Advertisement
ಪರೀಕ್ಷೆಗಳೆಲ್ಲ ಮುಗಿದು ಮಕ್ಕಳಿಗೆ ಶಾಲೆಗೆ ರಜಾ; ಅಂದರೆ ಮಜಾ! ರಜಾ ಎಂದೊಡನೆ ಮನಸ್ಸಿಗೆ ಬಂದಾಗ ತಿನ್ನು-ತಿರುಗು- ಮಲಗು- ಟಿವಿ/ ಮೊಬೈಲ್ ನೋಡು ಎನ್ನುವುದಲ್ಲ! ಶಾಲೆಯಲ್ಲಿ ವರ್ಷವಿಡೀ ಓದು, ಬರೆ, ಪರೀಕ್ಷೆ.. ಹೀಗೆ ಒಂದಲ್ಲ ಒಂದು ಚಟುವಟಿಕೆ ನಡೆಯುತ್ತಿರುತ್ತದೆ. ಶಿಸ್ತಿನಿಂದ ಇಷ್ಟವಿರಲಿ, ಇಲ್ಲದಿರಲಿ(ಸಮಯಕ್ಕೆ ಸರಿಯಾಗಿ ಎದ್ದೇಳು, ಸ್ನಾನ ಮಾಡು, ಶಾಲೆಗೆ ಹೋಗು, ನೋಟ್ಸ್ ಬರಿ ಹೀಗೆ) ಇವನ್ನೆಲ್ಲಾ ಮಕ್ಕಳು ಮಾಡುವುದು ಅಗತ್ಯ ಮತ್ತು ಅನಿವಾರ್ಯ. ಅನೇಕ ಬಾರಿ ಈ ಶಿಸ್ತು ಯಾಂತ್ರಿಕವೆನಿಸಬಹುದು. ಅದರಿಂದ ಹೊರಬಂದು ಯಾವುದೇ ಕಟ್ಟುಪಾಡಿಲ್ಲದ ಸ್ವತ್ಛಂದ ಬದುಕನ್ನು ಸವಿಯುತ್ತಾ, ಮನಸ್ಸಿಗೆ ಖುಷಿ ಕೊಡುವ ಹವ್ಯಾಸ, ಚಟುವಟಿಕೆಗಳತ್ತ ತೊಡಗಿಸಿಕೊಳ್ಳುವುದು ರಜೆಯ ಉದ್ದೇಶ. ಹಾಗಾಗಿಯೇ ಒತ್ತಡಗಳನ್ನು ಹೊರ ಹಾಕಿ ಖಾಲಿ ಮಾಡುವ ರಜೆಗೆ “ವೆಕೇಷನ್’ ಎನ್ನುವುದೇ ಸೂಕ್ತ!!(ವೆಕೇಟ್-ಖಾಲಿ ಮಾಡು)
Related Articles
Advertisement
ನೇಚರ್ ಡೈರಿ!:
ಬಿಡುವಿರುವ ರಜಾ ಕಾಲ, ಪ್ರಕೃತಿ ಕುರಿತ ಪ್ರೀತಿ-ಆಸಕ್ತಿ ಮೂಡಿಸಲು ಸಕಾಲ. ಮಕ್ಕಳ ಜೊತೆ ಬಿಸಿಲು ಕಡಿಮೆ ಇರುವ ಸಮಯ ಬೆಳಗ್ಗೆ ಅಥವಾ ಸಂಜೆ ವಾಕ್ ಮಾಡಿ ಸುತ್ತಮುತ್ತಲು ಇರುವ ಗಿಡ, ಹೂವು, ಪ್ರಾಣಿ -ಪಕ್ಷಿಗಳು ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯವಿದೆ. ಬೇಲಿಯಂಚಿನ ನೀಲಿ ಶಂಖಪುಷ್ಪ, ಹೂಗಳ ಮಧ್ಯೆ ಹಾರಾಡುವ ಕಪ್ಪುಮೈ- ಹಳದಿ ಚುಕ್ಕಿಯ ಚಿಟ್ಟೆ , ಹಳದಿ ಬಣ್ಣದ ನುಣುಪು ಕಲ್ಲು, ತಿಳಿ ನೀಲಿ ಆಕಾಶದಲ್ಲಿ ವಿವಿಧ ಆಕಾರದ ಮೋಡಗಳು, ಬಿದಿಗೆ ಚಂದ್ರ, ಬೆಳ್ಳಿ ಚುಕ್ಕಿ, ಬೀಜ ನೆಟ್ಟು ಗಿಡ ಬೆಳೆಸು… ಹೀಗೆ ಇವೆಲ್ಲವನ್ನೂ ನೋಡುವುದಷ್ಟೇ ಅಲ್ಲ, ಡೈರಿಯಲ್ಲಿ ಬರೆದಿಟ್ಟರೆ ಸುಂದರ ನೆನಪಾಗಿ ಉಳಿಯುವುದಷ್ಟೇ ಅಲ್ಲ; ನಮ್ಮ ಸುತ್ತಲ ಪ್ರಕೃತಿ ಅದೆಷ್ಟು ವೈವಿಧ್ಯಮಯ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ.
ಮನಿ ಮ್ಯಾನೇಜ್ಮೆಂಟ್:
ಹಣಕಾಸಿನ ನಿರ್ವಹಣೆ ಬದುಕಿನಲ್ಲಿ ದೊಡ್ಡ ಜವಾಬ್ದಾರಿ. ಹಣ ಗಳಿಸಲು ಎಷ್ಟು ಕಷ್ಟ ಪಡಬೇಕು ಮತ್ತು ಹೇಗೆ ಬಳಸಬೇಕು ಎಂಬುದನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮನವರಿಕೆ ಮಾಡಿಕೊಟ್ಟರೆ ಮುಂದೆ ಆರ್ಥಿಕವಾಗಿ ಸ್ವತಂತ್ರರಾದಾಗ ನಿರ್ವಹಣೆ ಸುಲಭ ಸಾಧ್ಯ. ಮಕ್ಕಳಿಗೆ ರಜೆಯಲ್ಲಿ ಸಣ್ಣಪುಟ್ಟ ಕೆಲಸ ಕೊಟ್ಟು(ಗಿಡಗಳಿಗೆ ನೀರು ಹಾಕು, ಎಲೆಗಳ ಕಸ ಒಟ್ಟು ಮಾಡು..) ಅದಕ್ಕೆ ಪ್ರೋತ್ಸಾಹವಾಗಿ ಸ್ವಲ್ಪ ದುಡ್ಡನ್ನು ಕೊಡಬಹುದು. ಸ್ವಂತ ದುಡಿಮೆಯ ಮಹತ್ವ ಮತ್ತು ಕಷ್ಟಪಟ್ಟು ದುಡಿದ ಹಣವನ್ನು ಉಳಿತಾಯ ಮಾಡುವುದರ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಚಿಕ್ಕವರು ಗೋಲಕದಲ್ಲಿ, ಪಿಗ್ಮಿ ಬ್ಯಾಂಕ್‌ನಲ್ಲಿ ದುಡ್ಡು ಕೂಡಿಡಬಹುದು. ದೊಡ್ಡ ಮಕ್ಕಳಿಗೆ ಬ್ಯಾಂಕ್-ಪೋಸ್ಟ್ ಆಫೀಸಿನಲ್ಲಿ ಖಾತೆ ತೆರೆದು ಉಳಿತಾಯ ಮಾಡುವುದನ್ನು ಕಲಿಸಬಹುದು.
ಕುಕಿಂಗ್ ಕ್ಲೀನಿಂಗ್!
ಪ್ರತಿಯೊಬ್ಬ ವ್ಯಕ್ತಿ, ಸ್ವಾವಲಂಬಿಯಾಗಿ ಬದುಕನ್ನು ನಡೆಸುವ ಎಲ್ಲ ರೀತಿಯ ಕೌಶಲವನ್ನು ಕಲಿಯಲೇಬೇಕು. ಅದರಲ್ಲಿ ಅಡುಗೆ ಮತ್ತು ಮನೆ ಕೆಲಸವೂ ಸೇರಿದೆ. ಮಕ್ಕಳಿಗೆ ತರಕಾರಿ- ಹಣ್ಣುಗಳನ್ನು ಆರಿಸುವುದು, ಸ್ವತ್ಛ ಮಾಡುವುದು, ಬೇಳೆ-ಧಾನ್ಯಗಳ ಪರಿಚಯ, ತರಕಾರಿ ಕತ್ತರಿಸುವುದು, ಹಿಟ್ಟು ಕಲಸುವುದು, ಅನ್ನ, ಸಲಾಡ್, ಜ್ಯೂಸ್ ಮಾಡಲು ಕಲಿಯು ವುದು ಇವೆಲ್ಲಾ ಖುಷಿ ಹೆಚ್ಚಿಸುವ ಪ್ರಾಯೋಗಿಕ ಪಾಠಗಳು. ಹಾಗೆಯೇ ಬಟ್ಟೆ ತೊಳೆಯುವುದು, ಕಸ ಗುಡಿಸುವುದು, ಪಾತ್ರೆಗಳನ್ನು ತೊಳೆಯು ವುದರಿಂದ ಕೈ-ಕಾಲುಗಳ ಹೊಂದಾಣಿಕೆ, ಮಾಂಸಖಂಡಗಳ ಸಾಮರ್ಥ್ಯ ಹೆಚ್ಚುವುದಲ್ಲದೆ ಸ್ವತಂತ್ರವಾಗಿ ಬದುಕಬಲ್ಲೆ ಎಂಬ ಆತ್ಮವಿಶ್ವಾಸವೂ ಮೂಡುತ್ತದೆ.
ಪ್ಲೇ ಟೈಂ!
ಬೆಳೆಯುವ ಮಕ್ಕಳಿಗೆ ಮನರಂಜನೆ ಮತ್ತು ವ್ಯಾಯಾಮ ಎರಡನ್ನೂ ನೀಡಿ ದೈಹಿಕ-ಮಾನಸಿಕ ಕ್ಷಮತೆ ಹೆಚ್ಚಿಸುವ ಅತ್ಯುತ್ತಮ ಮಾರ್ಗ ಆಟಗಳು! ಸುಮ್ಮನೇ ವಾಕ್, ಜಾಗಿಂಗ್ ಎಂದರೆ ಮಕ್ಕಳಿಗೆ ಇಷ್ಟವಾಗದು. ಬದಲಾಗಿ ಸ್ಕಿಪ್ಪಿಂಗ್, ಅಡಗಿಸಿಟ್ಟ ವಸ್ತುಗಳನ್ನು ಹುಡುಕಿ ತೆಗೆಯುವ ಟ್ರೆಷರ್ ಹಂಟ್, ಟ್ರೆಕ್ಕಿಂಗ್, ಮನಸ್ಸಿಗೆ ಖುಷಿ ಕೊಡುವ ಹಾಡಿಗೆ ಅರ್ಧ ಗಂಟೆ ಡಾನ್ಸ್, ಹೂಲಾ ಲೂಪ್ಸ್, ಸ್ಕೇಟಿಂಗ್, ಈಜು, ಲಗೋರಿ, ಕಬಡ್ಡಿ, ಸೈಕ್ಲಿಂಗ್, ಸಾಕುಪ್ರಾಣಿ ಜತೆ ಆಟ… ಇವೆಲ್ಲಾ ಬುದ್ಧಿಯನ್ನು ಚುರುಕುಗೊಳಿಸಿ ದೇಹವನ್ನೂ ಬಲಗೊಳಿಸುವ ಚಟುವಟಿಕೆಗಳು.
ಹೀಗೆ ಈ ರಜೆಯಲ್ಲಿ ವರ್ಷವಿಡೀ ತಲೆಯಲ್ಲಿ ತುಂಬಿರುವ ಒತ್ತಡವನ್ನು ವೆಕೇಟ್ ಮಾಡಿ ಹೊಸ ವಿಷಯಗಳಿಂದ ಅಪ್ಡೆàಟ್ ಆಗಲು ಸಿದ್ಧರಾಗೋಣ! ಹ್ಯಾಪಿ ಹಾಲಿಡೇಸ್!!
-ಡಾ. ಕೆ.ಎಸ್.ಚೈತ್ರಾ