ನಂಜನಗೂಡು: ಏ.10ರಂದು ತಾಲೂಕಿನ ಬಹುತೇಕರ ಹೋಂ ಕ್ವಾರಂಟೈನ್ ಅವಧಿ ಮುಗಿಯಲಿದ್ದು, ಆದರೂ ಅವರೆಲ್ಲರೂ ಇನ್ನೂ 15 ದಿನಗಳವರಿಗೂ (ಏ.25) ಗೃಹ ಬಂಧನದಲ್ಲೇ ಮುಂದುವರಿಯಬೇಕಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಶಂಕರ್ ಹೇಳಿದರು.
ಮಂಗಳವಾರ ಸಂಜೆ ನಗರಕ್ಕೆ ಆಗಮಿಸಿದ ಅವರು ಕ್ವಾರಂಟೈನ್‌ನಲ್ಲಿ ಇರುವವರು ಮತ್ತು ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿರುವ ಸಾಹುಕಾರ ಲಿಂಗಣ್ಣನವರ ಛತ್ರಕ್ಕೆ ಭೇಟಿ ನೀಡಿ, ಅವರ ಯೋಗ ಕ್ಷೇಮ ವಿಚಾರಿಸಿದರು. ಈ ವೇಳೆ ಉದಯವಾಣಿಯೊಂದಿಗೆ ಮಾತನಾಡಿ, ಈಗ ಕ್ವಾರಂಟೈನ್‌ನಲ್ಲಿ ಇರುವವರ ಅವಧಿ ಮುಗಿದಿದ್ದರೂ ಮತ್ತೆ 15 ದಿನಗಳ ಕಾಲ ಗೃಹ ಬಂಧನ ದಲ್ಲೇ ಇರಬೇಕಾಗಿದೆ ಎಂದರು.
ನಂದಿನಿ ಹಾಲನ್ನು ಒಂದೇ ಪ್ರದೇಶಕ್ಕೆ ಸೀಮಿತಗೊಳಿಸುವುದು ಬೇಡ. ಎಲ್ಲಾ ಬಡವರಿಗೂ ಈ ಉಚಿತ ಹಾಲನ್ನು ವಿತರಣೆ ಮಾಡಬೇಕು ಎಂದು ನಗರಸಭಾ ಅಯುಕ್ತ ಕರಿಬಸವಯ್ಯಗೆ ಸೂಚಿಸಿದರು.
ಹಾಪ್‌ಕಾಮ್ಸ್ ಸಿಬ್ಬಂದಿಯಿಂದ ವ್ಯಾಪಾರ: ಉದಯವಾಣಿಯಲ್ಲಿ ಪ್ರಕಟವಾದ ಸುದ್ದಿಯನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಹಾಪ್‌ಕಾಮ್ಸ್ ಅಧಿಕಾರಿಗಳಿಗೆ ತಾವು ಆದೇಶ ನೀಡಿದ್ದು, ಬುಧವಾರದಿಂದ ಹಾಪ್‌ಕಾಮ್ಸ್ ಸಿಬ್ಬಂದಿ ನಂಜನಗೂಡಿನಲ್ಲೂ ವ್ಯಾಪಾರಕ್ಕಿಳಿಯಲಿದ್ದಾರೆ ಎಂದು ಹೇಳಿದರು.
ದೂರು ದಾಖಲಿಸಿ: ಮಾಸ್ಕ್ ವಿತರಿಸಿ ಎಲ್ಲರೂ ಕಡ್ಡಾಯವಾಗಿ ಉಪಯೋಗಿಸುವಂತೆ ನೋಡಿಕೊಳ್ಳಬೇಕು. ಸಂಕಷ್ಟದಲ್ಲೂ ಹಣ ಮಾಡುವ ನ್ಯಾಯ ಬೆಲೆ ಅಂಗಡಿಗಳ ವಿರುದ್ಧ ದೂರು ದಾಖಲಿಸಬೇಕು. ತಾಲೂಕಿನ ಕೆಲವು ನ್ಯಾಯ ಬೆಲೆ ಅಂಗಡಿಗಳ ವಿರುದ್ಧ ಈಗಾಗಲೇ ಆರೋಪಗಳು ಕೇಳಿ ಬರುತ್ತಿವೆ ಎಂದು ಸೂಚಿಸಿದರು. ತಾಪಂ ಇಒ ಶ್ರೀಕಂಠರಾಜ್ ಅರಸ್ ಹಾಜರಿದ್ದರು.