ಬೆಳಗಾವಿ: ಕೋವಿಡ್ ಸೋಂಕು ಹರಡುತ್ತಿರುವುದಕ್ಕೆ ಕಡಿವಾಣ ಹಾಕಲು ದಕ್ಷಿಣ ಮತಕ್ಷೇತ್ರದ ಪ್ರದೇಶಗಳಲ್ಲಿ ಶಾಸಕ ಅಭಯ ಪಾಟೀಲ ಅವರು ವಾತಾವರಣ ಶುದ್ಧೀಕರಣಕ್ಕಾಗಿ ಕೈಗೊಂಡಿರುವ ಹೋಮ-ಹವನ ಅಭಿಯಾನ ಮಂಗಳವಾರವೂ ಮುಂದುವರಿಯಿತು.
ಕ್ಷೇತ್ರದ ಸುಮಾರು 50 ಕಡೆಗಳಲ್ಲಿ ಏಕಕಾಲಕ್ಕೆ ಹೋಮ-ಹವನ ನಡೆಸಿದ್ದ ಶಾಸಕ ಅಭಯ್ ಪಾಟೀಲರು ಮಂಗಳವಾರವೂ ಇದನ್ನು ಮುಂದುವರಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಕ್ಷೇತ್ರದ ತುಂಬೆಲ್ಲ ಕೈಗಾಡಿಯಲ್ಲಿ ಹೋಮ-ಹವನ ಹಾಕಿಕೊಂಡು ಸಂಚರಿಸುತ್ತಿದ್ದಾರೆ. ವಾತಾವರಣ ಶುದ್ಧೀಕರಣಗೊಳಿಸಲು ಈ ಕಾರ್ಯ ಕೈಗೊಂಡಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ:ಆಂಧ್ರ ಪ್ರದೇಶದ ಎಚ್ ಪಿ ಸಿ ಎಲ್ ಘಟಕದಲ್ಲಿ ಬೆಂಕಿ ಅವಘಡ..! : ಕಾರ್ಮಿಕರ ರಕ್ಷಣೆ
ಕೈಗಾಡಿಯಲ್ಲಿ ಹಾಗೂ ಮನೆಗಳ ಮುಂದೆ ಅಗ್ನಿಕುಂಡದಂತೆ ಮಾಡಿ ಅದರಲ್ಲಿ ಬೆರಣಿ (ಕುಳ್ಳು), ಗುಗ್ಗಳ, ಕರ್ಪೂರ, ತುಪ್ಪ, ಬೇವಿನ ಎಲೆಗಳು, ಅಕ್ಕಿ, ಕವಡಿ ಉದ ಹಾಗೂ ಲವಂಗ ಮೊದಲಾದವುಗಳನ್ನು ಹಾಕಿ ವಾತಾವರಣ ಶುದ್ಧಗೊಳಿಸಲಾಗುತ್ತಿದೆ. ಇದಕ್ಕೆ ಅನೇಕ ಸಂಘ-ಸಂಸ್ಥೆಗಳ ಯುವಕರು ಕೈ ಜೋಡಿಸಿದ್ದಾರೆ. ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಾತಾವರಣ ಶುದ್ಧೀಗಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.
ಸೋಂಕುಗಳ ನಿವಾರಣೆಗೆ ಸನಾತನ ಧರ್ಮದಲ್ಲಿ ಹೋಮ-ಹವನ ನಡೆಸಲಾಗುತ್ತಿದೆ. ಯಾರಿಗೆ ನಂಬಿಕೆ ಇದೆಯೋ ಅದನ್ನು ಒಪ್ಪಿಕೊಳ್ಳುತ್ತಾರೆ. ನಂಬಿಕೆ ಇಲ್ಲದವರು ಇದನ್ನು ಒಪ್ಪಿಕೊಳ್ಳದೇ ಮೌಢ್ಯದ ಪಟ್ಟ ಕಟ್ಟುತ್ತಾರೆ. ಇದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಸನಾತನ ಹಿಂದು ಧರ್ಮದಲ್ಲಿ ಪುರಾತನ ಕಾಲದಿಂದಲೂ ಇಂಥಹ ಹೋಮ-ಹವನಗಳನ್ನು ಮಾಡಿ ವಾತಾವರಣ ಶುದ್ಧಿಗೊಳಿಸಿದ್ದು ಓದಿಕೊಂಡು ಬಂದಿದ್ದೇವೆ. ಕಲುಷಿತ ವಾತಾವರಣ ಸ್ವಚ್ಛಗೊಳಿಸಲು ಇದು ಸಹಕಾರಿಯಾಗಿದೆ. ಜೂನ್ 15ರವರೆಗೂ ಕ್ಷೇತ್ರದ ತುಂಬೆಲ್ಲ ಇದು ಮುಂದುವರಿಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಮದುವೆ:ಅಧಿಕಾರಿಗಳನ್ನು ಕಂಡು ವೇದಿಕೆಯಲ್ಲೇ ವಧುವನ್ನು ಬಿಟ್ಟು ವರ ಎಸ್ಕೇಪ್!