ಬೆಳಗಾವಿ: ಲಾಠಿ ಪ್ರಹಾರ ಎಂದರೆ ಮೃದುವಾಗಿ ಹೊಡೆ ಯಲು ಸಾಧ್ಯವೇ? 10 ಸಾವಿರ ಜನರನ್ನು ಸುವರ್ಣಸೌಧಕ್ಕೆ ಬಿಟ್ಟು ಬಿಡಬೇಕಿತ್ತೇ? ಅವರಿಗೆ ಮುತ್ತಿಡ ಬೇಕಿತ್ತೇ? ಇದು ಜವಾಬ್ದಾರಿಯುತ ಸರಕಾರ. ಕಾನೂನು ಭಂಗ ಮಾಡಿದರೆ ಬಿಡುವುದಿಲ್ಲ ಎಂದು ಗೃಹ ಸಚಿವ ಡಾ| ಪರಮೇಶ್ವರ್ ಪ್ರತಿಪಾದಿಸಿದರು.
ಇದಕ್ಕೆ ತಿರುಗೇಟು ನೀಡಿದ ವಿಪಕ್ಷ ನಾಯಕ ಆರ್. ಅಶೋಕ್, ಹೌದು, ಮುತ್ತು ಕೊಡಬೇಕಿತ್ತು. ತುತ್ತು ಕೊಡುವ ರೈತರಿಗೆ ಮುತ್ತು ಕೊಡುವ ಬದಲು ಲಾಠಿ ಎತ್ತಬಹುದೇ ಎಂದು ಪ್ರಶ್ನಿಸಿದರು.
10 ಸಾವಿರ ಜನರು ಬಂದರೆ ಬಿಡಬೇಕಾ ಎನ್ನು ತ್ತೀರಾ? ನಮ್ಮ ಅವಧಿಯಲ್ಲಿ 2 ಲಕ್ಷ ಜನ ಸೇರಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಜನಪ್ರತಿನಿಧಿಗಳೂ ಭಾಗಿ ಯಾಗಿದ್ದರು. ನಮ್ಮ ಸರಕಾರ ಕೊಟ್ಟ ಮಾತಿನಂತೆ ಮೀಸಲಾತಿಯನ್ನೂ ನಿಗದಿಪಡಿಸಿತು. ಪರಿಸ್ಥಿತಿಯನ್ನೂ ನಿಭಾಯಿಸಿತ್ತು ಎಂದು ಸರಕಾರಕ್ಕೆ ನೆನಪು ಮಾಡಿಕೊಟ್ಟರು.
ನೀವು ಮಾಡಿದ್ದು ಮರೆತಿರಾ: ಪರಮೇಶ್ವರ್ ಪ್ರಶ್ನೆ
“ಈ ಹಿಂದೆ ಮಾದಿಗ ದಂಡೋರ ಸಮುದಾಯ ವಿವಿಧ ಬೇಡಿಕೆಗಳ ಈಡೇರಿಸುವಂತೆ ಬಂದವರಿಗೆ ನೀವು, ಬಿಜೆಪಿಯವರು ಏನು ಮಾಡಿದಿರಿ; ಸ್ವಲ್ಪ ನೆನಪಿಸಿಕೊಳ್ಳಿ. ಹಾವೇರಿಯಲ್ಲಿ ರೈತನ ಮೇಲೆ ಗೋಲಿಬಾರ್ ಮಾಡಿದಿರಿ. ಘಟನೆಯಲ್ಲಿ ಮೃತಪಟ್ಟ ರೈತನ ಬಗ್ಗೆ ನಿಮಗೆ ಪಶ್ಚಾತ್ತಾಪ ಆಗಲಿಲ್ಲ. ನಿಮ್ಮ ಅಧಿಕಾರಾವಧಿಯಲ್ಲಿ 3 ಬಾರಿ ಲಾಠಿಚಾರ್ಜ್ ಆಗಿದೆ. ಅದನ್ನು ಮರೆತುಬಿಟ್ಟಿರಾ’ ಎಂದು ಡಾ| ಪರಮೇಶ್ವರ್ ವಿಪಕ್ಷ ಸದಸ್ಯರನ್ನು ಕೇಳಿದರು.
ಇದಕ್ಕೂ ಮುನ್ನ ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ವಿಧಾನಮಂಡಲದ ಕೆಳಮನೆ ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿ ಗದ್ದಲಕ್ಕೆ ಕಾರಣವಾಯಿತು.