Advertisement

Manipur: ಮಣಿಪುರ ಸಂಘರ್ಷದ ಇತಿಹಾಸ- ಇನ್ನೂ ಆರದ ಗಲಭೆಯ ಬೆಂಕಿ

11:56 PM Jun 02, 2023 | Team Udayavani |

ಮೈತೇಯಿ ಮತ್ತು ಬುಡಕಟ್ಟು ಸಮುದಾಯದ ನಡುವೆ ಎದ್ದ “ಪರಿಶಿಷ್ಟ ಪಂಗಡ ಸ್ಥಾನಮಾ”‘ದ ಕಿಡಿ ಇಡೀ ಮಣಿಪುರವನ್ನು ಹೊತ್ತಿ ಉರಿಯುವಂತೆ ಮಾಡಿದ್ದು, ಗಲಭೆಯ ಬೆಂಕಿ ಇನ್ನೂ ಆರಿಲ್ಲ. ಹಾಗೆ ನೋಡಿದರೆ ಮಣಿಪುರವೆಂಬ ಪುಟ್ಟ ರಾಜ್ಯಕ್ಕೆ ಹಿಂಸಾಚಾರ, ಪ್ರತ್ಯೇಕತಾವಾದದ ಕೂಗು ಹೊಸ ತೇನಲ್ಲ. 50ರ ದಶಕದಿಂದಲೇ ಇಲ್ಲಿ ಬಂಡುಕೋರರ ಹೆಜ್ಜೆಗುರುತು ಕಾಣಿಸಿಕೊಂಡಿತ್ತು. ತದನಂತರ ಬೇರೆ ಬೇರೆ ಉದ್ದೇಶ, ಕಾರಣಗಳೊಂದಿಗೆ ಹತ್ತು ಹಲವು ಗುಂಪುಗಳು, ಸಂಘಟನೆಗಳು ಹುಟ್ಟಿಕೊಂಡವು. ಮಣಿಪುರದ ಈ ಸಂಘರ್ಷದ ಇತಿಹಾಸದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

Advertisement

ಸಂಘರ್ಷ ಹೊಸತಲ್ಲ

ಭಾರತದ ಅತೀ ಪುರಾತನ ಬಂಡುಕೋರ ಚಳವಳಿಗಳ ಇತಿಹಾಸ ಕೆದಕಿದರೆ ನೆನಪಿಗೆಬರುವ ರಾಜ್ಯಗಳಲ್ಲಿ ಮಣಿಪುರವೂ ಒಂದು. 1950ರ ದಶಕದಲ್ಲಿ ನಾಗಾ ರಾಷ್ಟ್ರೀಯ ಚಳವಳಿ ಆರಂಭವಾಗಿ, ಸ್ವತಂತ್ರ ನಾಗಾಲಿಮ್‌ಗಾಗಿ ಹೋರಾಟವು ಮಣಿಪುರದ ಹಲವು ಭಾಗಗಳಲ್ಲಿ ವ್ಯಾಪಿಸಿತ್ತು. ಅನಂತರದಲ್ಲಿ ಎನ್‌ಎಸ್‌ಸಿಎಂ-ಐಎಂ ಭಾರತ ಸರಕಾರದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದು 1997ರಲ್ಲಿ. ಈ ಚಳವಳಿಯು ಉತ್ತುಂಗದಲ್ಲಿದ್ದಾಗಲೇ, ಮಣಿಪುರದ ದೊರೆ ಮಹಾರಾಜ ಬೋಧಚಂದ್ರ ಮತ್ತು ಭಾರತ ಸರಕಾರದ ನಡುವಿನ ವಿಲೀನ ಒಪ್ಪಂದವನ್ನು ಮಣಿಪುರದ ಮೈತೇಯಿ ಸಮುದಾಯ ವಿರೋಧಿಸಿತ್ತು.

ಚೀನದಿಂದ ಶಸ್ತ್ರಾಸ್ತ್ರ ತರಬೇತಿ

ಭಾರತದಿಂದ ಪ್ರತ್ಯೇಕಗೊಳ್ಳುವ ಕೂಗಿನೊಂದಿಗೆ 1964ರಲ್ಲಿ ಯುನೈಟೆಡ್‌ ನ್ಯಾಶನಲ್‌ ಲಿಬರೇಶನ್‌ ಫ್ರಂಟ್‌(ಯುಎನ್‌ಎಲ್‌ಎಫ್) ರೂಪುಗೊಂಡಿತು. ಬಳಿಕ ಮೈತೇಯಿ ಬಂಡುಕೋರರ ಸಮೂಹ ಅಥವಾ ಕಣಿವೆ ಬಂಡುಕೋರರ ಗುಂಪು ಪೀಪಲ್ಸ್‌ ರೆವೊಲ್ಯೂಶನರಿ ಪಾರ್ಟಿ ಆಫ್ ಕಾಂಗ್ಲೆಪಾಕ್‌(ಪ್ರೀಪಾಕ್‌) ಮತ್ತು ಪೀಪಲ್ಸ್‌ ಲಿಬರೇಶನ್‌ ಆರ್ಮಿ(ಪಿಎಲ್‌ಎ) ಎಂಬ ಹೆಸರಿನೊಂದಿಗೆ ಅಸ್ತಿತ್ವಕ್ಕೆ ಬಂದವು. ಈ ಬಂಡುಕೋರರು ಚೀನದಿಂದ ಶಸ್ತ್ರಾಸ್ತ್ರಗಳ ತರಬೇತಿ ಪಡೆಯಲಾರಂಭಿಸಿದರು. 2 ಉದ್ದೇಶಗಳೊಂದಿಗೆ ಈ ಗುಂಪುಗಳು ಕಾರ್ಯಾಚರಣೆ ಆರಂಭಿಸಿದವು. ಅವೆಂದರೆ ಭಾರತದಿಂದ ಸ್ವತಂತ್ರಗೊಳ್ಳುವುದು ಮತ್ತು ನಾಗಾ ಬಂಡುಕೋರರನ್ನು ಹಿಮ್ಮೆಟ್ಟಿಸುವುದು.

Advertisement

ಕುಕಿ-ಝೋಮಿ ಗ್ರೂಪ್‌

ಕುಕಿ-ಝೋಮಿ ಬಂಡುಕೋರರ ಗುಂಪು ವಾಸ್ತವದಲ್ಲಿ ಅಸ್ತಿತ್ವಕ್ಕೆ ಬಂದಿದ್ದೇ ನಾಗಾಆಕ್ರಮಣಕ್ಕೆ ಪ್ರತಿಯಾಗಿ. 1993ರಲ್ಲಿ ಎನ್‌ಎಸ್‌ಸಿಎನ್‌-ಐಎಂ ಬಂಡುಕೋರರು ನಡೆಸಿದ ಮಾರಣಹೋಮದಲ್ಲಿ ಸಾವಿರಾರು ಕುಕಿಗಳು ನಿರಾಶ್ರಿತರಾದರು. ಈ ಘಟನೆಯ ಬಳಿಕ ಕುಕಿ-ಝೋಮಿ ಬುಡಕಟ್ಟು ಜನಾಂಗವು ವಿವಿಧ ಸಶಸ್ತ್ರ ಗುಂಪುಗಳನ್ನು ಸೇರಿಸಿಕೊಂಡು ಸಂಘಟಿತಗೊಳ್ಳಲು ಶುರು ಮಾಡಿತು.

ಸರಕಾರ ಮಾಡಿದ್ದೇನು?

ನಾಗಾ ಪ್ರತ್ಯೇಕತಾವಾದಿ ಚಟುವಟಿಕೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ 1958ರಲ್ಲಿ ಭಾರತ ಸರಕಾರವು ಸಶಶŒ ಪಡೆಗಳ ವಿಶೇಷಾಧಿಕಾರ ಕಾಯ್ದೆ ಜಾರಿ ಮಾಡಿತು.ಆರಂಭದಲ್ಲಿ ನಾಗಾಲ್ಯಾಂಡ್‌ ಪೂರ್ತಿ ಮತ್ತು ಮಣಿಪುರದ ಕೆಲ ಭಾಗಗಳಲ್ಲಿ ಕಾಯ್ದೆ ಜಾರಿಯಾಯಿತು. ಕಣಿವೆಯಲ್ಲಿ ಬಂಡುಕೋರರ ಕಿರಿಕ್‌ ಜಾಸ್ತಿಯಾದ ಬಳಿಕ ಮಣಿಪುರದಾದ್ಯಂತ ಕಾಯ್ದೆ ವಿಸ್ತರಿಸಲಾಯಿತು.1980ರಲ್ಲಿ ಮಣಿಪುರವನ್ನು “ಸಂಘರ್ಷಪೀಡಿತ ಪ್ರದೇಶ’ ಎಂದು ಘೋಷಿಸಲಾಯಿತು. ಶಾಂತಿ ಮಾತುಕತೆಗೂ ಹಲವು ಪ್ರಯತ್ನಗಳು ನಡೆದವು.2008ರಲ್ಲಿ ಕೇಂದ್ರ, ರಾಜ್ಯ ಮತ್ತು ಕುಕಿ-ಝೋಮಿ ಗುಂಪುಗಳ ನಡುವೆ “ಕಾರ್ಯಾಚರಣೆ ಸ್ಥಗಿತ'(ಸಸ್ಪೆನ್ಶನ್‌ ಆಫ್ ಆಪರೇಶನ್‌) ಎಂಬ ತ್ರಿಪಕ್ಷೀಯ ಒಪ್ಪಂದ ನಡೆಯಿತು.ಅನಂತರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕ್ರಮೇಣ ಸುಧಾರಣೆಯಾಗಿ, ಹಲವು ಪ್ರದೇಶಗಳಿಂದ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವಾಪಸ್‌ ಪಡೆಯಲಾಯಿತು.

ರಾಜಕೀಯ, ಸಮಾಜದ ಮೇಲೆ ಪ್ರಭಾವ

ಬಂಡುಕೋರ ಸಂಘಟನೆಗಳು ಮಣಿಪುರ ಜನರ ದೈನಂದಿನ ಬದುಕಿನೊಳಗೆ ಸೂಕ್ಷ್ಮವಾಗಿ ಹೆಣೆಯಲ್ಪಟ್ಟಿವೆ. ಈ ಸಂಘಟನೆಗಳು ದಾಳಿ ನಡೆಸುವುದು, ಹಿಂದಿ ಸಿನೆಮಾ ಹಾಗೂ ಸಂಗೀತದ ಮೇಲೆ ನಿರ್ಬಂಧ ಸಹಿತ ಹಲವು ನೀತಿಸಂಹಿತೆಗಳನ್ನು ಹೇರುತ್ತಿರುತ್ತವೆ. ಸಾರ್ವಜನಿಕರ ಮೇಲೆ ತೆರಿಗೆಯನ್ನೂ ವಿಧಿಸುತ್ತವೆ. ರಾಜ್ಯದ ರಾಜಕೀಯ ಜೀವನದ ಮೇಲೂ ಉಗ್ರರ ಪ್ರಭಾವ ಇದೆ. ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೂ ಬಂಡುಕೋರರ ಬೆಂಬಲದೊಂದಿಗೆ ಕಣಕ್ಕಿಳಿಯುವುದು, ಯಾರು ಗೆಲ್ಲಬೇಕು ಎಂದು ಜನರ ಮೇಲೆ ಈ ಸಂಘಟನೆಗಳೇ ಒತ್ತಡ ಹೇರುವುದು ಮುಂತಾದ ಘಟನೆಗಳು ಈಗಲೂ ನಡೆಯುತ್ತಿವೆ.

ಪಿಯುಎಲ್‌ಎಫ್ ಹುಟ್ಟು

ಇದೇ ಸಮಯದಲ್ಲಿ ಮೈತೇಯಿಗಳು ಮತ್ತು ಮೈತೇಯಿ ಪಂಗಾಲ್‌(ಮುಸ್ಲಿಮರು)ಗಳ ನಡುವೆ ಘರ್ಷಣೆಗಳು ಆರಂಭಗೊಂಡವು. ಇದರ ಪರಿಣಾಮವೆಂಬಂತೆ ಹುಟ್ಟಿದ್ದೇ ಪೀಪಲ್ಸ್‌ ಯುನೈಟೆಡ್‌ ಲಿಬರೇಶ‌ನ್‌ ಫ್ರಂಟ್‌ ಎಂಬ ಇಸ್ಲಾಮಿಕ್‌ ಬಂಡುಕೋರರ ಸಂಘಟನೆ. ಪ್ರಸ್ತುತ ಈ ಗುಂಪು ಮಣಿಪುರದಲ್ಲಿ ಸಕ್ರಿಯವಾಗಿಲ್ಲ.

ಪ್ರಮುಖ ಬಂಡುಕೋರ ಸಂಘಟನೆಗಳು

ಮಣಿಪುರದಲ್ಲಿ ಹುಟ್ಟಿಕೊಂಡ ಪ್ರಮುಖ ಪ್ರತ್ಯೇಕತಾವಾದಿ ಸಮೂಹಗಳೆಂದರೆ ಕುಕಿ ನ್ಯಾಶನಲ್‌ ಆರ್ಗನೈಸೇಶನ್‌, ಕುಕಿ ರೆವೊಲ್ಯೂಶನರಿ ಆರ್ಮಿ, ಝೋಮಿ ರೀ ಯುನಿಫಿಕೇಶ‌ನ್‌ ಆರ್ಗನೈಸೇಶ‌ನ್‌, ಝೋಮಿ ರೆವೊಲ್ಯೂಶ‌ನರಿ ಆರ್ಮಿ, ಕುಕಿ ನ್ಯಾಶ‌ನಲ್‌ ಫ್ರಂಟ್‌, ಕುಕಿ ನ್ಯಾಶ‌ನಲ್‌ ಲಿಬರೇಶ‌ನ್‌ ಫ್ರಂಟ್‌, ಯುನೈಟೆಡ್‌ ಕುಕಿ ಲಿಬರೇಶನ್‌ ಫ್ರಂಟ್‌ ಮತ್ತು ಕುಕಿ ನ್ಯಾಶನಲ್‌ ಆರ್ಮಿ. ಕಣಿವೆಯ ಬಂಡುಕೋರರ ಸಮೂಹಗಳಲ್ಲಿ ಯುಎನ್‌ಎಲ್‌ಎಫ್ ಅನ್ನು “ಮೈತೇಯಿ ಬಂಡುಕೋರರ ಗುಂಪುಗಳ ತಾಯಿ’ ಎಂದೇ ಕರೆಯಲಾಗುತ್ತದೆ. ಇದು ಇತ್ತೀಚಿನವರೆಗೂ ಅತ್ಯಂತ ಪ್ರಬಲ ಸಮೂಹವಾಗಿ ಉಳಿದಿತ್ತು. ಹಲವು ಬಾರಿ ಸುಧಾರಿತ ಸ್ಫೋಟಕಗಳನ್ನು ಸ್ಫೋಟಿಸಿ ಭದ್ರತಾ ಪಡೆಗಳ ವಿರುದ್ಧ ದಾಳಿಗಳನ್ನೂ ನಡೆಸಿತ್ತು. ಆದರೆ ಕ್ರಮೇಣ ಎಲ್ಲ ಗುಂಪುಗಳೂ ದುರ್ಬಲಗೊಳ್ಳುತ್ತಾ ಸಾಗಿದವು. ಯುಎನ್‌ಎಲ್‌ಎಫ್ ಈಗ ಒಳಜಗಳದಿಂದಾಗಿ ಮೂರು ಗುಂಪುಗಳಾಗಿ ಹೋಳಾಗಿದೆ.

ಮನೋಹರ ಪ್ರಸಾದ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next