Advertisement

ಮನೆ ಬದುಕೇ ಜಾನಪದ-ಜಾನಪದವೇ ಸಂಸ್ಕೃತಿ

08:04 PM Nov 01, 2021 | Team Udayavani |

ಹಾರೂಗೇರಿ: ನೆಲ ಮೂಲದ ಸಂಸ್ಕೃತಿಯೇ ಜಾನಪದವಾಗಿದ್ದು, ಅದುವೇ ನಮ್ಮ ಮನೆಯ ಸಂಪತ್ತು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ|ಬಿ.ವಿ.ವಸಂತಕುಮಾರ ಹೇಳಿದರು ಇಲ್ಲಿನ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಬಿ.ಆರ್‌.ದರೂರ ಪದವಿ ಕಾಲೇಜಿನಲ್ಲಿ ರವಿವಾರ ಪ್ರಾಚಾರ್ಯ ಬಿ.ಎ.ಜಂಬಗಿ ಅವರ “ನುಡಿ ಜಾನಪದ’ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

Advertisement

ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಅದು ನೆಲದ ಬದುಕಿನ ಜೀವಕೋಶ. ಅದುವೇ ಸಂಸ್ಕೃತಿ. ಕನ್ನಡದ ಪ್ರತಿಯೊಂದು ಪದದಲ್ಲಿಯೂ ನೆಲಮೂಲ, ಬದುಕಿನ ಸುಗಂಧವಿದೆ. ಆ ಗಂಧದ ವಿವಿಧ ಆಯಾಮಗಳನ್ನು ಸಂಕಲಿಸಿದ ಶ್ರೇಯಸ್ಸು ಪ್ರಾಚಾರ್ಯ ಜಂಬಗಿಯವರ ನುಡಿ ಜಾನಪದ ಕೃತಿಗೆ ಸಲ್ಲುತ್ತದೆ. ಈ ನುಡಿ ಜಾನಪದವು ಕನ್ನಡ ಸಾಹಿತ್ಯ, ಸಂಸ್ಕೃತಿ ಅಧ್ಯಯನಕ್ಕೆ ಮೂಲ ಆಕರವಾಗಿದ್ದು, ಪ್ರತಿಯೊಂದು ಪದದ ಹಿನ್ನೆಲೆಯಲ್ಲಿ ಅಧ್ಯಯನ ಕೈಗೊಳ್ಳುವ ಎಲ್ಲ ಸಾಧ್ಯತೆಗಳು ಗ್ರಂಥದಲ್ಲಿ ಅನಾವರಣಗೊಂಡಿವೆ.

ನಿಘಂಟು ರಚನೆ ಬಹುದೊಡ್ಡ ಸವಾಲು. ಅದರಲ್ಲೂ ಜಾನಪದದ ಸೊಲ್ಲುಗಳಿಂದ ಕೂಡಿದ ನಮ್ಮ ಆಡು ನುಡಿಗಳನ್ನು ಗ್ರಂಥಸ್ಥಗೊಳಿಸುವುದು ಮತ್ತೂಂದು ಸವಾಲು. ಎರಡೂ ಸವಾಲುಗಳನ್ನು ಸಮರ್ಥವಾಗಿ ಸ್ವೀಕರಿಸುವುದರ ಮೂಲಕ ಉತ್ತರ ಕರ್ನಾಟಕದ ಆಡು ಭಾಷೆಯ ಅಪೂರ್ವ ನಿಘಂಟು ನುಡಿ ಜಾನಪದವಾಗಿದೆ ಎಂದು ಡಾ.ವಸಂತಕುಮಾರ ಶ್ಲಾಘಿಸಿದರು. ಖ್ಯಾತ ವಿಮರ್ಶಕ ಡಾ|ವೈ.ಎಂ.ಯಾಕೋಳ್ಳಿ ಕೃತಿ ಪರಿಚಯಿಸಿ ಮಾತನಾಡಿ, ಅದರ ವಿವಿಧ ಆಯಾಮಗಳನ್ನು ತೆರೆದಿಟ್ಟರು. ನಾಲ್ಕು ವರ್ಷಗಳ ಜಂಬಗಿಯವರ ತಪಸ್ಸಿನ ಫಲ ಈ ನುಡಿ ಜಾನಪದದಲ್ಲಿ ಫಲಿಸಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಆರ್‌ಸಿಯು ಕನ್ನಡ ಅಧ್ಯಾಪಕರ ಪರಿಷತ್‌ ಅಧ್ಯಕ್ಷ ಡಾ|ಎಚ್‌.ಐ.ತಿಮ್ಮಾಪೂರ ಮಾತನಾಡಿ, ಆಸ್ತಿ, ಅಂತಸ್ತು ಕುಟುಂಬಕ್ಕೆ ವರ್ಗಾವಣೆಯಾಗುತ್ತವೆ. ವರ್ಗಾವಣೆಯಾಗದ ಸಂಪತ್ತು ಪುಸ್ತಕಗಳು. ಜನಪದದಲ್ಲಿ ಜೀವನವೇ ಪ್ರೀತಿಯ ಹಂದರವಾಗಿದೆ ಎಂದ ಅವರು, ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಜಂಬಗಿಯವರು ಸಾಹಿತ್ಯದಲ್ಲಿ ಒಲವು ತೋರುವುದರ ಜತೆಗೆ ನಿಘಂಟು ರಚನೆಗೆ ಕೈ ಹಾಕಿದ್ದು, ಭಾಷಾ ಪ್ರಾಧ್ಯಾಪಕರಿಗೆ ಮಾದರಿಯಾಗಿದೆ ಎಂದರು.

ನುಡಿ ಜಾನಪದ ಗ್ರಂಥಕತೃ ಬಿ.ಎ.ಜಂಬಗಿ ಅವರನ್ನು ಸತ್ಕರಿಸಿ, ಅಭಿನಂದಿಸಲಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ|ವಿ.ಎಸ್‌.ಮಾಳಿ ಅವರನ್ನು ರಾಣಿ ಚನ್ನಮ್ಮ ವಿವಿ ಪ್ರಾಚಾರ್ಯರ ಸಂಘದ ವತಿಯಿಂದ ಡಾ|ಎಚ್‌ .ಐ.ತಿಮ್ಮಾಪೂರ ಸತ್ಕರಿಸಿದರು. ಸಂಸ್ಥೆ ಹಿರಿಯ ಕಾರ್ಯದರ್ಶಿ ವಿ.ಎಚ್‌.ಪವಾರ, ಆರ್‌.ಎಂ.ಗಸ್ತಿ, ಡಾ|ಪಿ.ಬಿ.ಕಲಿcಮಡ್‌, ರಾಜಶೇಖರ ಜಂಬಗಿ, ಚಂದ್ರಶೇಖರ ಜಂಬಗಿ, ಸಚೀನ ಮೊರೆ, ಆದೇಶ ಜಂಬಗಿ, ಡಾ|ಶೀಲಾ ಜಂಬಗಿ, ಡಾ|ಸಿ.ಆರ್‌.ಗುಡಸಿ, ಎಸ್‌.ಎಲ್‌.ಬಾಡಗಿ, ಬಸವರಾಜ ತುಳಸಿಗೇರಿ, ಪ್ರೊ|ಬಿ.ಬಿ.ಮುಗಳಿಹಾಳ, ಡಾ|ರತ್ನಾ ಬಾಳಪ್ಪನವರ, ಡಾ|ಸಿದ್ದಣ್ಣ ಉತ್ನಾಳ, ಘಣಶ್ಯಾಮ ಭಾಂಡಗೆ, ಡಾ|ಪಿ.ಬಿ.ನರಗುಂದ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Advertisement

ಆಧಾರ ಹಿರಿಯ ನಾಗರಿಕರ ಕಲ್ಯಾಣ ಸಂಸ್ಥೆ ಹಾಗೂ ಬಿ.ಆರ್‌ .ದರೂರ ಸಂಶೋಧನ ಸಂಸ್ಥೆ ಕಾರ್ಯಕ್ರಮವನ್ನು ಸಂಯೋಜಿಸಿದ್ದವು. ಡಾ|ವಿ.ಎಸ್‌.ಮಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ|ವಿನೋದ ಕಾಂಬಳೆ ನಿರೂಪಿಸಿದರು. ಶರಣ ಐ.ಆರ್‌.ಮಠಪತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next