನ್ನುತ್ತಾರೆ ತಜ್ಞರು.

Advertisement

ತಪ್ಪದೆ ನಿತ್ಯ ಎರಡು ಹೊತ್ತು ನೀರುಣಿಸುವುದು, ಆ ಗಿಡಗಳ ಮಧ್ಯೆ ಕುಳಿತು ಹರಟುವುದು ಮತ್ತು ಶುದ್ಧಗಾಳಿ ಸೇವಿಸುವುದು, ಬೇಸಿಗೆ ಹಿನ್ನೆಲೆಯಲ್ಲಿ ಬಿಸಿಲಿನಿಂದ ಗಿಡಗಳನ್ನು ರಕ್ಷಿಸಲು ಮನೆಯಲ್ಲಿನ ಹಳೆಯ ಸೀರೆ, ಪಂಚೆಗಳ ಹೊದಿಕೆ ಮಾಡುವುದು, ಒಣಗಿದ ಎಲೆಗಳಿಂದ ಮಲ್ಟಿಂಗ್‌, ಕಾಲ-ಕಾಲಕ್ಕೆ ಗೊಬ್ಬರ ಹಾಕುವುದು ಸೇರಿದಂತೆ ಮನೆ ಮಕ್ಕಳಂತೆ ಜನ ತಾರಸಿ ತೋಟವನ್ನು ಪೋಷಿಸುತ್ತಿದ್ದಾರೆ. ಹೀಗಾಗಿ ಕೆಲವು ಛಾವಣಿಗಳು ಹಸಿರಿನಿಂದ ಕೂಡಿವೆ ಈ ಮೊದಲು ಬೆಳಗ್ಗೆಯಿಂದ ಸಂಜೆವರೆಗೂ ಕೆಲಸದ ಒತ್ತಡ, ಮಕ್ಕಳನ್ನು ತಯಾರು ಮಾಡುವುದು, ಶಾಲೆಗೆ ಬಿಡುವುದು, ಅಡಿಗೆ ಹೀಗೆ ಬಿಡುವಿಲ್ಲದ ವೇಳೆಯ ಮಧ್ಯೆ ಟೆರೇಸ್‌ನಲ್ಲಿ ತರಕಾರಿ ಬೆಳೆಯಲು ಆಸಕ್ತಿ ಇದ್ದರೂ ಪುರಸೊತ್ತಿರಲಿಲ್ಲ. ಆದರೆ, ಕಳೆದ 8-10 ದಿನಗಳಿಂದ ನಗರದ ಜೀವನಶೈಲಿ ಬದಲಾಗಿದ್ದು, ಹೊತ್ತು ಕಳೆಯುವುದು ಸವಾಲಾಗಿದೆ. ಮೊಬೈಲ್‌, ಮಕ್ಕಳೊಂದಿಗೆ ಆಟ, ವಾಯುವಿಹಾರದ ನಂತರವೂ ಸಮಯ ಉಳಿಯುತ್ತದೆ. ಅದನ್ನು ಜನ ಟೆರೇಸ್‌ ಗಾರ್ಡನ್‌ನಲ್ಲಿ ಕಳೆಯುತ್ತಿರುವುದು ಕಂಡುಬರುತ್ತಿದೆ.

ಶೇರ್‌ ಮಾಡಿ ಖುಷಿಪಡ್ತಾರೆ: “ಕಳೆದ ಒಂದು ವಾರದಿಂದ ಟೆರೇಸ್‌ ಗಾರ್ಡನ್‌ ಬಗ್ಗೆ ಮಾಹಿತಿ ಕೋರಿ ಜನರಿಂದ ಕರೆಗಳು ಬರುತ್ತಿವೆ. ಗಿಡಗಳನ್ನು ಬೆಳೆಯುವುದು ಹೇಗೆ? ಬಿಸಿಲಿನಿಂದ ರಕ್ಷಿಸಲು ಏನು ಮಾಡಬೇಕು? ಕೀಟಬಾಧೆ ಕಂಡುಬರುತ್ತಿದ್ದು, ಏನು ಸಿಂಪಡಣೆ ಮಾಡಬೇಕು? ಇಂತಹ ಹಲವು ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಇನ್ನು ತಾವೇ ಬೆಳೆದ ತರಕಾರಿಗಳ ಫೋಟೋಗಳನ್ನು ವಾಟ್ಸ್‌ ಆ್ಯಪ್‌ ಮೂಲಕ ಶೇರ್‌ ಮಾಡಿ ಖುಷಿಪಡುತ್ತಿದ್ದಾರೆ. ಎಂದು ಭಾರತೀಯ ತೋಟಗಾರಿಕೆ ಸಂಸ್ಥೆ (ಐಐಎಚ್‌ಆರ್‌) ಪ್ರಧಾನ ವಿಜ್ಞಾನಿ ಡಾ.ಸಿ. ಅಶ್ವಥ್‌ ತಿಳಿಸಿದರು.  “2 ತಿಂಗಳ ಹಿಂದೆ ನಡೆದ ತೋಟಗಾರಿಕೆ ಮೇಳದಲ್ಲಿ ಭಾಗ ವಹಿಸಿದ್ದವರೂ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ.

ಲಕ್ಷಕ್ಕೂ ಅಧಿಕ ಜನ ಆಸಕ್ತಿ? : ತಾರಸಿ ತೋಟಗಾರಿಕೆಗೆ ನಿತ್ಯ ಎರಡು ಹೊತ್ತು ನೀರು ಹಾಕಿ, ಉತ್ತಮವಾಗಿ ನಿರ್ವಹಣೆ ಮಾಡಬೇಕಾಗುತ್ತದೆ. ಕೆಲಸದ ಒತ್ತಡದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ. ಈಗ ಸಮಯ ಇದ್ದುದರಿಂದ ಅದರ ಪ್ರವೃತ್ತಿ ಕಂಡುಬರುತ್ತಿದೆ. ಎಷ್ಟು ಪ್ರಮಾಣ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೆ, ನಗರದಲ್ಲಿ ನೂರಕ್ಕೆ ನೂರರಷ್ಟು ಜನರಿಗೆ ಲಾಕ್‌ ಡೌನ್‌ನಿಂದ ಕೆಲಸವಿಲ್ಲ. ನಗರದ ಜನಸಂಖ್ಯೆ 1.30 ಕೋಟಿ. ಲಕ್ಷಾಂತರ ಕುಟುಂಬಗಳಿದ್ದು, ಶೇ. 1ರಷ್ಟು ತೆಗೆದುಕೊಂಡರೂ ಒಂದು ಲಕ್ಷಕ್ಕಿಂತ ಹೆಚ್ಚು ಜನ ಆಗುತ್ತಾರೆ. ಆ ಪ್ರಮಾಣವನ್ನು ನಾವು ತೆಗೆದುಕೊಳ್ಳ ಬಹುದು ಎಂದು ಡಾ.ಅಶ್ವಥ್‌ ಅಭಿಪ್ರಾಯಪಡುತ್ತಾರೆ.

 

Advertisement

ಬೆಲೆ ಏರಿಕೆ ಕಾರಣ :  ಜನರಿಗೆ ಆರಂಭದಲ್ಲಿ ಹಣ್ಣು-ತರಕಾರಿಗಾಗಿ ಪರದಾಡಿದ್ದೂ ಇದೆ. ದುಬಾರಿ ಬೆಲೆಗೆ ಖರೀದಿಸಿದ್ದೂ ಇದೆ. ಜನ ತಾರಸಿ ತರಕಾರಿ ಬೆಳೆಯಲು ಆಸಕ್ತಿ ತೋರಿಸಲು ಇದೂ ಒಂದು ಕಾರಣ ಇರಬಹುದು ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next