ಮಂಗಳೂರು: ನಗರದ ಯೆಯ್ಯಾಡಿ ದಂಡಕೇರಿ ಸಮೀಪ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಯೆಯ್ಯಾಡಿ ದಂಡಕೇರಿ ನಿವಾಸಿ ಸಾಗರ್ (23) ಬಂಧಿತ ಆರೋಪಿ.
ಆರೋಪಿಯು ಕಳವುಗೈದ 1.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆ. 31ರಂದು ಕಳವು ಪ್ರಕರಣ ದಾಖಲಾಗಿದ್ದು, ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಮೂರು ದಿನಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್ ನಿರ್ದೇಶನದಂತೆ ಎಸಿಪಿ ಧನ್ಯಾ ನಾಯಕ್, ಕಂಕನಾಡಿ ನಗರ ಠಾಣಾ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ಪಿಎಸ್ಐ ವಿನಾಯಕ ಭಾವಿಕಟ್ಟಿ, ಸಿಬಂದಿಗಳಾದ ಎಚ್.ಸಿ. ಜಯಾನಂದ, ರಾಘವೇಂದ್ರ, ಗಂಗಾಧರ್, ರಾಜೆಸಾಬ ಮುಲ್ಲಾ ಮತ್ತು ಚೇತನ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.