ಭುವನೇಶ್ವರ: ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ತಂಡವು ಪುರುಷರ ಹಾಕಿ ವಿಶ್ವಕಪ್‌ನ ಸೋಮವಾರದ ಪಂದ್ಯದಲ್ಲಿ ಬಲಿಷ್ಠ ಆರ್ಜೆಂಟೀನಾ ತಂಡದೆದುರು 3-3 ಗೋಲುಗಳಿಂದ ಡ್ರಾ ಸಾಧಿಸಲು ಯಶಸ್ವಿಯಾಗಿದೆ. ದಿನದ ಇನ್ನುಳಿದ ಪಂದ್ಯಗಳಲ್ಲಿ ಫ್ರಾನ್ಸ್, ನೆದರ್ಲೆಂಡ್ಸ್ ಮತ್ತು ಮಲೇಷ್ಯಾ ತಮ್ಮ ಎದುರಾಳಿ ವಿರುದ್ಧ ಗೆಲುವು ಸಾಧಿಸಿದೆ.
ಪಂದ್ಯ ಆರಂಭವಾದ 9ನೇ ನಿಮಿಷದಲ್ಲಿ ಆಸ್ಟೇಲಿ ಯದ ಹೇವಾರ್ಡ್ ಜೆರೆಮಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಖಾತೆ ತೆರೆದಿದ್ದರು. ಆದರೆ 18ನೇ ನಿಮಿಷದಲ್ಲಿ ಆರ್ಜೆಂಟೀನಾದ ಡೊಮೆನೆ ತೋಮಸ್ ಗೋಲು ಹೊಡೆದು ಸಮಬಲ ತರುವಲ್ಲಿ ಯಶಸ್ವಿಯಾಗಿದ್ದರು. ಆಬಳಿಕ ಬೀಲೆ ಡೇನಿಯಲ್ ಫೀಲ್ಡ್ ಗೋಲು ಮೂಲಕ ಆಸ್ಟ್ರೇಲಿಯಕ್ಕೆ ಮುನ್ನಡೆ ಒದಗಿಸಿದರು. ಆರ್ಜೆಂಟೀನಾ ಮತ್ತೆ ಅಮೋಘವಾಗಿ ಆಡಿ 32ನೇ ನಿಮಿಷದಲ್ಲಿ ಕ್ಯಾಸೆಲ್ಲ ಮೈಕೊ ಮೂಲಕ ಗೋಲನ್ನು ಹೊಡೆದು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.
ಪಂದ್ಯದುದ್ದಕೂ ಉಭಯ ತಂಡಗಳ ಆಟಗಾರರು ತೀವ್ರ ಪೈಪೋಟಿಯಿಂದ ಆಡಿದರು. 48ನೇ ನಿಮಿಷದಲ್ಲಿ ಫೆರೈರೊ ಮಾರ್ಟಿನ್ ಗೋಲನ್ನು ಹೊಡೆಯುವ ಮೂಲಕ ಆರ್ಜೆಂಟೀನಾ ಮುನ್ನಡೆ ಸಾಧಿಸಿತು. ಕೊನೆ ಹಂತದಲ್ಲಿ ಆಸ್ಟ್ರೇಲಿಯ ಇನ್ನೊಂದು ಗೋಲು ಹೊಡೆದು ಸೋಲು ತಪ್ಪಿಸಿಕೊಂಡಿತು.
ಫ್ರಾನ್ಸ್‌ಗೆ ಗೆಲುವು
“ಎ’ ಬಣದ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ. ಫ್ರಾನ್ಸ್‌ನ ಚಾರ್ಲೆಟ್ ವಿಕ್ಟರ್ ಎರಡು ಬಾರಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಹೊಡೆದರು. ದಕ್ಷಿಣ ಆಫ್ರಿಕಾದ ಏಕೈಕ ಗೋಲನ್ನು ಬೀವುಚಾಂಪ್ ಕಾನರ್ ಹೊಡೆದಿದ್ದರು.
Related Articles
ನೆದರ್ಲೆಂಡ್ಸ್ ಜಯಭೇರಿ
“ಸಿ’ ಬಣದ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ನೆದ ರ್ಲೆಂಡ್ಸ್ ತಂಡವು ನ್ಯೂಜಿಲ್ಯಾಂಡ್ ತಂಡವನ್ನು 4-0 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿದರೆ ಮಲೇಷ್ಯಾ ತಂಡವು ಚಿಲಿಯನ್ನು 3-2 ಗೋಲುಗಳಿಂದ ಸದೆಬಡಿಯಿತು. ಆಡಿದ ಎರಡು ಪಂದ್ಯಗಳಲ್ಲಿ ಗೆದ್ದಿರುವ ನೆದರ್ಲೆಂಡ್ಸ್ ತಂಡವು ಬಣದ ಅಗ್ರಸ್ಥಾನದಲ್ಲಿದೆ.