Advertisement

ಸಿಡಿದು ನಿಂತ ಸಂಸದರು; ಉಕ್ರೇನ್‌ನ ಸಂಸದರೂ ಗನ್‌ ಹಿಡಿದು ಹೋರಾಟಕ್ಕೆ ಸಿದ್ಧ

08:29 PM Feb 26, 2022 | Team Udayavani |

ಕೀವ್‌: ರಷ್ಯಾ ನಡೆಸಿದ ದಾಳಿಗೆ ಉಕ್ರೇನ್‌ ಸಂಸದರು ಸಿಡಿದು ನಿಂತಿದ್ದಾರೆ.

Advertisement

ಜನಸಾಮಾನ್ಯರಿಂದ ಮೊದಲ್ಗೊಂಡು ಆ ದೇಶದ ಮಾಜಿ ಅಧ್ಯಕ್ಷರ ವರೆಗೆ ಎಲ್ಲರೂ ದೇಶ ರಕ್ಷಣೆಯ ಮಾತಾಡುತ್ತಿದ್ದಾರೆ. ಅಮೆಜಾನ್‌ನ ಉಕ್ರೇನ್‌ನ ಅಂಗಸಂಸ್ಥೆ ರಿಂಗ್‌ನಲ್ಲಿ ಮುಖ್ಯ ನಿರ್ವಹಣಾ ಅಧಿಕಾರಿಯಾಗಿದ್ದ ಮತ್ತು ಹಾಲಿ ಸಂಸದೆ ಕಿರಾ ರುಡಿಕ್‌ (36) ಈಗ ಕಲಾಶ್ನಿಕೋವ್‌ (ಎ.ಕೆ. ಸರಣಿಯ ರೈಫ‌ಲ್‌) ರೈಫ‌ಲ್‌ ಕೈಗೆತ್ತಿಕೊಂಡಿದ್ದಾರೆ. ಜತೆಗೆ ಫೋಟೋವನ್ನು ಟ್ವೀಟ್‌ ಮಾಡಿದ್ದಾರೆ.

“ಸಿಎನ್‌ಎನ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನಮಗೆಲ್ಲರಿಗೂ ರೈಫ‌ಲ್‌ಗ‌ಳನ್ನು ನೀಡಿದ್ದಾರೆ. ನಾವೆಲ್ಲರೂ ರಷ್ಯಾ ಸೇನೆಯ ವಿರುದ್ಧ ಹೋರಾಟ ಮಾಡಲಿದ್ದೇವೆ. ದೇಶಕ್ಕಾಗಿ ಹೋರಾಟ ಮಾಡುವುದು ನಮ್ಮ ಕರ್ತವ್ಯ’ ಎಂದು ಘೋಷಿಸಿದ್ದಾರೆ.

2014ರಿಂದ 2019ರ ವರೆಗೆ ಉಕ್ರೇನ್‌ನ ಅಧ್ಯಕ್ಷರಾಗಿದ್ದ ಪೆಟ್ರೋ ಪೊರೊಶೆಂಕೋ ಕೂಡ ರಷ್ಯಾ ದಾಳಿಯ ವಿರುದ್ಧ ಕಟುವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆಲ್ಲರಿಗೂ ಸರ್ಕಾರದ ವತಿಯಿಂದ ರೈಫ‌ಲ್‌ ನೀಡಿದ್ದಾರೆ. ವಿರೋಧಿ ಪಡೆಯನ್ನು ಮಟ್ಟಹಾಕಲಿದ್ದೇವೆ ಎಂದು “ಸಿಎನ್‌ಎನ್‌’ಗೆ ತಿಳಿಸಿದ್ದಾರೆ. “ರಷ್ಯಾ ಅಧ್ಯಕ್ಷ ಪುಟಿನ್‌ ಹುಚ್ಚ. ಅವರೊಬ್ಬ ರಾಕ್ಷಸನಾದ್ದರಿಂದ ದೇಶದ ಜನರನ್ನು ಕೊಲ್ಲುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಒಲೆಕ್ಸಿ ಗೊನಾcರೆಂಕೋ ಕೂಡ ತಮ್ಮ ನಿವಾಸದ ಸಮೀಪ ಇರುವ ಪೊಲೀಸ್‌ ಠಾಣೆಗೆ ತೆರಳಿ ತಮಗೆ ಬೇಕಾದ ಗನ್‌ ತೆಗೆದುಕೊಂಡಿದ್ದಾರೆ. ನಾನು ಯೋಧನಲ್ಲ. ದೇಶಕ್ಕಾಗಿ ಹೋರಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಕೀವ್‌ ಪ್ರದೇಶವೊಂದರಲ್ಲಿಯೇ 18 ಸಾವಿರ ರೈಫ‌ಲ್‌ಗ‌ಳನ್ನು ಸಾರ್ವಜನಿಕರಿಗಾಗಿ ವಿತರಿಸಲಾಗಿದೆ.

Advertisement

ದೇಶ ರಕ್ಷಣೆಗೆ ಗನ್‌ ಕೈಗೆತ್ತಿಕೊಂಡ ನಾಗರಿಕರು
“ಬನ್ನಿ, 18 ವರ್ಷದಿಂದ 60 ವರ್ಷ ವಯೋಮಿತಿ ಒಳಗೆ ಇರುವ ಸದೃಢರು ನಮ್ಮ ಜತೆಗೆ ಬನ್ನಿ. ದೇಶವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಲು ಬಂದೂಕು ಹಿಡಿದು ಹೋರಾಡೋಣ’ ಎಂಬ ಉಕ್ರೇನ್‌ ಸೇನೆಯ ಹಿರಿಯ ಅಧಿಕಾರಿಗಳ ಕರೆಗೆ ಅಲ್ಲಿನ ಜನರು ಓಗೊಟ್ಟಿದ್ದಾರೆ. ರಾಜಧಾನಿ ಕೀವ್‌ನ ವಿವಿಧ ಭಾಗಗಳಲ್ಲಿ ಸೇನೆಯ ವತಿಯಿಂದಲೇ ಟ್ರಕ್‌ನಲ್ಲಿ ಅತ್ಯಾಧುನಿಕ ರೈಫ‌ಲ್‌ಗ‌ಳನ್ನು ತಂದು ಇಳಿಸುತ್ತಿದ್ದಾರೆ. ಅವುಗಳನ್ನು ತಾ ಮುಂದು, ನಾ ಮುಂದು ಎಂಬ ನೆಲೆಯಲ್ಲಿ ಉಕ್ರೇನ್‌ನ ಪ್ರಜೆಗಳು ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಪೈಕಿ 35 ವರ್ಷದ ಇತಿಹಾಸಕಾರ ಯೂರಿ ಕ್ರೋಶ್ಚೆಮಿನಿ ಕೂಡ ಒಬ್ಬರು. “ನನ್ನ ಜೀವನದಲ್ಲಿ ಇದುವರೆಗೆ ರೈಫ‌ಲ್‌ ಅನ್ನು ಹಿಡಿದದ್ದೇ ಇಲ್ಲ. ಈಗ ದೇಶಕ್ಕಾಗಿ ನಾನು ಬಂದೂಕು ಹಿಡಿದಿದ್ದೇನೆ. ನನ್ನ ಪಾತ್ರ ಏನೆಂಬುದು ಗೊತ್ತಿಲ್ಲ. ಆದರೆ, ರಷ್ಯಾ ಸೈನಿಕರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲು ಶಕ್ತನಿದ್ದೇನೆ’ ಎಂದಿದ್ದಾರೆ.

ಕಣ್ಣೆದುರೇ ಅಸುನೀಗಿದರು:
ಅವರು ಮತ್ತು ಅವರ ತಂಡ ರಷ್ಯಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಅವರ ಕಣ್ಣೆದುರೇ ನಡೆದ ಘರ್ಷಣೆಯಲ್ಲಿ ರಷ್ಯಾ ಸೇನೆಯ ಗುಂಡಿಗೆ ನಾಗರಿಕರೊಬ್ಬರು ಅಸುನೀಗಿದ್ದಾರೆ. ಅವರನ್ನು ಕೀವ್‌ ಸೇನೆಯ ಯೋಧರು ತೆಗೆದುಕೊಂಡು ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next