ಮನೆ ಕಟ್ಟುವುದು ಸುಲಭದ ಮಾತಲ್ಲ ಅದಕ್ಕೆ ಅನೇಕ ವರ್ಷಗಳ ಪರಿಶ್ರಮ, ಕನಸುಗಳನ್ನು ಧಾರೆ ಎರೆಯಲಾಗಿರುತ್ತದೆ. ಮನೆ ಕಟ್ಟಿದರೆ ಮಾತ್ರ ಸಾಲದು ಮನೆಯನ್ನು ಎಷ್ಟು ಅಂದವಾಗಿರಿಸಿಕೊಳ್ಳುತ್ತಿರಿ ಎನ್ನುವುದು ನಮ್ಮ ಕ್ರಿಯಾಶೀಲತೆಯ ಮೇಲೆ ನಿಂತಿರುತ್ತದೆ.
ಹೊಸ ಮನೆಗೆ ಅಲಂಕಾರ ಮಾಡಬೇಕು ಎಂದೆನಿಲ್ಲ ಹಳೆ ಮನೆಯಲ್ಲಿಯೇ ಹೊಸ ರೀತಿಯ ಬದಲಾವಣೆ ಮಾಡಬಹುದು. ಆದರೆ ಅಲಂಕಾರ ಯಾವ ರೀತಿಯಲ್ಲಿ ಆಗಿರಬಹುದು ಎಂಬುದು ಮಾತ್ರ ನಿಮ್ಮ ಚಾಕಚಕ್ಯತೆಗೆ ಹಿಡಿದಿರುವ ಕೈಗನ್ನಡಿ. ಹೆಚ್ಚು ಹಣ ವ್ಯಯಿಸಿ ಮನೆಗೆ ವಸ್ತುಗಳನ್ನು ತಂದು ಹಾಕಿ ಅಲಂಕಾರ ಮಾಡುವುದು ಸಾಮಾನ್ಯ. ಆದರೆ ಮನೆಯನ್ನು ಇಷ್ಟ ಪಡುವವರು ಇದಕ್ಕಿಂತಲೂ ಹೊರತಾಗಿ ಯಾವ ರೀತಿಯ ಬದಲಾವಣೆ ಮಾಡಬಹುದು ಎಂಬುವುದು ನಗರದಲ್ಲಿ ಸಾವಿರಾರು ಉದಾಹಣೆಗಳು ಕಾಣ ಸಿಗುತ್ತವೆ.
ಇತ್ತೀಚೆಗೆ ನಗರಗಳಲ್ಲಿ ತ್ಯಾಜ್ಯಗಳಿಂದ ಮಾಡಿದ ಸಾಮಗ್ರಿಗಳನ್ನು ಮನೆಯ ಅಲಂಕಾರಕ್ಕಾಗಿ ಬಳಸಿಕೊಳ್ಳುವುದು ವಿಶೇಷ. ಮನೆಯ ಅಲಂಕಾರಕ್ಕಾಗಿ ಹಣ ವ್ಯಯಿಸುವುದಕ್ಕಿಂತ ಮನೆಯಲ್ಲಿ ಬಳಸಿ ಬಿಸಾಡುವ ತುಂಬಾ ವಸ್ತುಗಳನ್ನು ಬಳಸಿ ಕಲಾಕೃತಿ ಮಾಡುವ ಮೂಲಕ ತ್ಯಾಜ್ಯಗಳ ಮರುಬಳಕೆ ಮಾಡಬಹುದು.
ಉದಾಹರಣೆಗೆ, ನೀರಿನ ಬಾಟಲ್‌ಗಳನ್ನು ಬಳಸಿ ನಾವು ವಿವಿಧ ಕಲಾಕೃತಿ ಮಾಡಿ ಮನೆಯ ಸುಂದರೀಕರಣಕ್ಕೆ ಬಳಸಬಹುದು. ನಿಮಗೆ ಮನೆಯಲ್ಲಿ ಗಿಡಗಳನ್ನು ಬೆಳೆಸಲು ಇಷ್ಟವಿದ್ದಲ್ಲಿ ಬಾಟಲ್‌ಗಳು ತುಂಬಾ ಸಹಾಯಕಾರಿ. ಬಾಟಲ್‌ಗಳನ್ನು ಎರಡು ತುಂಡುಗಳಾಗಿ ಕತ್ತರಿಸಿ ಅದಕ್ಕೆ ಚಿಕ್ಕ ಹಗ್ಗ ಕಟ್ಟಿ ಅದಕ್ಕೆ ನಿಮಗೆ ಬೇಕಾದ ರೀತಿಯಲ್ಲಿ ಪೇಟಿಂಗ್ ಮಾಡಿ ಅದರೊಳಗೆ ಮಣ್ಣು ತುಂಬಿಸಿ ನೇತು ಹಾಕಬಹುದು. ಇದು ಸುಂದರವಾಗಿ ಕಾಣುವುದಲ್ಲದೆ ಮನೆಯ ಅಲಂಕಾರಕ್ಕೆ ಒಪ್ಪುವಂತದ್ದು. ಇನ್ನು ಕೆಲವು ಬಾಟಲ್‌ಗಳನ್ನು ಪೇಂಟ್ ಮಾಡಿ ಅದಕ್ಕೆ ಪ್ಲಾಸ್ಟಿಕ್ ಅಥವಾ ಪೇಪರ್‌ಗಳಿಂದ ಹೂವುಗಳನ್ನು ಮಾಡಿ ಮನೆಯೊಳಗೆ ಅಲಂಕಾರಕ್ಕಾಗಿ ಇರಿಸಬಹುದು.
ಮನೆಗಳಿಗೆ ಪೇಂಟ್ ಮಾಡಲು ತಂದ ಬಕೆಟ್ ಉಳಿದಿರುತ್ತವೆ. ಅಂತಹ ಬಕೆಟ್‌ಗಳನ್ನು ಅಲಂಕಾರಕ್ಕೆ ಬಳಸಿಕೊಳ್ಳಬಹುದು. ಕುರ್ಚಿ ಅಥವಾ ಸೋಫಾಗಳ ಬಳಿ ಹೂ ಗಿಡಗಳನ್ನು ಇಡಲು ಇದು ಸಹಾಯ ಮಾಡುತ್ತದೆ. ಈ ಡಬ್ಬಗಳಿಗೆ ಪೇಂಟ್ ಮಾಡಿ ಅದಕ್ಕೆ ಸರಿ ಹೊಂದುವ ಪೇಪರ್ ಹೂಗಳನ್ನು ಮಾಡಿ ಇಡುವುದರಿಂದ ಮನೆಯು ಸುಂದರವಾಗಿ ಕಾಣುವುದರಲ್ಲಿ ಸಂಶಯವಿಲ್ಲ.
ದಿನಪತ್ರಿಕೆಗಳಿಂದ ಅಲಂಕಾರ
ಮನೆಗೆ ದಿನವೂ ಬರುವ ದಿನಪತ್ರಿಕೆಗಳನ್ನು ರದ್ದಿಗೆ ಕೊಡುವ ಬದಲು ಅದನ್ನು ಮನೆಯ ಅಲಂಕಾರಕ್ಕೆ ಬಳಸಿಕೊಳ್ಳಬಹುದು. ನ್ಯೂಸ್ ಪೇಪರ್‌ಗಳಿಂದ ವಾಲ್ ಹ್ಯಾಂಗಿಗ್‌ಗಳನ್ನು ಮಾಡಬಹುದು. ಮನೆಗಳಲ್ಲಿ ಹಣ್ಣು ಹಂಪಲು ಇಡಲು ಬುಟ್ಟಿಗಳನ್ನು ಸಹ ತಯಾರು ಮಾಡಬಹುದು. ಹೀಗೆ ದಿನಪತ್ರಿಕೆಯಲ್ಲಿ ಸುಂದರವಾಗಿ ಮನೆಯ ಅಲಂಕಾರ ಮಾಡಬಹುದಾಗಿದೆ.
ಮನೆಗಳಲ್ಲಿ ಸಿಗುವ ಸಿಡಿಗಳಿಂದ ಫೋಟೋ ಫ್ರೆಮ್‌ಗಳನ್ನು ಮಾಡಬಹುದಾಗಿದ್ದು ಅದರ ಸುತ್ತಲು ನಿಮಗೆ ಬೇಕಾದ ರೀತಿಯ ಡಿಸೈನ್‌ಗಳನ್ನು ಗಮ್‌ನ ಸಹಾಯದಿಂದ ಮಾಡಬಹುದಾಗಿದೆ. ಅದಲ್ಲದೆ ಇಂತಹ ಅನೇಕ ಅಲಂಕಾರಿಕಾ ವಸ್ತುಗಳನ್ನು ಬಳಸುವುದರಿಂದ ತ್ಯಾಜ್ಯಗಳನ್ನು ಆದಷ್ಟು ಕಡಿಮೆ ಮಾಡಬಹುದಾಗಿದೆ. ಹೀಗೆ ವಿವಿಧ ವಸ್ತುಗಳನ್ನು ಬಳಸಿಕೊಂಡು ಮನೆಯ ಅಂದವನ್ನು ಇಮ್ಮಡಿಗೊಳಿಸಬಹುದು.
-ಪ್ರೀತಿ, ಹೊನ್ನಾವರ