Advertisement
ಕೃಷಿ ಭೂಮಿ ಉಳಿಸಬೇಕು ಎಂಬ ನಿಟ್ಟಿನಲ್ಲಿ ಸರಕಾರ ನಗರ ಸೇರಿದಂತೆ ಸುತ್ತಮುತ್ತಲ ಕೃಷಿ ಭೂಮಿಯನ್ನು ಹಸುರು ವಲಯ ಎಂದು ಘೋಷಿಸಿದ್ದು ಈ ಭಾಗದಲ್ಲಿ ಭೂಮಿ ಮಾರಾಟ ಮತ್ತು ಮನೆ ನಿರ್ಮಾಣ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಕಾನೂನು ಜಾರಿಗೆ ತಂದಿದೆ. ವಸತಿ ವಲಯವೆಂದು ಗುರುತಿಸಿದ ಪ್ರದೇಶದಲ್ಲಿ ಮಾತ್ರ ಮನೆ ನಿರ್ಮಿಸಬೇಕು. ಆರು ವರ್ಷಗಳ ಹಿಂದೆ ಹಸುರು ವಲಯದಲ್ಲಿ ಮನೆ ನಿರ್ಮಿಸಬೇಕಿದ್ದಲ್ಲಿ ಪ್ರಾಧಿಕಾರದಿಂದ ಅನುಮೋದನೆ ಪಡೆಯಬಹುದಿತ್ತು. ಅರ್ಜಿಯನ್ನು ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು ಸಭೆಯಲ್ಲಿಟ್ಟು ಪರಾಮರ್ಶಿಸಿ 10 ಸೆಂಟ್ಸ್ ಒಳಗಿನ ನಿರ್ದಿಷ್ಟ ಜಾಗದಲ್ಲಿ ಮನೆ ನಿರ್ಮಿಸಲು ಕೆಲವು ಕಡೆಗಳಲ್ಲಿ ಅವಕಾಶ ಮಾಡಿಕೊಡುತ್ತಿದ್ದರು. ಈ ಬಗ್ಗೆ ಸ್ಥಳೀಯರಿಂದ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಗೂ ತಡೆಯಾಗಿದೆ.
Related Articles
Advertisement
ತುಂಡು ಭೂಮಿಯಲ್ಲಿ ಸಿಂಗಲ್‌ಬೆಡ್ ರೂಂ ಮನೆ ಕಟ್ಟಲು ಕೆಲವರು ಪರದಾಡಿದರೆ ಇನ್ನೊಂದು ವರ್ಗ ತಮ್ಮ ಕೆಲಸವನ್ನು ಸುಲಭವಾಗಿ ಮಾಡಿಕೊಳ್ಳುತ್ತಿದೆ. ಒಂದೆರಡು ಎಕ್ರೆ ಕೃಷಿ ಭೂಮಿ ಇದ್ದವರು ಬೆಂಗಳೂರಿಗೆ ಹೋಗಿ ಸುಲಭವಾಗಿ ದುಡ್ಡುಕೊಟ್ಟು ಕೆಲಸ ಮಾಡಿಸಿಕೊಂಡು ಬರುತ್ತಾರೆ. ಆಗ ಕೃಷಿ ವಲಯದಿಂದ ವಸತಿ ವಲಯಕ್ಕೆ ದಾಖಲೆ ಬದಲಾವಣೆಯಾಗಿ ಮನೆಗಳು, ಲೇಔಟ್, ವಸತಿ ಸಮುಚ್ಚಯ, ವಾಣಿಜ್ಯ ಸಂಕೀರ್ಣ ತಲೆ ಎತ್ತುತ್ತವೆ. ಉಡುಪಿ ಸುತ್ತಮುತ್ತ ಜಾಗಕ್ಕೆ ವಿಪರೀತ ಬೇಡಿಕೆ ಇರುವುದರಿಂದ ಕೆಲವು ಕಡೆಗಳಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತುಂಡು ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಅಲ್ಲದೆ ಐದಾರು ವರ್ಷದ ಹಿಂದೆ ಅರಿವಿಲ್ಲದೆ ಹಸುರು ವಲಯದಲ್ಲಿದ್ದ ಭೂಮಿ ಖರೀದಿಸಿದ್ದವರಿಗೂ ಈ ಸಮಸ್ಯೆ ನುಂಗಲಾರದ ತುತ್ತಾಗಿದೆ.
ಕೃಷಿ ಭೂಮಿಯನ್ನೂ ಉಳಿಸಬೇಕು, ಸಾರ್ವಜನಿಕರಿಗೂ ಸಮಸ್ಯೆ ಆಗಬಾರದು ಎಂಬುದು ಸರಕಾರದ ಆಶಯ. ಈ ನಿಟ್ಟಿನಲ್ಲಿ ಕೃಷಿ ವಲಯದಲ್ಲಿ ಮನೆ ಕಟ್ಟಲು ಮತ್ತು ಮಾರಾಟಕ್ಕೆ ಇರುವ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದೆ. ಶಾಸಕ ಕೆ. ರಘುಪತಿ ಭಟ್ ಈ ಸಮಸ್ಯೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾವಿಸಿ ಸರಕಾರದ ಗಮನ ಸೆಳೆದಿದ್ದಾರೆ. ಕರಾವಳಿ ಭಾಗದಲ್ಲಿ ತುಂಡು ಭೂಮಿ ಆಗಿರುವುದು ಸಮಸ್ಯೆಗೆ ಮೂಲ ಕಾರಣ. ಬಡವರಿಗೆ ಕನಿಷ್ಠ 10 ಸೆಂಟ್ಸ್ ಪ್ರದೇಶದ ಒಳಗೆ ಮನೆ ನಿರ್ಮಿಸಲು ಅವಕಾಶ ಮಾಡಿಕೊಡಲು ಪ್ರಯತ್ನ ನಡೆಯುತ್ತಿದೆ, ಜನವರಿ ಒಳಗೆ ಈ ಬಗ್ಗೆ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ. – ರಾಘವೇಂದ್ರ ಕಿಣಿ, ಅಧ್ಯಕ್ಷರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ
-ಅವಿನ್ ಶೆಟ್ಟಿ