ಬೆಂಗಳೂರು: ಹುಟ್ಟುಹಬ್ಬದ ದಿನದಂದು ಕುಟುಂಬ ಸದಸ್ಯರ ಜತೆ ಕಾಲ ಕಳೆಯಲು ರಜೆ ಪಡೆಯಲು ಸಾಧ್ಯವಾಗದೆ ಕೆಲಸದೊತ್ತಡದಿಂದ ತತ್ತರಿಸುತ್ತಿರುವ ನಗರ ಪೊಲೀಸ್ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಸಿಹಿ ಸುದ್ದಿ ನೀಡಿದ್ದಾರೆ.
ನಗರ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅವರ ಹುಟ್ಟುಹಬ್ಬದ ದಿನದಂದು ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಸಮಯ ಕಳೆಯಲು ಠಾಣಾಧಿಕಾರಿ ಅಥವಾ ಮೇಲುಸ್ತುವಾರಿ ಅಧಿಕಾರಿಗಳು ಯಾವುದೇ ಕೆಲಸದ ಒತ್ತಡವಿದ್ದರೂ ಕಡ್ಡಾಯವಾಗಿ ವಾರದ ರಜೆ ಕೊಡಬೇಕು ಎಂದು ಆದೇಶಿಸಿದ್ದಾರೆ.
ಅಷ್ಟೇ ಅಲ್ಲದೆ, ಆಯುಕ್ತರ ಕಚೇರಿಯಿಂದ ಹುಟ್ಟುಹಬ್ಬದ ಶುಭಾಶಯದ ಕಾರ್ಡ್ (ಗ್ರೀಟಿಂಗ್ಸ್) ಕಳುಹಿಸುವ ಕುರಿತು ಶನಿವಾರ ಆದೇಶ ಹೊರಡಿಸಿದ್ದಾರೆ. ಎಎಸ್‌ಐ ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಅನುಮತಿ ರಜೆಯೊಂದನ್ನು ಅವರ ಹುಟ್ಟು ಹಬ್ಬದ ದಿನದಂದು ನೀಡಲು ಸೂಚಿಸಿದೆ.
ಜತೆಗೆ ಹುಟ್ಟುಹಬ್ಬದ ಗ್ರೀಟಿಂಗ್ಸ್ ಕಾರ್ಡ್‌ಗಳನ್ನು ಆಯಾ ಠಾಣಾಧಿಕಾರಿಗಳು ಅಥವಾ ಮೇಲುಸ್ತುವಾರಿ ಅಧಿಕಾರಿಗಳು ಖುದ್ದಾಗಿ ತಮ್ಮ ಠಾಣಾ ಅಥವಾ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಿ ಶುಭ ಕೋರಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಚಾರ ವಿಭಾಗ ಸೇರಿದಂತೆ ಎಲ್ಲ ಹೆಚ್ಚುವರಿ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು, ಠಾಣಾಧಿಕಾರಿಗಳು ಸೇರಿ ಎಲ್ಲ ಹಂತದ ಅಧಿಕಾರಿಗಳೆಗ ಸುತ್ತೋಲೆ ಹೊರಡಿಸಲಾಗಿದೆ.