ಹೊಸದಿಲ್ಲಿ: ಹ್ಯೂಮನ್ ಮೆಟಾ ನ್ಯೂಮೋ ವೈರಸ್ (HMPV) ಹೊಸ ವೈರಸ್ ಏನಲ್ಲ, 2001ರಲ್ಲಿ ಮೊದಲ ಬಾರಿಗೆ ಗುರುತಿಸಲ್ಪಟ್ಟಿದ್ದು, ಇದು ಹಲವು ವರ್ಷಗಳಿಂದ ಜಾಗತಿಕವಾಗಿ ಹರಡುತ್ತಿದೆ. ಹೀಗಾಗಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಸ್ಪಷ್ಟಪಡಿಸಿದ್ದಾರೆ.
ಚೀನದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಭಾರತದಲ್ಲಿ 6 ಪ್ರಕರಣಗಳ ವರದಿಗಳ ನಂತರ ಆತಂಕ ಹೆಚ್ಚಾಗುತ್ತಿರುವುದರಿಂದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ “ಎಚ್ಎಂಪಿವಿ (ಹ್ಯೂಮನ್ ಮೆಟಾ ನ್ಯೂಮೋ ವೈರಸ್) ಹೊಸ ವೈರಸ್ ಅಲ್ಲ ಎಂದು ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ಇದು ಗಾಳಿಯ ಮೂಲಕ, ಉಸಿರಾಟದ ಮೂಲಕ ಹರಡುತ್ತದೆ. ಈ ಸೋಂಕು ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲ ಮತ್ತು ವಸಂತಕಾಲದ ಆರಂಭದಲ್ಲಿ ಈ ವೈರಸ್ ಹೆಚ್ಚು ಹರಡುತ್ತದೆ” ಎಂದು ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.
ಆರೋಗ್ಯ ಸಚಿವಾಲಯ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ಸಿಡಿಸಿ) ಜೊತೆಗೆ ಚೀನಾ ಮತ್ತು ನೆರೆಯ ದೇಶಗಳಲ್ಲಿನ ಪರಿಸ್ಥಿತಿಯ ಸೂಕ್ಷ್ಮವಾಗಿ ಗಮನಿಸುತ್ತಿದೆ. “ವಿಶ್ವ ಆರೋಗ್ಯ ಸಂಸ್ಥೆ (WHO) ಈ ಸೋಂಕಿನ ಬಗ್ಗೆ ಎಚ್ಚರ ವಹಿಸಿದೆ. ಅದರ ವರದಿಯನ್ನು ಶೀಘ್ರದಲ್ಲೇ ನಮ್ಮೊಂದಿಗೆ ಹಂಚಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಎಚ್ಎಂಪಿವಿ ಸಾಮಾನ್ಯವಾಗಿ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ, ಚಳಿಗಾಲದಲ್ಲಿ ಇದು ಹೆಚ್ಚು ಸಕ್ರಿಯವಾಗಿರುತ್ತದೆ. ತೀವ್ರತರವಾದ ರೋಗಲಕ್ಷಣಗಳು ಕಾಣಿಸಿಕೊಂಡರೆ ನೈರ್ಮಲ್ಯ ಕಾಪಾಡಿಕೊಳ್ಳಲು ಮತ್ತು ಆರೋಗ್ಯ ತಜ್ಞರ ಸಂಪರ್ಕಿಸಲು ಸಲಹೆ ನೀಡುತ್ತಾರೆ. ಇಲ್ಲಿಯವರೆಗೆ, ದೇಶದಲ್ಲಿ 6 ಎಚ್ಎಂಪಿವಿ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 2, ಕೋಲ್ಕತ್ತಾದಲ್ಲಿ 1, ಗುಜರಾತ್ನ ಅಹಮದಾಬಾದ್ನಲ್ಲಿ 1 ಹಾಗೂ ತಮಿಳುನಾಡಿನ ಚೆನ್ನೈನಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.