ಹೊಳಲ್ಕೆರೆ: ಚೀಟಿ ಹಣದಿಂದ ಒಂದು ವಾರ ಕುಟುಂಬಸ್ಥರ ಜತೆ ತಮಿಳುನಾಡು ಪ್ರವಾಸ ಕೈಗೊಂಡಿದ್ದ, ಹೊಳಲ್ಕೆರೆ ನಿರ್ಮಲಮ್ಮ ರೈಲಿನಿಂದ ಕಾಲುಜಾರಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ಈ ಘಟನೆ ತಮಿಳುನಾಡಿನ ಮಧುರೈ ಮಾರ್ಗದ ಧರ್ಮಪುರಿ ಸಮಿಪದ ಟೋನೂರು ಹತ್ತಿರ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಮೃತ ದುರ್ದೈವಿ ಹೊಳಲ್ಕೆರೆ ಪಟ್ಟಣದ ಒಂದನೇ ವಾರ್ಡ್ ಮುಷ್ಟಿಗರ ಹಟ್ಟಿಯ ರೈತ ಮುಖಂಡ ಕುಮಾರ್ ಆಚಾರ್ ಅವರ ಧರ್ಮಪತ್ನಿ ನಿರ್ಮಲಮ್ಮ (55) ಎನ್ನಲಾಗಿದೆ.
ಮೃತ ನಿರ್ಮಲಮ್ಮ ತಾನು ಸಂಗ್ರಹಿಸಿದ ಚೀಟಿ ಹಣದಿಂದ ಕುಟುಂಬಸ್ಥರಾದ 50 ಜನರ ತಂಡ ತಮಿಳುನಾಡು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಪ್ರವಾಸ ಕೈಗೊಂಡಿದ್ದರು. ಪ್ರವಾಸ ಮುಗಿಸಿ ವಾಪಸ್ ಬರುವಾಗ ಮಧುರೈ ಮಾರ್ಗದಲ್ಲಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ತಡರಾತ್ರಿ ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬೋಗಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಜತೆಯಲ್ಲಿದ್ದ ಪತಿ ಕುಮಾರ್‌ಆಚಾರ ಮುಂದಿನ ರೈಲ್ವೆ ನಿಲ್ದಾಣದಲ್ಲಿ ನಿದ್ದೆಯಿಂದ ಎಚ್ಚರಗೊಂಡಾಗ ಪತ್ನಿ ಕಾಣಿಸಲಿಲ್ಲ ಎಂದು ಗಾಬರಿಗೊಂಡು ಬೋಗಿ ಪರಿಶೀಲಿಸಿದಾಗ ಅವರ ಚಪ್ಪಲ್ಲಿ ಮತ್ತು ಫೋನ್ ಬೋಗಿಯ ಶೌಚಾಲಯದ ಹತ್ತಿರ ಬಿದ್ದಿರುವುದನ್ನು ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಅದೇ ನಿಲ್ದಾಣದಲ್ಲಿ ಇಳಿದ ಕುಮಾರ್ ಆಚಾರ್ ಮತ್ತು ಅಳಿಯಂದಿರುವ ಹತ್ತಿರದ ಧರ್ಮಪುರಿ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪೊಲೀಸ್ ಜತೆ ರೈಲ್ವೆ ಹಳಿ ಪರಿಶೀಲಿಸಿದಾಗ ಟೋನೂರು ಎಂಬಲ್ಲಿ ನಿರ್ಮಲಮ್ಮ ಶವವಾಗಿ ಪತ್ತೆಯಾಗಿದ್ದಾರೆ.
ನಿರ್ಮಲಮ್ಮ ನಿಧನಕ್ಕೆ ಕುಟುಂಬಸ್ಥರು ಸೇರಿ ಪಟ್ಟಣದ ಒಂದನೇ ವಾರ್ಡ್ ನಾಗರಿಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಧರ್ಮಪುರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಮೃತರ ಶವವನ್ನು ಹೊಳಲ್ಕೆರೆಗೆ ತರಲು ಹೆಚ್ಚಿನ ಸಹಕಾರ ನೀಡಬೇಕೆಂದು ತಹಶೀಲ್ದಾರ್ ಬೀಬಿ ಪಾತೀಮ ಹಾಗೂ ಜಿಲ್ಲಾಧಿಕಾರಿಗಳಿಗೆ ಪುರಸಭೆ ಸದಸ್ಯೆ ಎಚ್.ಆರ್. ನಾಗರತ್ನಮ್ಮ ಮಾಹಿತಿ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.