ಬನಾರಸ್ ಸಿನಿಮಾಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಝೈದ್ ಖಾನ್ ನಾಯಕನಾಗಿ ಚೊಚ್ಚಲ ಹೆಜ್ಜೆ ಇಟ್ಟಿರುವ ಚಿತ್ರ ಪಂಚ ಭಾಷೆಯಲ್ಲಿಯೂ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕನ ಆಗಮನವಾದಂತಾಗಿದೆ. ಆರಂಭದಿಂದಲೂ ನಾನಾ ಬಗೆಯಲ್ಲಿ ಕುತೂಹಲ ಮೂಡಿಸಿದ್ದ ಬನಾರಸ್ ಕಣ್ತುಂಬಿಕೊಂಡ ಸಿನಿಮಾಪ್ರೇಮಿಗಳು ಜೈಕಾರ ಹಾಕುತ್ತಿದ್ದಾರೆ. ಟ್ರೇಲರ್ ಮೂಲಕ ಹೊಸ ಲೋಕ ಪರಿಚಯಿಸಿದ್ದ ಚಿತ್ರತಂಡ ಹಾಡುಗಳ ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ಗಮನಸೆಳೆದಿತ್ತು.
ಇದನ್ನೂ ಓದಿ:ಟ್ರೇಲರ್ ನಲ್ಲಿ ಪ್ರಜ್ವಲ್ ‘ಅಬ್ಬರ’: ನ.18ಕ್ಕೆ ಚಿತ್ರ ರಿಲೀಸ್
ಒಂದು ಸಿನಿಮಾ ಗೆಲ್ಲಲು ಕಥೆ, ಚಿತ್ರಕಥೆ, ತಾರಾಬಗಳದ ಜೊತೆಗೆ ಹಾಡು ಕೂಡ ಬಹಳ ಮುಖ್ಯ. ಒಂದು ಸಿನಿಮಾ ಹೇಗಿದೆ ಎಂಬ ಝಲಕ್ ಗಳನ್ನು ಹಾಡಿನ ಮೂಲಕ ಕಟ್ಟಿಕೊಡಲಾಗುತ್ತದೆ. ಹಾಡುಗಳು ಸಿನಿಮಾದ ಆಮಂತ್ರಣವಿದ್ದಂತೆ. ರಿಲೀಸ್ ಆದ ಗೀತೆಗಳು ಹಿಟ್ ಲೀಸ್ಟ್ ಸೇರಿದರೆ ಸಿನಿಮಾ ಅರ್ಧ ಗೆದ್ದಂತೆ ಅನ್ನೋ ಮಾತು ಇಂಡಸ್ಟ್ರೀಯಲ್ಲಿ ಚಾಲ್ತಿಯಲ್ಲಿದೆ. ಅದಕ್ಕೆ ಬನಾರಸ್ ಸಿನಿಮಾವೇನು ಹೊರತಲ್ಲ.
ಮಾಯಾಗಂಗೆ ಪ್ರೇಮಗೀತೆ ಅನಾವರಣ ಮಾಡುವ ಮೂಲಕ ಟ್ರೆಂಡ್ ಸೃಷ್ಟಿಸಿದ್ದ ಬನಾರಸ್ ಬಳಗ ಆ ಬಳಿಕ ದೃಶ್ಯವೈಭೋಗದ ಬೆಳಕಿನ ಕವಿತೆ ಎಂಬ ಗಾನ ಲಹರಿಯನ್ನು ಬಿಡುಗಡೆ ಮಾಡಿತ್ತು. ಐದು ಭಾಷೆಯಲ್ಲಿಯೂ ರಿಲೀಸ್ ಆಗಿದ್ದ ಈ ಹಾಡನ್ನು ಕೇಳುಗರು ಹೃದಯಕ್ಕಿಳಿಸಿಕೊಂಡಿದ್ದರು. ಬಲು ಶ್ರೀಮಂತಿಕೆಯಿಂದ ಮೂಡಿಬಂದಿರುವ ಈ ಹಾಡು ಎರಡು ವಾರಗಳ ಹಿಂದೆ ಮೂರು ಮಿಲಿಯನ್ ವೀಕ್ಷಣೆ ಕಂಡಿದ್ದು, ಇದೀಗ ಏಳು ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
ಝೈದ್ ಖಾನ್ ಹಾಗೂ ಸೋನಲ್ ಮೊಂಥೆರೋ ಕಾಣಿಸಿಕೊಂಡಿದ್ದ ಬೆಳಕಿನ ಕವಿತೆ ಹಾಡು ಸಾಹಿತ್ಯ, ಸಂಗೀತ, ಕಲಾ ನಿರ್ದೇಶನ, ಕೋರಿಯೋಗ್ರಫಿ ಎಲ್ಲಾ ವಿಧದಲ್ಲಿಯೂ ಅದ್ಧೂರಿತನದಿಂದ ಮೂಡಿಬಂದಿದೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಅರುಣ್ ಸಾಗರ್ ಕಲಾ ನಿರ್ದೇಶನ ಮತ್ತು ಎ ಹರ್ಷ ಅವರ ಕೋರಿಯೋಗ್ರಫಿ, ಅಜನೀಶ್ ಲೋಕನಾಥ್ ಸಂಗೀತದ ಇಂಪು, ಅದ್ವೈತ್ ಗುರುಮೂರ್ತಿ ಛಾಯಾಗ್ರಾಹಣದ ತಂಪು ಎಲ್ಲವೂ ಹಾಡಿನ ಅಂದವನ್ನು ಚೆಂದ ಮಾಡಿದೆ. ಜಯತೀರ್ಥ ನಿರ್ದೇಶನದಲ್ಲಿ ತಯಾರಾಗಿರುವ ಬನಾರಸ್ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಸಿನಿಮಾತಂಡದ ಖುಷಿಯನ್ನು ಇಮ್ಮಡಿಗೊಳಿಸಿದೆ.