Advertisement

ಹಿಟ್ &ರನ್: ಅಕಾಲಿಕವಾಗಿ ಅಗಲಿದ ಡಾ|ರಾಜ್ ಮನೆತನದ ಆಪ್ತ ಮುತ್ತಪ್ಪ

09:41 PM Sep 24, 2022 | Team Udayavani |

ಮಹಾಲಿಂಗಪುರ: ಪಟ್ಟಣದ ನಿವಾಸಿ, ಛಾಯಾಗ್ರಾಹಕ ಮುತ್ತಪ್ಪ ಬಸಪ್ಪ ಕುಂಬಾರ ಅವರು ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.

Advertisement

ಶುಕ್ರವಾರ ರಾತ್ರಿ ತನ್ನ ಪುತ್ರ 10 ವರ್ಷದ ಮಯೂರನನ್ನು ಕೂರಿಸಿಕೊಂಡು ಸಮೀರವಾಡಿಯಿಂದ ಮಹಾಲಿಂಗಪುರದ ಕಡೆಗೆ ಬರುತ್ತಿರುವಾಗ ಅಪರಿಚಿತ ವಾಹನದ ಚಾಲಕ ಅತೀ ವೇಗವಾಗಿ ನಿರ್ಲಕ್ಷ್ಯತನದಿಂದ ಬಂದು ಎದುರಿನಿಂದ ಹಾಯಿಸಿದ್ದರಿಂದ ಮುತ್ತಪ್ಪ ತಲೆಗೆ ಹಾಗೂ ಬಲಭುಜದ ಹತ್ತಿರ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.

ಅಪಘಾತದಲ್ಲಿ ಮುತ್ತಪ್ಪ ಅವರ ಮಗ ಮಯೂರ್ ಬಲಗಾಲಿಗೆ ಗಂಭೀರ ಗಾಯವಾಗಿದೆ. ಅಪಘಾತಕ್ಕೆ ಕಾರಣವಾದ ವಾಹನ ಚಾಲಕ ಸ್ಥಳದಲ್ಲಿ ವಾಹನ ನಿಲ್ಲಿಸದೆ ಪೊಲೀಸ್ ಠಾಣೆಗೂ ತಿಳಿಸದೆ ವಾಹನ ಸಮೇತ ಪರಾರಿಯಾಗಿದ್ದಾನೆ.ಮುತ್ತಪ್ಪನ ಪತ್ನಿ ಶೋಭಾ ಮುತ್ತಪ್ಪ ಕುಂಬಾರ ಅವರು ನೀಡಿದ ದೂರಿನ ಮೇರೆಗೆ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜ್ ಮನೆತನದ ಆಪ್ತ
ಕುಂಬಾರ ಕುಟುಂಬದ ಮುತ್ತಪ್ಪ ಪಟ್ಟಣದ ಹಿರಿಯರಾದ ಬಸನಗೌಡ ಪಾಟೀಲ ಮತ್ತು ಹುಬ್ಬಳ್ಳಿಯ ಚಿತ್ರವಿತರಕರಾದ ಎಂ.ಎನ್.ಮೋರೆ ಅವರ ಸಹಕಾರದಿಂದಾಗಿ ಡಾ| ರಾಜಕುಮಾರ್ ಅವರ ಜೀವಿತಾವಧಿಯಲ್ಲಿ ಸುಮಾರು 10-12 ವರ್ಷಗಳ ಕಾಲ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದರು. ಡಾ| ರಾಜ್ ಅವರ ನಿಧನದ ನಂತರ 2008-09 ರ ವೇಳೆಗೆ ಮರಳಿ ಮಹಾಲಿಂಗಪುರಕ್ಕೆ ಬಂದು ಉಪಜೀವನಕ್ಕಾಗಿ ಸಮೀರವಾಡಿಯಲ್ಲಿ ಡಾ|ರಾಜ್ ಪೋಟೋ ಸ್ಟುಡಿಯೋ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ರಾಜಕುಮಾರ್ ಅವರ ಮೂವರು ಮಕ್ಕಳು ಮತ್ತು ಅವರ ಕುಟುಂಬಸ್ಥರಿಗೆ ಆಪ್ತರಾಗಿದ್ದ ಮುತ್ತು ಅವರು ಪ್ರತಿ ವರ್ಷ ಡಾ.ರಾಜಕುಮಾರ್ ಹುಟ್ಟುಹಬ್ಬದ ದಿನ ಬೆಂಗಳೂರಿಗೆ ತೆರಳಿ ಡಾ.ರಾಜ್ ಕುಟುಂಬದವರ ಜತೆ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗುತ್ತಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್
ಸ್ನೇಹಜೀವಿಯಾಗಿದ್ದ ಮುತ್ತಪ್ಪ ಅವರನ್ನು ಎಲ್ಲರೂ ಮುತ್ತುರಾಜ ಎಂದೇ ಕರೆಯುತ್ತಿದ್ದರು. ಮುತ್ತು ಅವರ ಅಕಾಲಿಕ ನಿಧನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪವರ್‌ಸ್ಟಾರ್ ಪುನೀತ್ ರಾಜುಕುಮಾರ್ ನಿಧನರಾಗಿದ್ದ ವೇಳೆ ಅವರ ಪಾರ್ಥೀವ ಶರೀರದ ಮುಂದೆ ಕುಳಿತು ಮುತ್ತಪ್ಪ ಗೋಳಾಡುತ್ತಿರುವ ದೃಶ್ಯವು ವೈರಲ್ ಆಗಿದೆ.

Advertisement

ನೂರಾರು ಜನರು ರಾಜ್ ಕುಟುಂಬಸ್ಥರ ಜತೆಗಿರುವ ಮುತ್ತು ಅವರ ಪೋಟೋ ಮತ್ತು ವಿಡಿಯೋಗಳ ಮೂಲಕ ಡಾ| ರಾಜ ಮತ್ತು ಡಾ| ಪುನೀತ್ ಅವರತ್ತ ಪ್ರಯಾಣ ಬೆಳೆಸಿದ ನಮ್ಮ ಮುತ್ತುರಾಜ ಎಂದು ಬರೆದುಕೊಂಡು ಕಂಬನಿ ಮಿಡಿದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next