Advertisement

ದಾರಿ ತಪ್ಪಿಸಿದ ಗೃಹ ಸಚಿವರು ಈಗ ಆತ್ಮಸಾಕ್ಷಿಯಿಂದ ರಾಜೀನಾಮೆ ನೀಡಲಿ: ಡಿ.ಕೆ. ಶಿವಕುಮಾರ್

06:11 PM Jul 04, 2022 | Team Udayavani |

ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ವಿಧಾನ ಮಂಡಲದ ದಾರಿ ತಪ್ಪಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕೂಡಲೇ ರಾಜೀನಾಮೆ ನೀಡಬೇಕು. ಈ ಪ್ರಕರಣವನ್ನು ಮುಚ್ಚಿಹಾಕಲು ಯಾರೆಲ್ಲಾ ರಾಜಕಾರಣಿಗಳು ಒತ್ತಡ ಹೇರಿದ್ದರೋ ಅವರೆಲ್ಲರ ಹೆಸರನ್ನು ಆತ್ಮಸಾಕ್ಷಿಯಿಂದ ಬಹಿರಂಗಪಡಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

Advertisement

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಅವರ ಬಂಧನ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದಷ್ಟು ಮಟ್ಟಿಗೆ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಭಾರತೀಯ ಪೊಲೀಸ್ ಸೇವೆಗೂ (IPS) ಭ್ರಷ್ಟಾಚಾರ ವಿಸ್ತರಿಸಿದ್ದು, ಇಂದು ಪಿಎಸ್ಐ ನೇಮಕಾತಿಯಲ್ಲಿ ಭಾಗಿಯಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನವಾಗಿದ್ದಾರೆ. ಈ ವಿಚಾರವನ್ನು ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ, ಎಲ್ಲವೂ ಪಾರದರ್ಶಕವಾಗಿದೆ ಎಂದು ಗೃಹ ಸಚಿವರು ಸದನದ ದಾರಿ ತಪ್ಪಿಸಿದ್ದರು. ಇನ್ನು ನ್ಯಾಯಾಲಯಕ್ಕೆ ಅಧಿಕಾರಿಗಳು ವಿವಿಧ ವರದಿಗಳನ್ನು ಸಲ್ಲಿಕೆ ಮಾಡಿದ್ದು, ನ್ಯಾಯಾಲಯ ಈಗಾಗಲೇ ಸಿಐಡಿ ತನಿಖೆ ಮೇಲೆ ಅಸಮಾಧಾನ ವ್ಯಕ್ತಪಡಿಸಿದೆ. ನೀವು ಸರಿಯಾಗಿ ತನಿಖೆ ಮಾಡುತ್ತೀರೋ ಅಥವಾ ಬೇರೆಯವರಿಗೆ ತನಿಖೆಯನ್ನು ವಹಿಸಬೇಕೋ ಎಂಬ ಎಚ್ಚರಿಕೆಯನ್ನು ನೀಡಿದೆ ಎಂದರು.

ಇನ್ನು ಹೈಕೋರ್ಟ್ ಈ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಹೇಳಿದೆ. ಇದು ಸಮಾಜಕ್ಕೆ ಭಯೋತ್ಪಾದನೆ ಕೃತ್ಯ ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿರುವುದನ್ನು ಮಾಧ್ಯಮದಲ್ಲಿ ನೋಡಿದ್ದೇವೆ. ಕೇವಲ ಪಿಎಸ್ ಐ ಮಾತ್ರವಲ್ಲ, ಎಲ್ಲ ಇಲಾಖೆಗಳ ನೇಮಕದಲ್ಲಿ ಅಕ್ರಮ ನಡೆದಿರುವ ಬಗ್ಗೆ ವರದಿಗಳು ಬಂದಿವೆ. ಅಡ್ವೊಕೇಟ್ ಜನರಲ್ ಅವರು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಗೌಪ್ಯವಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವುದೇಕೆ?ಎಂದು ಪ್ರಶ್ನಿಸಿದರು.

ಸರ್ಕಾರ ನೇಮಕಾತಿ ಅಕ್ರಮದ ಅಂಗಡಿ ತೆಗೆದಿದ್ದು, ವ್ಯಾಪಾರ ಮಾಡಲು ಬಂದವರನ್ನು ಮಾತ್ರ ನೀವು ಹಿಡಿದಿದ್ದೀರಿ. ಅಂಗಡಿ ತೆರೆದವರನ್ನು, ಇದಕ್ಕೆ ಬೆಂಬಲ ನೀಡಿರುವವರನ್ನು ಬಂಧಿಸಿ ಎಂದು ಆಗ್ರಹಿಸಿದ್ದೆವು. ಈ ಅಕ್ರಮದ ಬಗ್ಗೆ ವಿರೋಧ ಪಕ್ಷದ ಶಾಸಕರು ಪ್ರಶ್ನೆ ಮಾಡಿದರೆ, ಅವರಿಗೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ಸರ್ಕಾರ ಕೊಡಬಾರದ ಕಿರುಕುಳ ನೀಡಿತು. ರಾಜ್ಯದ ಇತಿಹಾಸದಲ್ಲೇ ಇಂತಹ ಘಟನೆ ಮೊದಲ ಬಾರಿಗೆ ನಡೆದಿದೆ.ಇಲ್ಲಿ ಅಕ್ರಮ ನಡೆದಿರುವ ಕಾರಣಕ್ಕೆ ಪೊಲೀಸ್ ಅಧಿಕಾರಿಯ ಬಂಧನವಾಗಿದೆಯಲ್ಲವೇ? ಮಾಗಡಿಯ ಅಭ್ಯರ್ಥಿಯ ವಿಚಾರಣೆ ಮಾಡದಂತೆ ಯಾರು ಬೆಂಬಲವಾಗಿ ನಿಂತರು, ಆ ಅಭ್ಯರ್ಥಿಯನ್ನು ಬಿಟ್ಟು ಕಳುಹಿಸಿದ್ದು ಯಾಕೆ, ನಂತರ 20 ದಿನ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಿ ಮತ್ತೆ ಆತನನ್ನು ವಿಚಾರಣೆಗೆ ಕರೆತಂದದ್ದು, ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದು ಬಹಿರಂಗವಾಗಬೇಕು ಎಂದರು.

ಈ ಪ್ರಕರಣದಲ್ಲಿ ಅಕ್ರಮ ನಡೆದಿಲ್ಲ ಎಂದು ಗೃಹಸಚಿವರು ಸದನವನ್ನು ತಪ್ಪು ದಾರಿಗೆ ಎಳೆದರು. ಗೃಹಸಚಿವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಆಗ ಮಾತ್ರ ಆ ಸ್ಥಾನಕ್ಕೆ ಗೌರವ ಉಳಿಯುತ್ತದೆ ಎಂದರು.

Advertisement

ಕೇವಲ ಪರೀಕ್ಷೆ ಬರೆದ 50 ಸಾವಿರ ಅಭ್ಯರ್ಥಿಗಳ ವಿಚಾರ ಮಾತ್ರವಲ್ಲ. ಅಕ್ರಮವಾಗಿ ಹಣ್ಣು ತಿಂದವರನ್ನು ಮಾತ್ರ ಹಿಡಿದ್ದಾರೆ. ಅಕ್ರಮವಾಗಿ ಹಣ್ಣು ಮಾರಿದವರನ್ನು ಹಿಡಿಯಲಿಲ್ಲ. ದೇಶದಲ್ಲಿ ರಾಜ್ಯ ಪೊಲೀಸರಿಗೆ ಉತ್ತಮ ಹೆಸರಿತ್ತು. ಆದರೆ ಈ ಪ್ರಕರಣದಿಂದ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುವ ಕೆಲಸವನ್ನು ಸರ್ಕಾರ ಮಾಡಿದೆ. ಈ ವಿಚಾರವಾಗಿ ನಾಳೆ ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡುತ್ತೇವೆ. ಗೃಹ ಸಚಿವರು ಸ್ವಾಭಿಮಾನಿಗಳಿದ್ದು, ಇಂದು ಸಂಜೆ ಒಳಗೆ ಅವರೇ ರಾಜೀನಾಮೆ ನೀಡುತ್ತಾರೆ ಎಂದು ನಂಬಿದ್ದೇನೆ. 572 ಅಭ್ಯರ್ಥಿಗಳ ಪೈಕಿ 270 ಅಭ್ಯರ್ಥಿಗಳ ನೇಮಕದಲ್ಲಿ ಅಕ್ರಮವಾಗಿದೆ ಎಂದು ವರದಿ ನೋಡಿದ್ದೆ. ಕುಮಾರಸ್ವಾಮಿ ಅವರು ಈ ಪ್ರಕರಣದಲ್ಲಿ 300 ಕೋಟಿ ಅವ್ಯವಹಾರ ನಡೆದಿದೆ ಎಂದು ಹೇಳಿದ್ದಾರೆ. ಅವರು ಸರ್ಕಾರ ನಡೆಸಿರುವವರು, ಅವರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಲೆಕ್ಕಾಚಾರ ಗೊತ್ತಿರುತ್ತದೆ. ಮಾಹಿತಿ ಇಲ್ಲದೆ ಅವರು ಮಾತನಾಡಿರುವುದಿಲ್ಲ. ನನ್ನ ಲೆಕ್ಕದ ಪ್ರಕಾರ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ನಡೆದಿದೆ. ಮಲ್ಲೇಶ್ವರ ಕ್ಷೇತ್ರದ ಅಭ್ಯರ್ಥಿಗೆ ಸಿಂಗಲ್ ಆರ್ಡರ್ ಆಗಿದೆ. ಆ ಬಗ್ಗೆ ಈಗಲೇ ಮಾತನಾಡುವುದಿಲ್ಲ’ ಎಂದರು.

ಪರೀಕ್ಷೆ ನಡೆಸಬೇಕೆ, ಬೇಡವೆ ಎಂಬ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈಗ ಆ ನಿರ್ಧಾರಕ್ಕೆ ಬರುವುದು ಬೇಡ. ಯುವಕರ ಉದ್ಯೋಗದ ಬಗ್ಗೆ ನಾವು ಚಿಂತನೆ ನಡೆಸುತ್ತಿದ್ದು, ಅವರ ಭವಿಷ್ಯದ ಬಗ್ಗೆ ದೀರ್ಘಾವಧಿ ಚಿಂತನೆ ನಡೆಸಬೇಕೇ ಹೊರತು, ಅಲ್ಪಾವಧಿಗೆ ಅಲ್ಲ. ನಾನು ಕೂಡ ಮಂತ್ರಿ ಆಗಿದ್ದಾಗ 30 ಸಾವಿರ ಜನರನ್ನು ನೇಮಕಾತಿ ಮಾಡಿದ್ದೆ. ನನಗೂ ಈ ರೀತಿ ಮಾಡಲು ಸಾಕಷ್ಟು ಒತ್ತಡ ಬಂದಿತ್ತು. ನಾನು ಅದಕ್ಕೆಲ್ಲ ಒಪ್ಪಲಿಲ್ಲ’ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next