Advertisement

“ಆರ್ಥಿಕ ಅಭಿವೃದ್ಧಿಗೆ ಗೃಹ ಉತ್ಪನ್ನ ಸಹಕಾರಿ’

07:25 AM Aug 05, 2017 | |

ಮಡಿಕೇರಿ : ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕು ಸಾವಯವ ಕೃಷಿ ಸಹಕಾರಿ ನಿಯಮಿತ ಹಾಗೂ ಕೊಡಗು ನೇಚರ್ ಬೆಸ್ಟ್‌ ಫ‌ುಡ್‌ ಕ್ಲಸ್ಟರ್‌ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು (ನಬಾರ್ಡ್‌) ಅನುದಾನಿತ ಯೋಜನೆಯಾದ ಗ್ರಾಮೀಣ ಮಾರಾಟ ಮಳಿಗೆಗೆ ಬುಧವಾರ ಚಾಲನೆ ದೊರೆಯಿತು.  

Advertisement

ವಿರಾಜಪೇಟೆ ಪಟ್ಟಣ ಚಿಕ್ಕಪೇಟೆಯಲ್ಲಿ ನಬಾರ್ಡ್‌ ವಿಶೇಷ ಯೋಜಯಡಿ ನಿರ್ಮಾಣಗೊಂಡಿರುವ ಗ್ರಾಮೀಣ ಮಾರಾಟ ಮಳಿಗೆಯ ಉದ್ಘಾಟನೆಯನ್ನು ನಬಾರ್ಡಿನ ಜಿಲ್ಲಾ ಅಭಿವೃದ್ಧಿಯ ಸಹಾಯಕ ಮಹಾ ಪ್ರಬಂಧಕರಾದ ಮುಂಡಂಡ ಸಿ.ನಾಣಯ್ಯ ಅವರು ನೆರವೇರಿಸಿದರು.
   
ಬಳಿಕ  ಮಾತನಾಡಿದ  ಮುಂಡಂಡ   ಸಿ.ನಾಣಯ್ಯ ಅವರು ಕೊಡಗು ಜಿಲ್ಲೆಯು ಸಂಪದ್ಭರಿತವಾಗಿದ್ದು, ಇಲ್ಲಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಜಂಟಿ ಭಾದ್ಯತಾ ಗುಂಪುಗಳ ಮುಖಾಂತರ ಬ್ಯಾಂಕುಗಳಿಂದ ಆರ್ಥಿಕ ಸಹಕಾರ ಪಡೆದು ಗೃಹೋತ್ಪನ್ನ ಜೊತೆ, ವಿವಿಧ ರೀತಿಯ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಂಡು, ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. 

ಹಂತಹಂತವಾಗಿ ಆರ್ಥಿಕತೆ ಹೆಚ್ಚಿಸಿಕೊಳ್ಳಲು ಸಂಘಟಿತರಾಗಿ ತಾಲೂಕು ಸಾವಯವ ಕೃಷಿಕರ ಸಂಘ ಹಾಗೂ ಕೊಡಗು ನೇಚರ್ ಬೆಸ್ಟ್‌ ಪುಡ್‌ ಕ್ಲಸ್ಟರ್‌ ಇದರ ಎಲ್ಲಾ ಸದಸ್ಯರು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ನಬಾರ್ಡ್‌ ಜಿಲ್ಲಾ ಸಹಾಯಕ ಮಹಾ ಪ್ರಬಂಧಕರು ಮೆಚ್ಚುಗೆ ವ್ಯಕ್ತಪಡಿಸಿದರು. 
  
ಜಿಲ್ಲೆಯ ವಿವಿಧ ಗೃಹ ಉತ್ಪನ್ನಗಳಿಗೆ ಅಪಾರ ಬೇಡಿಕೆಯಿದ್ದು, ಈ ಬೇಡಿಕೆಯನ್ನು ಪೂರೈಸಲು ಸಂಘಟಿತವಾಗಿ ಪ್ರಯತ್ನಿಸಿದ್ದೇ ಆದಲ್ಲಿ ರಾಜ್ಯ ಮಟ್ಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಡುವುದು ಮಾತ್ರವಲ್ಲ, ವಿಶ್ವ ಮಟ್ಟದಲ್ಲೂ ಪ್ರತಿಷ್ಠಿತ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ ಎಂದರು. 

ಗ್ರಾಮೀಣ ಗೃಹ ಉತ್ಪನ್ನಗಳ ಮಾರಾಟವು ದೇಶದ ಆರ್ಥಿಕ ಸೂಚ್ಯಂಕದ ಶೇ. 29ರಿಂದ 30 ಇದ್ದು, ಗ್ರಾಮೀಣ ಭಾಗದ ಜನರು ವಿಶೇಷವಾಗಿ ಸ್ವಸಹಾಯ ಸಂಘಗಳು, ಜಂಟಿ ಭಾದ್ಯತಾ ಗುಂಪುಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸದಸ್ಯರುಗಳು ಪ್ರಾಮಾಣಿಕತೆಯಿಂದ, ಬದ್ಧತೆಯಿಂದ ಪ್ರಯತ್ನಿಸಿದ್ದಲ್ಲಿ ಒಟ್ಟು ಆರ್ಥಿಕ ಸೂಚ್ಯಂಕಕ್ಕೆ ಅಪಾರ ಕೊಡುಗೆ ನೀಡಿದಂತಾಗುತ್ತದೆ ಎಂದು ಮುಂಡಂಡ ಸಿ. ನಾಣಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. 
 
ಕಾರ್ಯಕ್ರಮದಲ್ಲಿ ಕಾರ್ಪೊರೇಷನ್‌ ಬ್ಯಾಂಕಿನ ನಿವೃತ್ತ ಮಾರ್ಗದರ್ಶನ ವ್ಯವಸ್ಥಾಪಕ ಕೇಕಡ ದೇವಯ್ಯ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಬಂಗಾರು ಗುಪ್ತಾಜಿ, ಕಾರ್ಪೊರೇಷನ್‌ ಬ್ಯಾಂಕ್‌ ಚಿಕ್ಕಪೇಟೆ ಶಾಖೆಯ ವ್ಯವಸ್ಥಾಪಕಿ ಕೆ.ಎಸ್‌. ಕಮಲಾಕ್ಷಿ, ಪ.ಪಂ.ಸದಸ್ಯ  ಪಾಂಡಂಡ ರಜನ್‌ ಮೇದಪ್ಪ, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಸಜು ಜಾರ್ಜ್‌, ಕೊಡಗು ನೇಚರ್ ಬೆಸ್ಟ್‌ ಫ‌ುಡ್‌ ಕ್ಲಸ್ಟರ್‌ನ ಅಧ್ಯಕ್ಷರಾದ ಫ್ಯಾನ್ಸಿ ಗಣಪತಿ ಮಾತನಾಡಿದರು. 
 
ನಡಿಕೇರಿಯಂಡ ಕರುಂಬಯ್ಯ, ಸಾವಯವ ಕೃಷಿಕರ ಸಂಘದ ಅಧ್ಯಕ್ಷರಾದ ಬಿ.ಪಿ. ಮುದ್ದಣ್ಣ ಇತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next