ರೂರ್ಕೆಲ: ಭಾರತ- ಇಂಗ್ಲೆಂಡ್ ನಡುವಿನ “ಡಿ’ ವಿಭಾಗದ ವಿಶ್ವಕಪ್ ಹಾಕಿ ಪಂದ್ಯ ಗೋಲು ಕಾಣದೆ ಡ್ರಾಗೊಂಡಿತು.
ವಿಶ್ವ ಮಟ್ಟದಲ್ಲಿ ಎರಡೂ ಅತೀ ಸನಿಹದ ರ್‍ಯಾಂಕಿಂಗ್ ತಂಡಗ ಳಾಗಿದ್ದು, ಇದಕ್ಕೆ ತಕ್ಕ ಹೋರಾಟ ಸಂಘಟಿಸಿದವು. ಭಾರತ 5ನೇ, ಇಂಗ್ಲೆಂಡ್ 6ನೇ ರ್‍ಯಾಂಕಿಂಗ್ ಹೊಂದಿದ್ದವು. ಸತತ 60 ನಿಮಿಷಗಳ ಸೆಣಸಾಟದಲ್ಲಿ ಎರಡೂ ತಂಡಗಳಿಂದ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.
ಡ್ರಾ ಫಲಿತಾಂಶದಿಂದಾಗಿ “ಡಿ’ ವಿಭಾಗದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡೂ ತಲಾ 3 ಅಂಕ ಹೊಂದಿವೆ. ಆದರೆ ಅತ್ಯುತ್ತಮ ಗೋಲ್ ಡಿಫರೆನ್ಸ್ ಲೆಕ್ಕಾಚಾರದಲ್ಲಿ ಮುಂದಿರುವ ಇಂಗ್ಲೆಂಡ್ ಅಗ್ರಸ್ಥಾನ ಅಲಂಕರಿಸಿದೆ.
ಈ ಪಂದ್ಯದಲ್ಲಿ ಇಂಗ್ಲೆಂಡ್ ಬರೋಬ್ಬರಿ 8 ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದರೆ, ಭಾರತ 4 ಪೆನಾಲ್ಟಿ ಕಾರ್ನರ್ ಗಳಿಸಿತು. ಆದರೆ ಯಾರಿಂದಲೂ ಗೋಲು ದಾಖಲಿಸಲಾಗಲಿಲ್ಲ.
Related Articles
ಇಂಗ್ಲೆಂಡ್ ಮೊದಲ ಕ್ವಾರ್ಟರ್‌ನಲ್ಲೇ ಹಿಡಿತ ಸಾಧಿಸುವಲ್ಲಿ ಯಶಸ್ವಿ ಯಾಗಿತ್ತು. ಆಗಲೇ ಬೆನ್ನು ಬೆನ್ನಿಗೆ 5 ಪೆನಾಲ್ಟಿ ಕಾರ್ನರ್ ಪಡೆದ ಇಂಗ್ಲೆಂಡ್ ಆತಿಥೇಯರ ಮೇಲೆ ಸವಾರಿ ಮಾಡಲು ಹೊರಟಿತು. ದ್ವಿತೀಯ ಕ್ವಾರ್ಟರ್‌ನ ಆರಂಭದಲ್ಲೇ ಇಂಗ್ಲೆಂಡ್‌ಗೆ 6ನೇ ಪೆನಾಲ್ಟಿ ಕಾರ್ನರ್ ಲಭಿಸಿತು. ಆದರೆ ವ್ಯಾಲೇಸ್ ಜಖಾರಿ ಸ್ವಲ್ಪದರಲ್ಲೇ ಗೋಲ್ ಒಂದನ್ನು ಮಿಸ್ ಮಾಡಿದರು. ಭಾರತ ಬಚಾವಾಯಿತು.
37ನೇ ನಿಮಿಷದಲ್ಲಿ ಇಂಗ್ಲೆಂಡ್‌ಗೆ, ಇದರ ಮರು ನಿಮಿಷದಲ್ಲೇ ಭಾರತಕ್ಕೆ ಗೋಲು ಬಾರಿಸುವ ಉತ್ತಮ ಅವಕಾಶವಿತ್ತು. ಆದರೆ ಡೇವಿಡ್ ಕಾಂಡನ್ ಮತ್ತು ಹಾರ್ದಿಕ್ ಸಿಂಗ್ ಇಬ್ಬರೂ ಗುರಿ ತಪ್ಪಿದರು. 40ನೇ ಮತ್ತು 41ನೇ ನಿಮಿಷದಲ್ಲಿ ಇತ್ತಂಡಗಳಿಗೆ ಪುನಃ ಅವಕಾಶ ಸಿಕ್ಕಿತಾದರೂ ಗೋಲು ಮಾತ್ರ ದಾಖಲಾಗಲಿಲ್ಲ. “ಬಿರ್ಸಾ ಮುಂಡಾ ಸ್ಟೇಡಿಯಂ’ನಲ್ಲಿ ಕಿಕ್ಕಿ ರಿದು ನೆರೆದ 21 ಸಾವಿರದಷ್ಟು ಅಭಿಮಾನಿಗಳು ಈ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾದರು.
ಭಾರತ ಮೊದಲ ಪಂದ್ಯದಲ್ಲಿ ಸ್ಪೇನ್‌ಗೆ 2-0 ಸೋಲುಣಿಸಿತ್ತು. ಇಂಗ್ಲೆಂಡ್ 5-0 ಅಂತರದಿಂದ ವೇಲ್ಸ್ ವಿರುದ್ಧ ಗೆದ್ದು ಬಂದಿತ್ತು. ಭಾರತ ತನ್ನ ಕೊನೆಯ ಪಂದ್ಯದಲ್ಲಿ ವೇಲ್ಸ್ ವಿರುದ್ಧ ಆಡಲಿದೆ. ಆಂಗ್ಲರ ಪಡೆ ಸ್ಪೇನ್ ವಿರುದ್ಧ ಸೆಣಸಲಿದೆ.
ಖಾತೆ ತೆರೆದ ಸ್ಪೇನ್
ರೂರ್ಕೆಲ: “ಡಿ’ ವಿಭಾಗದ ಇನ್ನೊಂದು ಪಂದ್ಯದಲ್ಲಿ ಸ್ಪೇನ್ 5-1 ಗೋಲುಗಳಿಂದ ವೇಲ್ಸ್ ತಂಡಕ್ಕೆ ಸೋಲುಣಿಸಿ ಅಂಕದ ಖಾತೆ ತೆರೆಯಿತು. ಲೀಗ್ ಹಂತದ ಮೊದಲ ಮುಖಾಮುಖಿಯಲ್ಲಿ ಸ್ಪೇನ್ ಆತಿಥೇಯ ಭಾರತದ ವಿರುದ್ಧ ಸೋಲನುಭವಿಸಿತ್ತು.
ಇನ್ನೊಂದೆಡೆ ವೇಲ್ಸ್ ಆಡಿದ ಎರಡೂ ಪಂದ್ಯಗಳಲ್ಲಿ ಮುಗ್ಗರಿಸಿತು. ಮೊದಲ ಪಂದ್ಯದಲ್ಲಿ ಅದು ಇಂಗ್ಲೆಂಡ್ ವಿರುದ್ಧ 5-0 ಆಘಾತಕ್ಕೆ ಸಿಲುಕಿಸಿತ್ತು.
ಸ್ಪೇನ್ ಪರ ಮಾರ್ಕ್ (16 ಹಾಗೂ 38ನೇ ನಿಮಿಷ) ಮತ್ತು ಮಾರ್ಕ್ ಮಿರಾಲ್ಲೆಸ್ (32ನೇ ಹಾಗೂ 56ನೇ ನಿಮಿಷ) ತಲಾ 2 ಗೋಲು ಬಾರಿಸಿದರು. ಇನ್ನೊಂದು ಗೋಲು ನಾಯಕ ಅಲ್ವಾರೊ ಇಗ್ಲೆಸಿಯಾಸ್ ಅವರಿಂದ ಸಿಡಿಯಲ್ಪಟ್ಟಿತು. ವೇಲ್ಸ್ ತಂಡದ ಏಕೈಕ ಗೋಲಿಗೆ ಸಾಕ್ಷಿಯಾದವರು ಜೇಮ್ಸ್ ಕಾರ್ಸನ್ (52ನೇ ನಿಮಿಷ).
ಗುರುವಾರದ ಕೊನೆಯ ಲೀಗ್ ಪಂದ್ಯದಲ್ಲಿ ಸ್ಪೇನ್-ಇಂಗ್ಲೆಂಡ್ ಹಾಗೂ ವೇಲ್ಸ್-ಭಾರತ ಎದುರಾಗಲಿವೆ.