ಚೆನ್ನೈ:ಸಾಫ್ಟ್ ವೇರ್ ಕಂಪನಿಯಲ್ಲಿ ಬೆಳಗ್ಗಿನ ಪಾಳಿಯ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುವ ಸಂದರ್ಭದಲ್ಲಿ ಜಾಹಿರಾತು ಫಲಕ ದ್ವಿಚಕ್ರ ವಾಹನದ ಮೇಲೆ ಬಿದ್ದ ಪರಿಣಾಮ ಟೆಕ್ಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಚೆನ್ನೈನಲ್ಲಿ ನಡೆದಿದೆ.
ಕ್ರೋಮ್ ಪೇಟ್ ನ ನೆಮಿಲಿಚೆರೈ ನಿವಾಸಿ ಆರ್.ಶುಭಾಶ್ರೀ(24ವರ್ಷ) ಕಾನ್ಥನ್ ಚಾವಡಿಯಲ್ಲಿರುವ ಸಾಫ್ಟ್ ವೇರ್ ಸಂಸ್ಥೆಯಲ್ಲಿ ಮುಂಜಾನೆ 6ಗಂಟೆಯಿಂದ 2ಗಂಟೆವರೆಗೆ ಶಿಫ್ಟ್ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಜಾಹಿರಾತು ಫಲಕ ಆಕೆಯ ಮೇಲೆ ಹರಿದು ಬಿದ್ದಿತ್ತು.
ವಾಹನದ ಮೇಲೆ ಬಿದ್ದ ಪರಿಣಾಮ ಆಕೆ ರಸ್ತೆಗೆ ಬಿದ್ದಿದ್ದಳು..ಹಿಂದಿನಿಂದ ಬರುತ್ತಿದ್ದ ಟ್ಯಾಂಕರ್ ಆಕೆಯ ಮೇಲೆಯೇ ಹರಿದು ಹೋಗಿತ್ತು. ಈ ಘಟನೆ ಪಲ್ಲಾವರಂ-ತೋರೈಪಾಕ್ಕಂ ಸಮೀಪದ ಪಲ್ಲೈಕಾರಾನೈ ಎಂಬಲ್ಲಿ ನಡೆದಿತ್ತು.
ಕೂಡಲೇ ಶುಭಶ್ರೀಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು. ಕೆಲವು ತಿಂಗಳು ಕಳೆದಿದ್ದರೆ ಶುಭಶ್ರೀ ಕೆನಡಾಕ್ಕೆ ತೆರಳಲು ಸಿದ್ಧತೆ ನಡೆಸಿದ್ದಳು.
ಎಐಎಡಿಎಂಕೆ ಕೌನ್ಸಿಲರ್ ಜಯಗೋಪಾಲ್ ಪುತ್ರನ ಮದುವೆ ಹಿನ್ನೆಲೆಯಲ್ಲಿ ನಗರದಲ್ಲಿ ಶುಭಾಶಯ ಕೋರಿ ಭಾರೀ ಗಾತ್ರದ ಜಾಹೀರಾತು ಫಲಕಗಳನ್ನು ಹಾಕಿದ್ದರು. ಘಟನೆ ನಡೆಯುತ್ತಿದ್ದಂತೆಯೇ ಎಐಎಡಿಎಂಕೆ ಕಾರ್ಯಕರ್ತರು ಹಲವಾರು ಜಾಹೀರಾತು ಫಲಕಗಳನ್ನು ಕೆಳಗಿಳಿಸಿರುವುದಾಗಿ ವರದಿ ತಿಳಸಿದೆ.
ಜಾಹೀರಾತು ಫಲಕ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಬಳಿಕ ಮದ್ರಾಸ್ ಹೈಕೋರ್ಟ್ ರಾಜಕೀಯ ಪಕ್ಷಗಳ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದೆ. ರಾಜಕೀಯ ಪಕ್ಷಗಳು ಕಾನೂನು ಬಾಹಿರವಾಗಿ ಇಂತಹ ಜಾಹೀರಾತು ಫಲಕಗಳನ್ನು ಪ್ರದರ್ಶಿಸುವುದನ್ನು ಮುಂದುವರಿಸಿರುವುದಕ್ಕೆ ಚಾಟಿ ಬೀಸಿದೆ.