ಶಿವಮೊಗ್ಗ: ಶಿಕಾರಿಪುರದಲ್ಲಿ ಸೋಮವಾರ ನಡೆದ ಘಟನೆಯಲ್ಲಿ ಕೆಲ ಜನ ರಾಜಕೀಯ ಕಾರಣದಿಂದ ಗಲಾಟೆ ಮಾಡಿರುವ ಮಾಹಿತಿಯಿದೆ. ಚುನಾವಣೆಯಲ್ಲಿ ಬೇಳೆ ಬೇಯಿಸಿಕೊಳ್ಳಲು ಕೆಲ ಪಕ್ಷದವರು ಪ್ರಯತ್ನಿಸುತ್ತಿರುವ ಮಾಹಿತಿಯಿದೆ. ನಿನ್ನೆ ಘಟನೆಯಲ್ಲಿ ನಾಲ್ಕೈದು ಕೇಸುಗಳು ಇದ್ದವರು ಇದ್ದಾರೆ. ಅವರೇ ಪ್ರಚೋದನೆ ಮಾಡಿರುವ ಸಾಧ್ಯತೆಯಿದೆ. ಪೊಲೀಸರು ನಿನ್ನೆ ತಾಳ್ಮೆ ವಹಿಸಿದ್ದಾರೆ. ತಾವು ಪೆಟ್ಟು ತಿಂದು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿಕಾರಿಪುರದಲ್ಲಿ ನಡೆದ ಘಟನೆ ದುರಾದೃಷ್ಟಕರ. ಕೆಲವರು ತಪ್ಪು ತಿಳುವಳಿಕೆಯಿಂದ ಪ್ರಚೋದನೆ ನೀಡಿದ್ದರಿಂದ ಈ ಘಟನೆ ನಡೆದಿದೆ. ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರು ಬಂಜಾರ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸೂರಗೊಂಡನಕೊಪ್ಪ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಈ ಸಮಾಜದ ಗೌರವ ಹೆಚ್ಚಾಗುವಂತ ಕೆಲಸ ಯಡಿಯೂರಪ್ಪ ಮಾಡಿದ್ದಾರೆ. ಆದರೆ ಅವರ ಮನೆ ಮೇಲೆ ಕಲ್ಲು ತೂರಲಾಗಿದೆ. ಆದರೆ ಕಲ್ಲು ತೂರಿದವರ ಮೇಲೆ ಕ್ರಮ ಕೈಗೊಳ್ಳಬೇಡಿ. ನಾನು ಅವರ ಜೊತೆ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ ಪೊಲೀಸರ ಮೇಲೆಯೂ ಹಲ್ಲೆಯಾಗಿರುವುದು ನನಗೆ ನೋವು ತಂದಿದೆ ಎಂದರು.
ಮೂರು ಜನ ಪೊಲೀಸರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ದೊಂಬಿ ಎಬ್ಬಿಸಿ ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಆದರೂ ನಿನ್ನೆ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಯಾರೂ ಕೂಡ ನಿನ್ನೆ ಘಟನೆಯಿಂದ ಪ್ರಚೋದನೆಗೊಳ್ಳಬಾರದು. ರಾಜ್ಯ ಸರ್ಕಾರ ಮೀಸಲಾತಿ ಮಾಡಿದ ಅದು ಎಲ್ಲರಿಗೂ ಅನುಕೂಲವಾಗುವಂತಿದೆ ಇದನ್ನು ಅಧ್ಯಯನ ಮಾಡಿನೋಡಬೇಕು. ಅನ್ಯಾಯವಾಗಿದ್ದರೆ ಸಿಎಂ ತೆರೆದ ಮನಸಿನಿಂದಿದ್ದಾರೆ ಬದಲಾವಣೆ ಮಾಡುತ್ತಾರೆ. ವೈಜ್ಞಾನಿಕ ಮೀಸಲಾತಿ ನೀಡುವ ಕೆಲಸ ಸಿಎಂ ಮಾಡಿದ್ದಾರೆ. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಒಂದು ವೇಳೆ ಹೋದರೆ ತೊಂದರೆಯಾಗುತ್ತದೆ. ಅಂಥವರಿಗೆ ಶಿಕ್ಷೆ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.
ಪೊಲೀಸರಿಗೆ ಪೆಟ್ಟು ಬಿದ್ದಿದೆ. ಹೀಗಾಗಿ ಕೆಲವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದ್ದಕ್ಕಿದ್ದಂತೆ ಅಮಾಯಕ ಜನ ಏನೋ ಮಾಡುತ್ತಾರೆ ಎಂದು ಉಹೆ ಮಾಡಲು ಸಾಧ್ಯವಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.