Advertisement

ಹಾವೇರಿಯಲ್ಲಿ 481 ಮಕ್ಕಳಿಗೆ ಎಚ್‌ಐವಿ ಸೋಂಕು

04:38 PM Dec 01, 2018 | Team Udayavani |

ಹಾವೇರಿ: ಜಿಲ್ಲೆಯಲ್ಲಿ 481 ಮಕ್ಕಳಲ್ಲಿ ಎಚ್‌ ಐವಿ ಸೋಂಕು ಇರುವುದು ಕಂಡು ಬಂದಿದ್ದು, ಇದರಲ್ಲಿ 223 ಮಕ್ಕಳು ಚಿಕಿತ್ಸೆಯಿಂದ ದೂರ ಉಳಿದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 7,921 ಮಕ್ಕಳನ್ನು ಎಚ್‌ ಐವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 481 ಮಕ್ಕಳು ಎಚ್‌ಐವಿ ಸೋಂಕಿತರಾಗಿರುವುದು ಪತ್ತೆಯಾಗಿದೆ. ಇವರಲ್ಲಿ 319 ಮಕ್ಕಳು ಎಆರ್‌ ಟಿನಲ್ಲಿ ನೋಂದಾಯಿತರಾಗಿದ್ದು, 258 ಮಕ್ಕಳು ಎಆರ್‌ಟಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಇನ್ನುಳಿದ 223 ಮಕ್ಕಳು ಚಿಕಿತ್ಸೆಯಿಂದ ದೂರ ಉಳಿದಿದ್ದಾರೆ.

Advertisement

ಜಿಲ್ಲೆಯಲ್ಲಿ 2002ರಿಂದ 2018 ನವೆಂಬರ್‌ ವರೆಗೆ 3,62,971 ಸಾಮಾನ್ಯ ಜನರನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 8079 ಎಚ್‌ಐವಿ ಸೋಂಕಿತರು ಕಂಡು ಬಂದಿದ್ದಾರೆ. 3,51,625 ಗರ್ಭಿಣಿಯರನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 624 ಗರ್ಭಿಣಿಯರು ಎಚ್‌ಐವಿ ಸೋಂಕಿತರು ಇರುವುದು ಗೊತ್ತಾಗಿದೆ. 2002ರಲ್ಲಿ 39, 2003ರಲ್ಲಿ 196, 2004ರಲ್ಲಿ 263, 2005ರಲ್ಲಿ 328, 2006ರಲ್ಲಿ 323, 2007ರಲ್ಲಿ 597, 2008ರಲ್ಲಿ 694, 2009ರಲ್ಲಿ 884, 2010ರಲ್ಲಿ 1035 ಜನ ಸೋಂಕಿತರು ಪತ್ತೆಯಾಗಿದ್ದರು. 2002ರಿಂದ 2010ರವರೆಗೆ ಏರುಮುಖವಾಗಿದ್ದ ಏಡ್ಸ್‌ ಪೀಡಿತರ ಸಂಖ್ಯೆ ನಂತರದ ವರ್ಷಗಳಲ್ಲಿ ಇಳಿಮುಖ ಕಂಡಿದೆ. 2011ರಲ್ಲಿ 866, 2012ರಲ್ಲಿ 652, 2013ರಲ್ಲಿ 549, 2014ರಲ್ಲಿ 494, 2015ರಲ್ಲಿ 372, 2016ರಲ್ಲಿ 396, 2017ರಲ್ಲಿ 256 ಜನ ಸೋಂಕಿತ ಪರೀಕ್ಷೆಯಲ್ಲಿ ಪತ್ತೆಯಾಗಿದ್ದಾರೆ.

ಜಿಲ್ಲಾಸ್ಪತ್ರೆಯ ಎಆರ್‌ಟಿ ಕೇಂದ್ರದಲ್ಲಿ ಪ್ರಸ್ತುತ ಎಚ್‌ಐವಿ ಸೋಂಕಿತರು ನೋಂದಣಿಯಾದವರ ಸಂಖ್ಯೆ 7371 ಇದ್ದು, 5748 ಸೋಂಕಿತರಿಗೆ ಎಆರ್‌ಟಿ ಮಾತ್ರೆ ಪ್ರಾರಂಭಿಸಲಾಗಿದ್ದು, ಪ್ರಸ್ತುತ 3595 ಎಚ್‌ಐವಿ ಸೋಂಕಿತರು ಮಾತ್ರ ಎಆರ್‌ಟಿ ಮಾತ್ರೆಯನ್ನು ಪಡೆಯುತ್ತಿದ್ದಾರೆ. ಅರ್ಧದಷ್ಟು ಸೋಂಕಿತರು ಚಿಕಿತ್ಸೆಯಿಂದ ದೂರ ಉಳಿದಿದ್ದಾರೆ ಎಂಬ ಅಂಕಿ-ಸಂಖ್ಯೆ ಆರೋಗ್ಯ ಇಲಾಖೆಯಲ್ಲಿದೆ.

ಉಚಿತ ಸೌಲಭ್ಯಗಳು: ಎಲ್ಲ ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಐಸಿಟಿಸಿ ಕೇಂದ್ರಗಳಲ್ಲಿ ಉಪ-ಎಆರ್‌ಟಿ ಕೇಂದ್ರಗಳ ಸೌಲಭ್ಯವಿದೆ. ಇಲ್ಲಿ ಉಚಿತ ಆಪ್ತ ಸಮಾಲೋಚನೆ ಮತ್ತು ಉಚಿತವಾಗಿ ಎಚ್‌ಐವಿ ರಕ್ತ ತಪಾಸಣೆ ಮಾಡಲಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರವಿದ್ದು, ಎಆರ್‌ಟಿ ಕೇಂದ್ರದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

ಉಚಿತ ಸೌಲಭ್ಯಗಳಿದ್ದರೂ ಅರ್ಧದಷ್ಟು ಎಚ್‌ಐವಿ ಸೋಂಕಿತರು ಚಿಕಿತ್ಸೆಯಿಂದ ದೂರವಿದ್ದಾರೆಂದರೆ ಎಚ್‌ಐವಿ ಸೋಂಕು ಪೀಡಿತರಲ್ಲಿ ಜಾಗೃತಿ, ಸರಿಯಾದ ತಿಳಿವಳಿಕೆ ನೀಡುವಲ್ಲಿ ಇಲಾಖೆ ಅಧಿ ಕಾರಿಗಳು, ಲಕ್ಷಾಂತರ ರೂ. ಪಡೆಯುವ ಸರ್ಕಾರೇತರ ಸಂಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬುದು ಸಾಬೀತಾಗಿದೆ.

Advertisement

ಆರೋಗ್ಯ ಇಲಾಖೆಯಿಂದ, ಸರ್ಕಾರೇತರ ಸಂಸ್ಥೆಗಳ ಮೂಲಕ ಎಚ್‌ಐವಿ ಸೋಂಕಿನ ಬಗ್ಗೆ ಮಾಹಿತಿ ಗುಪ್ತವಾಗಿಡುವ ಬಗ್ಗೆ ಸಾಕಷ್ಟು ತಿಳಿವಳಿಕೆ ನೀಡಿದರೂ ಎಚ್‌ ಐವಿ ಸೋಂಕಿತರು ಎಆರ್‌ಟಿಗೆ ಬರುವುದನ್ನು ಯಾರಾದರೂ ನೋಡಿ ಬಿಟ್ಟರೆ ಎಂಬ ಭಯದಿಂದಾಗಿ ಚಿಕಿತ್ಸೆಗೆ ಬರುತ್ತಿಲ್ಲ. ಆದರೂ ಅವರನ್ನು ಮನವೊಲಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಲಾಗುತ್ತಿದೆ.
ಡಾ.ರಾಘವೇಂದ್ರ ಎಚ್‌.ಎಸ್‌,
ಜಿಲ್ಲಾ ಆರೋಗ್ಯಾಧಿಕಾರಿ

ಎಚ್‌.ಕೆ.ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next