ನೋಡು ನೋಡುತ್ತಿದ್ದಂತೆ ಚಳಿಯೆಂಬ ಮಾಯಾ ಕಿನ್ನರಿ ತಣ್ಣನೆ ಮಾಯವಾಗಿದ್ದಾಳೆ. ಚೈತ್ರ ಕಾಲಿಡಲು ಕಾತರಿಸುತಿದೆ. ಎಲ್ಲೂ ಹೂಗಳ ರಾಶಿ.ಆ ಹೆಸರು ಈ ಹೆಸರು. ಪಟ್ಟಿ ಮಾಡುತ್ತ ಹೋದರೆ ಲೆಕ್ಕಕ್ಕೆ ಸಿಗದೆ ಕಣ್ಣುಮುಚ್ಚಾಲೆಯಾಡುವ ಹೂಗಳ ಬಣ್ಣ. ಕಾಳಿದಾಸ, ಅಮೀರಖುಸ್ರೋ ಬರಹಗಳೆಲ್ಲ ನೆನಪಾಗಿ “ಪ್ರಕೃತಿ ನೀ ವಿಸ್ಮಯ’ ಎಂದೇ ಹಾಡುವ ಕಾಲ. ಹೋಳಿಹುಣ್ಣಿಮೆ ಮೊನ್ನೆಯಷ್ಟೇ ಬಂದು ಹೋಗಿದೆ.
ಫಾಲ್ಗುಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಹೋಳಿಹಬ್ಬ.ಈ ಹೋಳಿ ಇರುವ ಕಾಲದಲ್ಲಿಯೇ ಚೈತ್ರ ಅರಳಿದೆ. ಚಳಿಯೂ ಅಲ್ಲದ, ಸೆಕೆಯೂ ಅಲ್ಲದ ಒಂದು ನಮೂನೆ ಖುಷಿ ಕೊಡುವ ವಾತಾವರಣ.ಕಳೆದವಾರ ಹೋಳಿ ಸಮೀಪಿಸುತ್ತಿದೆ ಎಂದರೆ ಎಲ್ಲರೆದೆಯಲ್ಲಿ ಬಣ್ಣಗಳು ಅರಳಲು ಶುರುವಾಗಿದ್ದವು. ಹೋಳಿಯ ಆಚರಣೆಯ ಹಿಂದೆ ಕಥೆಗಳದ್ದೇ ಸರಮಾಲೆ ನೆನಪಾಗಿತ್ತು. ತಾರಾಕಾಸುರ,ರತಿದೇವಿ, ಕಾಮ (ಮನ್ಮಥ) ಅನಂಗನಾದದ್ದು, ರತಿದೇವಿಗೆ ಮಾತ್ರ ಶರೀರಿಯಾಗಿ ಕಾಮ ಕಾಣುವುದು- ಹೀಗೆ ವಿಸ್ಮಯದ ಪುರಾಣ ಕಥೆಗಳು ಒಂದೆಡೆ ತೆರೆದುಕೊಂಡರೆ ಭಕ್ತ ಪ್ರಹ್ಲಾದ, ಹಿರಣ್ಯಕಶಿಪು, ಹೋಳಿಕಾಳಿಗೆ ಸಂಬಂಧಿಸಿದ ಇನ್ನಷ್ಟು ಕತೆಗಳು ತತ್‌ಕ್ಷಣ ನೆನಪಾಗುತ್ತವೆ. ಒಟ್ಟಾರೆ ಕೆಟ್ಟದ್ದನ್ನು ಸುಡುವುದು, ಕಾಮ ಕ್ರೋಧಾದಿಗಳನ್ನು ಅಗ್ನಿಕುಂಡದಲ್ಲಿ ಹಾಕಿ ಒಳ್ಳೆಯದನ್ನು ಪಡೆಯುವುದು. ಆ ಸಂಭ್ರಮವನ್ನು ಬಣ್ಣದಾಟವಾಡಿ ಸಾರ್ಥಕಗೊಳಿಸುವ ಪರಿಕಲ್ಪನೆಯನ್ನು ಚಿಕ್ಕವರಿರುವಾಗ ಕಥೆಯ ಮೂಲಕ ಹಿರಿಯರಿಂದ, ನೆರೆಮನೆಯವರಿಂದ ಕೇಳಿ ಕೇಳಿ ಬಾಯಿಪಾಠವಾಗಿ, ಕಾಮನನ್ನು ಸುಡುವಾಗ ಕೆಟ್ಟದನ್ನು ಸುಟ್ಟೆವು ಎಂದು ಹರ್ಷಗೊಳ್ಳುತ್ತಿದ್ದ ದಿನಗಳಿದ್ದವು. ಇನ್ನು ಮುಂದೆ ಆಗುವುದೆಲ್ಲ ಒಳ್ಳೆಯದೆ ಎಂಬ ನಂಬಿಕೆಯ ಕ್ಷಣಗಳಿದ್ದವು.
ಮೊದಲೆಲ್ಲ ಹಳ್ಳಿಯ ಮಕ್ಕಳು ಶಿವರಾತ್ರಿಯ ಅಮಾವಾಸ್ಯೆ ಕಳೆಯುತ್ತಿದ್ದ ಹಾಗೆ ಕಟ್ಟಿಗೆಯನ್ನೆಲ್ಲ ಸೇರಿಸಲು ಆರಂಭಿಸುತ್ತಿದ್ದರು. ಅಕ್ಕಂದಿರ ಹಾಗೂ ಅಣ್ಣಂದಿರ ಆಜ್ಞೆಯಂತೆ ಕಟ್ಟಿಗೆ ಕದಿಯುವುದು, ಚಂದಾ ಎತ್ತುವುದು, ಯಾರಾದರೂ ಕಾಮನ ಸುಡಲು ಚಂದಾ ಕೊಡದಿದ್ದರೆ ತಡರಾತ್ರಿ ಅವರ ಮನೆಗೆ ಬಂದು,”ಕಾಮಣ್ಣನ ಮಕ್ಕಳು, ಕಳ್ಳ ಸೂಳೆ ಮಕ್ಕಳು’ ಎಂದೆಲ್ಲ ದೊಡ್ಡಕ್ಕೆ ಕಿರುಚಿ ಕೊನೆಗೆ ಬೈಯಿಸಿಕೊಳ್ಳುತ್ತಲೇ ಚಂದಾ ಪಡೆಯುತ್ತಿದ್ದರು. ಕಟ್ಟಿಗೆ ಕಳ್ಳತನವಾಗುವ ಸಂಭವ ಹೆಚ್ಚು ಎಂದು ಎಲ್ಲರೂ ಸಾಧ್ಯವಾದಷ್ಟು ಕಟ್ಟಿಗೆ ಮುಚ್ಚಿಡುತ್ತಿದ್ದರು. ಎಲ್ಲಿ ಬಚ್ಚಿಟ್ಟಿದ್ದಾರೆ ಎಂಬ ರಹಸ್ಯ ಜಾಗದ ಸುಳಿವನ್ನು ಆ ಮನೆಯ ಮಕ್ಕಳೇ ಉಳಿದವರಿಗೆ ಹೇಳಿ ಕಟ್ಟಿಗೆ ನಾಪತ್ತೆ ಮಾಡುವ, ವಿಷಯ ತಿಳಿದ ಹಿರಿಯರು ನಗುತ್ತಲೇ ಗದರಿಸುವ ಸಂಗತಿಗಳೆಲ್ಲ ಅನುಗಾಲವೂ ಖುಷಿ ಹುಟ್ಟಿಸುವಂತಿತ್ತು. ಇಡೀ ದೇಶದಲ್ಲಿ ಹೋಳಿ ಹುಣ್ಣಿಮೆ ಬೇರೆ ಬೇರೆಯಾದ ರೀತಿಯಲ್ಲಿ ಅರಳಿಕೊಂಡರೂ ಕೂಡ ಎಲ್ಲರೆದೆಯಲ್ಲಿ ಬಣ್ಣಗಳ ಚೆಲುವನ್ನು ಉಕ್ಕಿಸುತ್ತದೆ, ಕೆಲವೆಡೆ ಊರಿನವರೇ ಮನೆಯಲ್ಲಿ ಸಿಗುವ ಬೇಡದ ವಸ್ತುಗಳನ್ನು ತಂದು ಗುಡ್ಡೆ ಹಾಕಿ ಪೂಜಿಸಿ ಸುಡುತ್ತಾರೆ. ನಾವೆಲ್ಲ ಚಿಕ್ಕವರಿರುವಾಗ ಔಡಲಗಿಡ, ಬಾಳೆಗಿಡ, ತೆಂಗಿನಗಿಡ ಕಟ್ಟಿ ಅದರ ನಡುವೆ ಕಬ್ಬನ್ನು ನಿಲ್ಲಿಸಿ ಬೆರಣಿ ಸುತ್ತಲಿಟ್ಟು ಸುಡುವುದು ಹಾಗೂ ದೊಡ್ಡದಾಗಿ ಕೂಗುತ್ತ ಕಾಮನನ್ನು ಸುಟ್ಟೆವು ಎಂದು ಹರ್ಷಗೊಳ್ಳುತ್ತಿದ್ದವು. ಭಕ್ತಿ-ಭಾವ ಅಂತೆಲ್ಲ ನಮಸ್ಕರಿಸುವಾಗ ಉರಿವ ಬೆಂಕಿಯಲ್ಲಿ ಮನ್ಮಥನ ಮುಖ ಹುಡುಕುತ್ತಿದ್ದವು.
ಹೋಳಿಯ ಖುಷಿ ಕ್ರಮೇಣ ವರ್ಷ ಕಳೆದಂತೆ ಬದಲಾಗುತ್ತಿರುವುದನ್ನು ಮೊನ್ನೆ ಕಂಡೆ. ಬಾಳೆ, ತೆಂಗಿನಗಿಡದ ಜಾಗದಲ್ಲಿ ಕ್ವಿಂಟಾಲುಗಟ್ಟಲೆ ಕಟ್ಟಿಗೆಯಿದ್ದವು ಅರಿಸಿನ-ಅಕ್ಕಿಹಿಟ್ಟು ಬೆರೆಸಿದ ಗುಲಾಲ ತಯಾರಿಸಿ ಅಣ್ಣನಿಗೆ ಒತ್ತಾಯಿಸಿ ಮಾಡಿದ ಬಿದಿರಿನ ಪಿಚಕಾರಿಯ ಬದಲಾಗಿ ದಪ್ಪ ಪ್ಲಾಸ್ಟಿಕ್ ಹೊತ್ತ ಪಿಚಕಾರಿ ಬಂದು ಸೇರಿ ಕೃತಕತೆ ಮೆರೆಯುತ್ತಿತ್ತು. ಹೋಳಿ-ಹುಣ್ಣಿಮೆ ಒಂದು ಕಾಲದಲ್ಲಿ ಸಾಮಾಜಿಕ ಸಂಬಂಧವನ್ನು ಬೆಸೆಯುವಂತಹ ಕೊಂಡಿಯಾಗಿ ಹೊಸ ಸಂಬಂಧ ಅರಳಿಸುವ ಸಾಧನವಾಗಿತ್ತು. ಹೋಳಿ ಆಚರಣೆಗೆ ಜಾತಿ-ಮತವಿರಲಿಲ್ಲ. ಎಲ್ಲರೂ ಸೇರಿ ಹೋಳಿಯಾಡುತ್ತಿದ್ದರು.ಆದರೆ, ಈಗ ತಮ್ಮ ಕುಟುಂಬದವರಿಗಷ್ಟೇ ಸೀಮಿತ ಎಂಬಂತೆ ಕುಟುಂಬಗಳು ನಿರ್ದಿಷ್ಟ ಸ್ಥಳಗಳಲ್ಲಿ ಆಚರಿಸಿಕೊಳ್ಳುವ ಸಂಕುಚಿತ ಭಾವನೆ ತಾಳುತ್ತಿರುವಂತೆ ನನಗನ್ನಿಸುತ್ತಿದೆ. ಹಿಂದೆಲ್ಲ ಬಣ್ಣವಾಡಿ ಅಂಗಿ ಹಾಳಾಗುತ್ತದೆ ಎಂದು ಯಾವುದೋ ಅಲ್ಲಲ್ಲಿ ಹರಿದ ಬಣ್ಣದ ಅಂಗಿ ಧರಿಸಿ ಬಂದರೂ ಸಂತಸಕ್ಕೆ ಕೊರತೆಯಿರಲಿಲ್ಲ. ಈಗೀಗ ಧಾರಾವಾಹಿ-ಸಿನೆಮಾಗಳ ಪ್ರಭಾವದಿಂದ ಬಿಳಿ ಬಣ್ಣದ ಹೊಸ ಅಂಗಿಯನ್ನು ಧರಿಸುವ ಆಸೆ ಎಲ್ಲರಲ್ಲೂ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಕವರಿನಲ್ಲಿ ಬಣ್ಣದ ನೀರನ್ನು ತುಂಬಿ ಟೇರಿಸಿನ ಮೇಲೆ ನಿಂತು ಜೋರಾಗಿ ನೋವಾಗುವಂತೆ ಎಸೆಯುವುದರಲ್ಲಿಯೇ ಸಂತಸ ಕಾಣುವ ಮನಸುಗಳ ನೋಡಿದರೆ ಭಯವೆನಿಸಿತ್ತು. ಎಳೆ ಚರ್ಮ, ಬಣ್ಣ ತಾಗಿ ಕಲೆಯುಂಟಾಗಬಹುದೆಂದು ತೆಂಗಿನೆಣ್ಣೆ ಹಚ್ಚಿ ಕಳಿಸುವ ಅಮ್ಮನ ಕಕ್ಕುಲತೆಯನ್ನು ನಾನು ಮನೆಮನೆಗಳಲ್ಲಿ ಕಂಡಿದ್ದೇನೆ. ಕೆಲವೊಮ್ಮೆ, ಒಲ್ಲದ ಹುಡುಗಿಯ ಕೆನ್ನೆ ಸವರಿದಂತೆ ಹೋಳಿಯನ್ನು ಆಚರಿಸುವವರನ್ನು ಕಂಡಿದ್ದೇನೆ. ಹೋಳಿ ಹಬ್ಬ ಏಕೆ ಮಾಡುತ್ತಾರೆ ಎಂದು ಒಮ್ಮೆ ಕೇಳಿ ನೋಡಿ.”ನನಗೆ ನೀನು ನಿನಗೆ ನಾನು ಬಣ್ಣ ಹಾಕುವುದಕ್ಕೆ, ಶರಬತ್ತು ಕುಡಿಯುವುದಕ್ಕೆ’ ಎಂದು ಮಕ್ಕಳು ಉತ್ತರಿಸುತ್ತಾರೆ.
ಸಂಭ್ರಮ ಮುಗಿದ ಬಳಿಕ ವಿಷಾದದ ನಗುವೊಂದು ಹಾದುಹೋಗುತ್ತಿ¤ದೆ.
– ಅಕ್ಷತಾ ಕೃಷ್ಣಮೂರ್ತಿ