Advertisement

ತ್ಯಾಜ್ಯ ವಸ್ತುಗಳಿಂದ ಮನೆಯ ಅಲಂಕಾರ

11:25 PM Jul 05, 2019 | mahesh |

ಮನೆ ಎಂದ ಮೇಲೆ ಅಲಂಕಾರಕ್ಕಾಗಿ ಹೊಸ ಹೊಸ ವಸ್ತುಗಳನ್ನು ಖರೀದಿಸುವುದು ಸಾಮಾನ್ಯ. ಆದರೆ ಮನೆಯಲ್ಲಿರುವ ತ್ಯಾಜ್ಯವಸ್ತುಗಳನ್ನೇ ಬಳಸಿಕೊಂಡು ಅಲಂಕಾರ ಮಾಡಿದರೆ ಮನೆಯ ಅಂದ ಹೆಚ್ಚಾಗುವುದು ಮಾತ್ರವಲ್ಲ ಮನೆಯಲ್ಲಿರುವ ಪ್ರತಿ ವಸ್ತುವಿನ ಮೇಲೂ ವಿಶೇಷ ನಂಟು ಬೆಸೆದುಕೊಳ್ಳುವುದು.

Advertisement

ದಿನನಿತ್ಯ ನಾವು ಬಳಸಿ ಬಿಸಾಡುವ ಅದೆಷ್ಟೋ ಉತ್ಪನ್ನಗಳಿರುತ್ತವೆ. ಅಂತವುಗಳಿಗೆ ಹೊಸ ರೂಪ ಒದಗಿಸಿ ಮನೆಯನ್ನು ಅಲಂಕಾರ ಮಾಡುವುದು ಕೂಡ ಒಂದು ರೀತಿಯ ಕ್ರಿಯಾಶೀಲತೆ. ಮಾತ್ರವಲ್ಲದೇ ಅತಿ ಕಡಿಮೆ ವೆಚ್ಚದಲ್ಲಿ ಮನೆಯ ಸೌಂದರ್ಯ ಹೆಚ್ಚಿಸಲು ಇರುವ ಇನ್ನೊಂದು ದಾರಿ.

ಗೆರಟೆಗೆ ಹೊಸ ರೂಪ
ಸಾಮಾನ್ಯವಾಗಿ ಅಡುಗೆಗೆ ನಾವು ಕಾಯಿತುರಿಯನ್ನು ಬಳಸಿ ಗೆರಟೆಯನ್ನು ಬಿಸಾಡುತ್ತೇವೆ. ಹಳ್ಳಿಗಳಲ್ಲಿ ಇದನ್ನು ಒಲೆ ಉರಿಸಲು ಬಳಸುತ್ತಾರೆ. ಆದರೆ ಪೇಟೆಗಳಲ್ಲಿ ಇದು ಕಸದ ಬುಟ್ಟಿ ಸೇರುತ್ತದೆ. ಆದರೆ ಇದನ್ನು ಎಸೆಯುವ ಬದಲು ಚೆಂದದ ಆಕೃತಿಗಳನ್ನು ಮಾಡಬಹುದು. ಮಕ್ಕಳಿಗೆ ಪೆನ್ನು ಪೆನ್ಸಿಲ್ಗಳನ್ನು ಇಡಲು ಸ್ಟಾಂಡ್‌ಗಳ ರೂಪ ಕೊಡಬಹುದು. ಇಲ್ಲವಾದಲ್ಲಿ ಇದಕ್ಕೆ ಪೈಂಟ್ ಮಾಡಿ ಕಪ್‌ ಆ್ಯಂಡ್‌ ಸಾಸರ್‌, ಮಗ್ಗ ಅಥವಾ ಶೋಫಿಸ್‌ ಆಗಿ ಬಳಸಬಹುದು. ಗೆರಟೆಗೆ ಬಣ್ಣ ಬಳಿದು ಮಣಿಗಳನ್ನು ಅಂಟಿಸಿ ಅಲಂಕಾರಕ್ಕೆ ಬಳಸಿಕೊಳ್ಳ ಬಹದು.

ಬಾಟಲ್ನ ಅಂದ ಹೆಚ್ಚಿಸಿ
ಸ್ಟಾಫ್ಟ್ ಡ್ರಿಂಕ್ಸ್‌, ಬಿಯರ್‌ ಬಾಟಲಿಗಳು ಖಾಲಿಯಾದ ಮೇಲೆ ಅವುಗಳಿಗೆ ಬಣ್ಣ ಹಚ್ಚಿ ಅದರಲ್ಲಿ ಪ್ಲಾಸ್ಟಿಕ್‌ ಹೂ, ಗಿಡಗಳನ್ನು ಇಡಬಹುದು. ಇದರಿಂದ ಬಾಟಲಿಗಳ ತ್ಯಾಜ್ಯ ಕಡಿಮೆಯಾಗಿ ಮರುಬಳಕೆಯಾದಂತಾಗುತ್ತದೆ. ಇನ್ನು ಪ್ಲಾಸ್ಟಿಕ್‌ ಬಾಟಲ್ಗಳನ್ನು ಅರ್ಧ ಕತ್ತರಿಸಿ ಚಿಕ್ಕ ಚಿಕ್ಕ ಗಿಡಗಳನ್ನು ನೆಡಬಹುದು. ಮನೆಯ ಒಳಾಂಗಣ, ಹೊರಾಂಗಣದ ಗಾರ್ಡನಿಂಗ್‌ಗೆ ಬಳಸಬಹುದು.

ಪೈಂಟ್ ಡಬ್ಬಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ಬೇರೆ ಬೇರೆ ಬಣ್ಣಗಳನ್ನು ನೀಡಿ ಪ್ಲಾಸ್ಟಿಕ್‌ ಹೂಗಳನ್ನು ಇಟ್ಟು ಡೈನಿಂಗ್‌ ಟೇಬಲ್ ಅಥವಾ ಲೀವಿಂಗ್‌ ರೂಮ್‌ನ ಟೇಬಲ್ಗಳಲ್ಲಿ ಇಡಬಹುದು ಅಥವಾ ಇದರಲ್ಲಿ ಗಿಡಗಳನ್ನೂ ನೆಡಬಹುದು. ಅಲ್ಲದೇ ಇದಕ್ಕೆ ಬಣ್ಣ ಹೋಗದ ಪೈಂಟ್ ಮಾಡಿ ಮಗ್‌ಗಳಾಗಿ ಬಳಸಬಹುದು.

Advertisement

ನ್ಯೂಸ್‌ ಪೇಪರ್‌ ಬಿಸಾಡದಿರಿ
ದಿನ ಓದಿ ಬಿಸಾಡುವ ನ್ಯೂಸ್‌ ಪೇಪರ್‌ಗಳಿಂದ ಮನೆಯ ಅಂದವನ್ನು ಹೆಚ್ಚಿಸಬಹುದು. ಗೋಡೆಗಳ ಅಲಂಕಾರಕ್ಕೆ ಹಣವನ್ನು ವ್ಯಯಿಸುವ ಬದಲು ಸುದ್ದಿ ಪತ್ರಿಕೆಯಿಂದಲೇ ಅಲಂಕರಿಸಬಹುದು. ಅದಕ್ಕೆ ಬಣ್ಣ ಹಚ್ಚಿ ಚಿಕ್ಕದಾಗಿ ಹೂ, ಎಲೆಯಾಕೃತಿಯಲ್ಲಿ ಕತ್ತರಿಸಿ, ಬಳ್ಳಿ ಕಟ್ಟಿ ಅದನ್ನು ಸೂಜಿಯಲ್ಲಿ ಪೋಣಿಸಿ ಅದಕ್ಕೆ ಚೆಂದದ ರೂಪ ನೀಡಬಹುದು.

ಸಿಡಿಯ ಅಲಂಕಾರಿಕ ರೂಪ
ಹಳೆಯ ಸಿಡಿಗಳನ್ನು ಬಿಸಾಡುವುದಕ್ಕಿಂತ ಅದರ ಸುತ್ತಲು ಮಣಿಗಳನ್ನು ಜೋಡಿಸಿ, ಸಣ್ಣದಾದ ದಾರದಲ್ಲಿ ಅದನ್ನು ಒಂದರ ಹಿಂದೆ ಒಂದನ್ನು ಸೇರಿಸಿ ವಿದ್ಯುತ್‌ ದೀಪದ ಬೆಳಕು ಜಾಗದಲ್ಲಿ ಇಟ್ಟರೆ ರಾತ್ರಿ ವೇಳೆ ಮನೆ ಸುಂದರ ವಾಗಿ ಕಾಣುತ್ತದೆ. ಅಲ್ಲದೇ ನೆಲದ ಮೇಲೆ ರಂಗೋಲಿ ಹಾಕಿ ಅದರ ಸುತ್ತ ಅಥವಾ ಮಧ್ಯೆ ಸಿಡಿಗಳನ್ನಿಟ್ಟು ಅದರ ಮೇಲೆ ಬಾಟಲ್ಗಳ ಮುಚ್ಚಳವನ್ನಿಡಬೇಕು. ಇದರ ಮೇಲೆ ಮೇಣದ ಬತ್ತಿಯಿಂದ ದೀಪ ಉರಿಸಿದರೆ ರಂಗೋಲಿಯ ಸೌಂದರ್ಯ ವೃದ್ಧಿಯಾಗುವುದು. ರಾತ್ರಿ ವೇಳೆ ಹೆಚ್ಚು ಆಕರ್ಷಕವಾಗಿ ಕಾಣುವುದು.

ಮನೆಯಲ್ಲಿ ಹಾಳಾದ ಏಣಿಯಿದ್ದರೆ ಅದಕ್ಕೆ ಬಣ್ಣ ಹಚ್ಚಿ ಬಾತ್‌ರೂಮ್‌ಗಳ ಟವೆಲ್ ಇಡಲು ಅಥವಾ ಫೋಟೊ ಫ್ರೇಮ್‌ಗಳನ್ನು ನೇತಾಡಿ ಸಲು ಬಳಕೆ ಮಾಡಬಹುದು.

ಹೀಗೆ ಮನೆಯಲ್ಲಿ ಬೇಡವಾದ ಸಾಮಗ್ರಿ ಗಳು ಇರುವುದು ಸಾಮಾನ್ಯ. ಇವುಗಳಿಗೆ ಸುಂದರ ರೂಪ ನೀಡಿ ಮನೆಯ ಅಲಂಕಾರಕ್ಕೆ ಬಳಸಿಕೊಳ್ಳಬಹುದು.

ಬಟ್ಟೆ, ಟೀ ಕಪ್‌ ಮರುಬಳಕೆ
ಹಳೆಯ ಬಟ್ಟೆಗಳಿಂದ ಮ್ಯಾಟ್‌ಗಳನ್ನು ಮಾಡಬಹದು. ಹಾಗೆಯೇ ಚಿಕ್ಕ ಚಿಕ್ಕ ಬಟ್ಟೆಗಳನ್ನು ಕೂಡಿಸಿ ಕರ್ಟ್‌ನ್‌ಗಳನ್ನು ಮಾಡಬಹುದು. ಹಳೆ ಸೀರೆಗಳನ್ನು ಸೇರಿಸಿ ದಪ್ಪದ ಬೆಡ್‌ಶೀಟ್ ತಯಾರಿಸಬಹುದು.

ಮನೆಯಲ್ಲಿ ಕಟ್ಟಾದ ಟೀ ಕಪ್‌ಗಳಿದ್ದರೆ ಅದರ ಕೆಳಗಿನಿಂದ ತೂತು ಮಾಡಿ ಅದರಲ್ಲಿ ಚಿಕ್ಕ ಬಲ್ಬ್ ಇಟ್ಟು ಮನೆಯ ಹೊರಗೆ ಶೃಂಗರಿಸಬಹುದು.

•ಪ್ರೀತಿ ಭಟ್ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next