Advertisement

ಉಗ್ರನಿಗೆ ಆಶ್ರಯ ನೀಡಿದವರಾರು? ಬೆಂಬಲಕ್ಕೆ ಯಾರಿದ್ದಾರೆ? ಈ ಕುರಿತು ಗೃಹ ಸಚಿವರು ಹೇಳಿದ್ದೇನು

05:26 PM Jun 08, 2022 | Team Udayavani |

ದಾವಣಗೆರೆ: ಜಮ್ಮು-ಕಾಶ್ಮೀರ ಪೊಲೀಸರಿಂದ ಬಂಧಿಸಲ್ಪಟ್ಟ ಉಗ್ರನ ಬಗ್ಗೆ ರಾಜ್ಯ ಪೊಲೀಸರು ವಿಶೇಷ ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

Advertisement

ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಉಗ್ರನಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿದವರು ಯಾರು? ಆತನ ಬೆಂಬಲಕ್ಕೆ ಯಾರಿದ್ದಾರೆ? ಎಂಬುದರ ಬಗ್ಗೆ ರಾಜ್ಯ ಪೊಲೀಸರು ತನಿಖೆ ನಡೆಸಿದ್ದಾರೆ ಎಂದರು.

ಶಿಕ್ಷಣ ಸಚಿವ ನಾಗೇಶ್ ಅವರ ಮನೆ ಎದುರು ನಡೆದ ಪ್ರತಿಭಟನೆ ಪ್ರಜಾಪ್ರಭುತ್ವ ಮಾದರಿಯ ಪ್ರತಿಭಟನೆ ಅಲ್ಲ. ಈ ಪ್ರಕರಣದಲ್ಲಿ ಭಾಗಿಯಾದವರು ವಿದ್ಯಾರ್ಥಿಗಳೂ ಅಲ್ಲ.

ಅಂದು ನಡೆಸಿದ ಪ್ರತಿಭಟನೆಯಲ್ಲಿ ತಿಪಟೂರಿನ ಒಬ್ಬ ಬಿಟ್ಟರೆ, ಅಲ್ಲಿಯ ಸ್ಥಳೀಯರು ಯಾರೂ ಇಲ್ಲ. ಬೆಂಗಳೂರು, ಹಾಸನ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬಂದಿರುವ ಎನ್‌ಎಸ್‌ಯುಐ ಕಾರ್ಯಕರ್ತರು ಅದರಲ್ಲಿದ್ದರು. ಏಕಾಏಕಿ ಸಚಿವರ ಮನೆಗೆ ನುಗ್ಗಿ ಅವರ ಚೆಡ್ಡಿ ತಂದು ಬೆಂಕಿ ಹಚ್ಚಿದ್ದಾರೆ. ಪ್ರತಿಭಟನೆ ನಡೆಸಲು ಯಾರಿಂದಲೂ ಪೂರ್ವಾನುಮತಿಯೂ ಪಡೆದಿಲ್ಲ. ಈ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕ್ರಮವಾಗಲಿದೆ. ಇದು ಪ್ರಜಾಪ್ರಭುತ್ವ ಒಪ್ಪುವ ಹೋರಾಟವಲ್ಲ ಎಂದರು.

ಇದನ್ನೂ ಓದಿ : ಜುವಾರಿ ಜಾಗದಲ್ಲಿ ರಿಯಲ್‍ ಎಸ್ಟೇಟ್‍ಗಾಗಿ ಸರ್ಕಾರದಿಂದ ಹಕ್ಕುಪತ್ರ: ವಿಜಯ್ ಸರ್ದೇಸಾಯಿ ಆರೋಪ

Advertisement

ಔರಾದ್ಕರ್ ವರದಿ ಜಾರಿಗೂ ಮೊದಲು ಪೊಲೀಸ್ ಸೇವೆಗೆ ಸೇರ್ಪಡೆಯಾಗಿರುವ ಪೊಲೀಸರಿಗೆ ಒಂದಿಷ್ಟು ಅನ್ಯಾಯವಾಗಿದೆ ಎಂದು ಹೇಳಲಾಗುತ್ತಿದೆ. ಈ ರೀತಿಯ ಸಮಸ್ಯೆ ಎಲ್ಲ ಇಲಾಖೆಗಳಲ್ಲಿಯೂ ಇದೆ. ಔರಾದ್ಕರ್ ವರದಿ ಶಿಫಾರಸು ಮಾಡುವ ವೇತನ, ಭತ್ಯೆಯನ್ನು ಹಿಂದಿನವರಿಗೂ ಕೊಟ್ಟರೆ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಹೊರೆಯಾಗಲಿದೆ. ಆದ್ದರಿಂದ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದರ ಜತೆಗೆ 2006 ಮತ್ತು 2010 ರಲ್ಲಿ ಸೇವೆಗೆ ಸೇರಿದ ಸಿಬ್ಬಂದಿಗೆ ಒಂದೇ ವೇತನ ಶ್ರೇಣಿ ಇದ್ದು ಇದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಿಎಸ್‌ಐ ನೇಮಕಾತಿ ಪರೀಕ್ಷೆ ಒಂದೇ ಅಲ್ಲ ಅನೇಕ ನೇಮಕಾತಿ ಪರೀಕ್ಷೆಗಳಲ್ಲಿ ಈ ಹಿಂದಿನಿಂದಲೂ ಅಕ್ರಮ ನಡೆದುಕೊಂಡು ಬಂದಿದೆ. ಅಕ್ರಮದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ. ಪಾರದರ್ಶಕ ತನಿಖೆ ನಡೆಸಲಾಗುತ್ತಿದ್ದು ಪೊಲೀಸ್ ಉಪಾಧ್ಯಕ್ಷರು ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.. ತಪ್ಪಿತಸ್ಥರಿಗೆ ತಕ್ಕ ಪಾಠ ಕಲಿಸುವ ಕೆಲಸ ಮಾಡಲಾಗುತ್ತಿದೆ. ಇನ್ನು ಮುಂದೆ ಇಂತಹ ಅಕ್ರಮಗಳಲ್ಲಿ ಭಾಗಿಯಾಗುವವರು ಒಮ್ಮೆ ಎದೆ ಮುಟ್ಟಿ ನೋಡಿಕೊಳ್ಳಬೇಕು. ಆ ರೀತಿಯಲ್ಲಿ ಇಲಾಖೆ ಕಠಿಣ ಕ್ರಮ ಇಲಾಖೆ ಕೈಗೊಂಡಿದೆ ಎಂದರು.

ಹಿಜಾಬ್ ಸೇರಿದಂತೆ ಅನೇಕ ವಿವಾದಗಳನ್ನು ಪೊಲೀಸರು ಉತ್ತಮವಾಗಿ ನಿಭಾಯಿಸಿದ್ದಾರೆ. ಹುಬ್ಬಳ್ಳಿ ಗಲಾಟೆಯನ್ನು ಎರಡೂವರೆ ಗಂಟೆಯಲ್ಲಿ ನಿಯಂತ್ರಿಸಲಾಗಿದೆ. ಮೈಸೂರಿನ ಅತ್ಯಾಚಾರ ಪ್ರಕರಣದ ಹಾಗೂ ಶಿವಮೊಗ್ಗದ ಕೊಲೆ ಪ್ರಕರಣದ ಆರೋಪಿಗಳನ್ನು ೪೮ ಗಂಟೆಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕರ್ನಾಟಕದಲ್ಲಿ ಉತ್ತಮ ಪೊಲೀಸ್ ವ್ಯವಸ್ಥೆ ಇದೆ. ಎಲ್ಲಿಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಿಲ್ಲ ಎಂದರು.

ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಈ ಸಂದರ್ಭದಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next