Advertisement

ಥ್ರಿಲ್ಲರ್‌ ಚಿತ್ರಮಂಜರಿ

06:00 AM Aug 31, 2018 | |

ವಿದೇಶಿ ಕನ್ನಡಿಗರಿಗೆ ಈಗ ಕನ್ನಡ ಚಿತ್ರಗಳ ಮೇಲೆ ಪ್ರೀತಿ ಮತ್ತು ಆಸಕ್ತಿ ಹೆಚ್ಚಾಗಿದೆ. ಆ ಕಾರಣಕ್ಕೆ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಚೆಂದದ ಕನ್ನಡ ಚಿತ್ರವೊಂದರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿಸಿ, ಎರಡನೇ ಹಂತದ ಚಿತ್ರೀಕರಣಕ್ಕೂ ಸಜ್ಜಾಗಿದ್ದಾರೆ. ಆ ಚಿತ್ರದ ಹೆಸರು “ರತ್ನಮಂಜರಿ’. ಅಮೇರಿಕಾ, ಯುರೋಪ್‌ ಹೀಗೆ ಒಂದೊಂದು ಭಾಗದಲ್ಲಿ ಕೆಲಸ ಮಾಡುತ್ತಿರುವ ಸಂದೀಪ್‌ ಕುಮಾರ್‌ ಹಾಗೂ ನಟರಾಜ್‌ ಹಳೇಬೀಡು ಅವರಿಗೆ ಹಾಲಿವುಡ್‌ ಶೈಲಿಯಲ್ಲಿ ಕನ್ನಡ ಚಿತ್ರ ಮಾಡುವ ಆಸೆ ಹುಟ್ಟಿಕೊಂಡಿದ್ದರಿಂದಲೇ ಈ ಚಿತ್ರ ಶುರುವಾಗಿದೆ. ಇತ್ತೀಚೆಗೆ ಚಿತ್ರದ ಮೋಷನ್‌ ಪೋಸ್ಟರ್‌ ಟೀಸರ್‌ ಬಿಡುಗಡೆ ಮಾಡುವ ಮೂಲಕ ಮಾತುಕತೆಗೆ ಕುಳಿತುಕೊಂಡಿತು ಚಿತ್ರತಂಡ.

Advertisement

ನಿರ್ದೇಶಕ ಪ್ರಸಿದ್ಧ್ ಅವರಿಗೆ ಮೊದಲು ಅಮೇರಿಕಾದಲ್ಲಿ ಚಿತ್ರೀಕರಿಸಬೇಕೆಂಬ ಯೋಚನೆ ಇತ್ತಂತೆ. ಆದರೆ, ಅದೇಕೋ ಮನಸ್ಸು ಬದಲಾಯಿಸಿ, ಅವರು ಮಡಿಕೇರಿ ಸುತ್ತಮುತ್ತ ಚಿತ್ರೀಕರಿಸಿದರಂತೆ. ಅವರು ಅದ್ಭುತ ತಾಣಗಳಲ್ಲಿ ಚಿತ್ರೀಕರಿಸಿದ್ದೇ ಕೊನೆ. ಇಂದು ಆ ತಾಣಗಳೆಲ್ಲವೂ ಪ್ರಕೃತಿ ವಿಕೋಪದಿಂದ ನಾಶವಾಗಿವೆಯಂತೆ. “ನಮ್ಮ ಚಿತ್ರದಲ್ಲಿ ಮಡಿಕೇರಿಯ ಸೊಬಗು ಸೆರೆಯಾಗಿದೆ. ಆದರೆ, ಈಗ ಅದೆಲ್ಲವೂ ಖಾಲಿ ಖಾಲಿ’ ಅಂತ ಬೇಸರಿಸಿಕೊಂಡ ಪ್ರಸಿದ್ಧ್, “ಕಳೆದ ಎಂಟು ವರ್ಷಗಳಿಂದಲೂ ಒಳ್ಳೆಯ ಚಿತ್ರ ಮಾಡಬೇಕು ಎಂಬ ಆಸೆ, “ರತ್ನಮಂಜರಿ’ ಮೂಲಕ ಈಡೇರಿದೆ. ಇದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ. ಹೊಸಬರೇಕೆ, ಸ್ವಲ್ಪ ಗೊತ್ತಿರುವ ಹೀರೋಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಅಂತ ನಿರ್ಮಾಪಕರು ಹೇಳಿದ್ದು ನಿಜ. ಆದರೆ, ನನಗೆ ರಿಸ್ಕ್ ಆದರೂ ಪರವಾಗಿಲ್ಲ. ಚಾಲೆಂಜ್‌ ಮಾಡಿ ಈ ಚಿತ್ರ ಮಾಡಿದ್ದೇನೆ. ಈವರೆಗೆ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಬಂದಿದೆ. ಮೂರು ಸಾಂಗ್‌ ಅಂದುಕೊಂಡೆವು. ಈಗ ಏಳು ಸಾಂಗ್‌ ಆಗಿದೆ. ಪುನೀತ್‌ ಸರ್‌ ಹಾಡಿದ್ದಾರೆ. ಅವರು ಹಾಡಿದ ಹಾಡನ್ನು ಅಕ್ಕ ಸಮ್ಮೇಳನ (ಅಮೇರಿಕಾ)ದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ವಿವರ ಕೊಟ್ಟರು ಪ್ರಸಿದ್ಧ್.

ನಾಯಕ ರಾಜ್‌ ಚರಣ್‌ ಅವರಿಗೆ ಇದು ಮೊದಲ ಅನುಭವ. ಅವರಿಲ್ಲಿ ಸಿದ್ಧಾಂತ್‌ ಎಂಬ ಪಾತ್ರ ಮಾಡುತ್ತಿದ್ದಾರಂತೆ. ನಾಯಕಿ ಅಖೀಲಾ ಪ್ರಕಾಶ್‌ ಇಲ್ಲಿ ಗೌರಿ ಎಂಬ ಫ್ಯಾಷನ್‌ ಡಿಸೈನರ್‌ ಹುಡುಗಿಯಾಗಿ ನಟಿಸಿದ್ದಾರಂತೆ. ಪಲ್ಲವಿರಾಜ್‌ ಕೂಡ ಇಲ್ಲಿ ಕಮಲಿ ಎಂಬ ಪಾತ್ರ ಮಾಡಿದ್ದಾರಂತೆ. ಫೇಸ್‌ಬುಕ್‌ನಲ್ಲಿ ಫೋಟೋ ನೋಡಿ ಅವರನ್ನು ನಿರ್ದೇಶಕರು ಆಯ್ಕೆ ಮಾಡಿದರಂತೆ. ನಿರ್ಮಾಪಕ ಸಂದೀಪ್‌ ಅವರು ಕಥೆ ಕೇಳಿದ ಮೇಲೆ, ನಟರಾಜ್‌ ಜೊತೆ ನಿರ್ಮಾಣಕ್ಕೆ ಮುಂದಾದರಂತೆ. ಥ್ರಿಲ್ಲರ್‌ ಜಾನರ್‌ ಕಥೆ ಆಗಿದ್ದರಿಂದ ಈಗಿನ ಟ್ರೆಂಡ್‌ಗೆ ತಕ್ಕ ಕಥೆ ಇಲ್ಲಿದೆ. ಇದು ವಿದೇಶದಲ್ಲಿ ನಡೆದಂತಹ ಒಂದು ನೈಜ ಘಟನೆ ಇಟ್ಟುಕೊಂಡು ಚಿತ್ರ ಮಾಡುತ್ತಿರುವುದಾಗಿ ಹೇಳಿಕೊಂಡರು ಸಂದೀಪ್‌.

ಛಾಯಾಗ್ರಾಹಕ ಪ್ರೀತಂ ತೆಗ್ಗಿನಮನೆ, ಸಂಗೀತ ನಿರ್ದೇಶಕ ಹರ್ಷವರ್ಧನ್‌ ರಾಜ್‌ ಚಿತ್ರದ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ಬಾಲಿವುಡ್‌ ನಟಿ ಶ್ರದ್ಧಾ ಕೂಡ ನಟಿಸಿದ್ದಾರೆ. ಅಂದು ಐನಾಕ್ಸ್‌ ಮುಖ್ಯಸ್ಥ ಶಂಕರ್‌ ಮತ್ತು ಆನಂದ್‌ ಆಡಿಯೋ ಮಾಲೀಕ ಶ್ಯಾಮ್‌ ಛಾಬ್ರಿಯಾ ಮೋಷನ್‌ ಪೋಸ್ಟರ್‌ ಟೀಸರ್‌ ರಿಲೀಸ್‌ ಮಾಡಿ, ಶುಭಹಾರೈಸಿದರು. ಇದೇ ವೇಳೆ ಚಿತ್ರತಂಡ ಮಡಿಕೇರಿ ಸಂತ್ರಸ್ಥರಿಗೆ ಕೊಡಗು ಸಮಾಜ ಪದಾಧಿಕಾರಿಗಳ ಮೂಲಕ ಸಹಾಯಧನ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next