ಹೊಳಲ್ಕೆರೆ: ಪಟ್ಟಣದ ಹಿರೇಕೆರೆ ಆಭಿವೃದ್ಧಿಗೆ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕೆರೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸುವ ಮೂಲಕ ಕೆರೆಯಲ್ಲಿ ಶಾಶ್ವತವಾಗಿ ನೀರು ನಿಲ್ಲುವಂತೆ ಮಾಡಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಶುಕ್ರವಾರ ಹಮ್ಮಿಕೊಂಡಿದ್ದ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಪಟ್ಟಣದ ಸುತ್ತ ಇರುವ ಕೆರೆಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಯೋಜನೆ ರೂಪಿಸಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಕೆರೆಗಳನ್ನು ಶುದ್ಧಗೊಳಿಸುವ ಮೂಲಕ ಅಲ್ಲಿದ್ದ ಮುಳಿನ ಗಿಡಗಳನ್ನು ತೆರವುಗೊಳಿಸಲಾಗಿತ್ತು. ಕೆರೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಂದಿದೆ. ಸಾಕಷ್ಟು ಮಳೆಯಾಗಿ ಕೆರೆಗಳು ಭರ್ತಿಯಾಗಿರುವುದು ಸಂತಸ ತಂದಿದೆ ಎಂದರು.
ಕಳೆದ ಹಲವಾರು ವರ್ಷಗಳಿಂದ ಮಳೆ ಇಲ್ಲದೆ ಕೆರೆಗಳು ತುಂಬಿರಲಿಲ್ಲ. ಹಿಂದಿನ ಬಾರಿ ಶಾಸಕನಾಗಿದ್ದಾಗ ಪಟ್ಟಣದ ಕೆರೆಗಳು ಭರ್ತಿಯಾಗಿದ್ದವು. ಬಾಗಿನ ಅರ್ಪಿಸಿ ಒಂಭತ್ತು ವರ್ಷಗಳು ಕಳೆದಿವೆ. ಈ ವರ್ಷ ಸುರಿದ ಮಳೆಗೆ ಕೆರೆ ಕಟ್ಟೆಗಳು ತುಂಬಿಕೊಂಡಿವೆ. ಹಾಗಾಗಿ ತಾಲೂಕಿನಲ್ಲಿರುವ ಬಹುತೇಕ ಕೆರೆಗಳಿಗೆ ಬಾಗಿನ ಸಮರ್ಪಿಸುತ್ತೇವೆ. ಕೆರೆಗಳಲ್ಲಿ ನೀರು ತುಂಬಿರುವ ಪರಿಣಾಮ ತೋಟಗಾರಿಕೆ ಮತ್ತು ಕೃಷಿಯಲ್ಲಿ ಸಾಕಷ್ಟು ಚೇತರಿಕೆ ಕಾಣಿಸಿಕೊಂಡಿದೆ ಎಂದು ತಿಳಿಸಿದರು.
ಕೆರೆಗೆ ಗಂಗಾಪೂಜೆ ಸಲ್ಲಿಸಲಾಯಿತು. ಪಟ್ಟಣದ ನೂರಾರು ರೈತರು ಸ್ವಇಚ್ಚೆಯಿಂದ ಅನ್ನಸಂತರ್ಪಣೆಗೆ ದವಸ ಧಾನ್ಯಗಳನ್ನು ನೀಡಿದ್ದರು. ಕೆರೆ ಏರಿ ಮೇಲೆ ಐದು ಸಾವಿರ ಜನರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಬಾಗಿನ ಅರ್ಪಿಸುವ ಕಾರ್ಯಕ್ರಮದ ನೇತೃತ್ವವನ್ನು ಗಂಗಾಧರಯ್ಯ ಸ್ವಾಮೀಜಿ, ರೈತ ಸಂಘದ ಅಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಅಜಯ್, ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ಇಂದ್ರಪ್ಪ, ಕೆ.ಆರ್. ರಾಜಪ್ಪ, ಸಿದ್ರಮಣ್ಣ, ಈಶ್ವರಪ್ಪ, ಲಿಂಗರಾಜಪ್ಪ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ಕೆ.ಸಿ. ರಮೇಶ್, ಪಿ.ಎಚ್. ಮುರುಗೇಶ್, ಮಲ್ಲಿಕಾರ್ಜುನ್, ಡಿ.ಎಸ್. ವಿಜಯ್, ಎಚ್.ಆರ್. ನಾಗರತ್ನ ವೇದಮೂರ್ತಿ, ನಾಗರಾಜ್, ತಾಪಂ ಸದಸ್ಯ ಶಿವಕುಮಾರ್, ಭಂಗಿ ಲೋಕೇಶ್ ಮತ್ತಿತರರು ಭಾಗವಹಿಸಿದ್ದರು.