ಕಾರ್ಕಳ: ಗೋಹತ್ಯೆ, ಮತಾಂತರ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದ ಕಡಿವಾಣ ಹಾಕುವಲ್ಲಿ ಬಿಜೆಪಿ ಮತ್ತಷ್ಟು ಕಠಿನ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕಾರ್ಕಳ ಬಿಜೆಪಿ ಕಚೇರಿಗೆ ಭೇಟಿ ನೀಡಿದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗೋಹತ್ಯೆ, ಮತಾಂತರ ತಡೆಯುವಲ್ಲಿ ಸರಕಾರ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗುವ ನಿಟ್ಟಿನಲ್ಲಿ ಕಾರ್ಯವೆಸಗಲಾಗುವುದು ಎಂದ ಅವರು ಪಕ್ಷದ ಬೆಳವಣಿಗೆ ಯಲ್ಲಿ ಆರ್‌ಎಸ್‌ಎಸ್ ಸಂಘದ ಕಾರ್ಯಕರ್ತರ ಪಾತ್ರವಿದೆ. ಸಂಘ ಮೂಲದಿಂದ ಬಂದ ಜನಪ್ರತಿನಿಧಿಗಳ ಕೊಡುಗೆ ಅಪಾರ. ಸಂಘದ ಸಾಮಾನ್ಯ ಕಾರ್ಯಕರ್ತನಿಗೂ ಪಕ್ಷದ ದೊಡ್ಡ ಜವಾಬ್ದಾರಿ ನೀಡಿ ಜನಸೇವೆಗೆ ಅವಕಾಶ ಮಾಡಿಕೊಟ್ಟಿದೆ. ಇದರ ಮೂಲಕ ದೇಶಾಭಿವೃದ್ಧಿ ಹಾಗೂ ನಾಡು ಕಟ್ಟುವ ಕೆಲಸದಲ್ಲಿ ಎಲ್ಲರೂ ತೊಡಗಿಸಿಕೊಳ್ಳೋಣ. ಅಭಿವೃದ್ಧಿ, ದೇಶಕ್ಕಾಗಿ ದುಡಿಯುವ ಪಕ್ಷವೊಂದಿದ್ದರೆ ಅದು ಬಿಜೆಪಿ ಪಕ್ಷ ಮಾತ್ರ ಎಂದರು.
ಇದನ್ನೂ ಓದಿ:ಬಸ್- ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
ಹಿರಿಯರಾದ ಬೋಳ ಪ್ರಭಾಕರ ಕಾಮತ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ, ರಾಜ್ಯ ಗೇರು ಬೀಜ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರಕುಮಾರ್, ರೇಶ್ಮಾ ಉದಯ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಗಳಾದ ನವೀನ್ ನಾಯಕ್, ಜಯರಾಮ ಸಾಲಿಯಾನ್, ಕಾರ್ಯದರ್ಶಿ ಅನಂತ ಕೃಷ್ಣ ಶೆಣೈ, ಮಂಡಲ ವಕ್ತಾರ ಹರೀಶ್ ಶೆಣೈ, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.