Advertisement

ದುಬಾರಿ ಲ್ಯಾಂಬೋರ್ಗಿನಿ ಕಾರು ನಿರ್ಮಾಣದ ಹಿಂದಿದೆ ರೋಚಕ ಕಥೆ

07:42 AM Jun 02, 2021 | ಮಿಥುನ್ ಪಿಜಿ |

ದುಬಾರಿ ಹಾಗೂ ಐಷಾರಾಮಿ ಸ್ಪೋರ್ಟ್ಸ್ ಕಾರುಗಳಲ್ಲಿ ಲ್ಯಾಂಬೋರ್ಗಿನಿಗೆ ಮೊದಲ ಸ್ಥಾನ. ಇದರ ಪರ್ಫಾಮೆನ್ಸ್, ಲುಕ್, ಎಂಜಿನ್ ಗೆ ಸರಿಸಾಟಿ ಇಲ್ಲ. ಆದ ಕಾರಣ ಈ ಕಾರು ಜಗತ್ತಿನಾದ್ಯಂತ  ಪ್ರಸಿದ್ದಿ ಪಡೆದಿದೆ. ಈ ಸಂಸ್ಥೆಯ ಹೊಸ ಕಾರು ಬಿಡುಗಡೆಯಾದರೇ  ಅದು ವಿಶ್ವದಾದ್ಯಂತ ಕ್ಷಣ ಮಾತ್ರದಲ್ಲಿ ಜನಪ್ರಿಯವಾಗುತ್ತದೆ. ಎಷ್ಟೋ ಹಣವಂತರು ಈ ಕಾರನ್ನು ಖರೀದಿ ಮಾಡಲು ಮುಗಿಬೀಳುತ್ತಾರೆ. ಈ ಕಾರಿನ ಡಿಸೈನ್ ಮತ್ತು ಫೀಚರ್ ಗಳನ್ನು ನೋಡಿ ಮೂಕವಿಸ್ಮಿತರಾದವರು ಹಲವರು. ಆಟೋಮೊಬೈಲ್ ಕ್ಷೇತ್ರದಲ್ಲಿ ಈ ಲ್ಯಾಂಬೋರ್ಗಿನಿ ವಿಶಿಷ್ಟ ಛಾಪು ಮೂಡಿಸಿದೆ. ಇದರ ಬೆಲೆಯೇ ಕೋಟಿಗಟ್ಟಲೇ ಇರುವುದರಿಂದ ಸಿರಿವಂತರು ಮಾತ್ರ ಇದನ್ನು ಖರೀದಿಸುತ್ತಾರೆ. ಮಾತ್ರವಲ್ಲದೆ ಈ  ಕಾರು ಕೊಂಡರೆ  ಪ್ರತಿಷ್ಟೆ ಹೆಚ್ಚಾಗುತ್ತದೆ ಎಂದು ಭಾವಿಸುವವರೂ ಇದ್ದಾರೆ. ಈ  ದುಬಾರಿ ಕಾರಿನ ಹಿನ್ನಲೆಯೇ ಒಂದು ರೋಚಕ.

Advertisement

ಲ್ಯಾಂಬೋರ್ಗಿನಿ ಸಂಸ್ಥೆ ಆರಂಭವಾದದ್ದು 1963ರಲ್ಲಿ. ಫೆರೊಶಿಯಾ ಲ್ಯಾಂಬೋರ್ಗಿನಿ ಎನ್ನುವವರು ಇದನ್ನು ಆರಂಭ ಮಾಡುತ್ತಾರೆ.  ಫೆರೊಶಿಯಾ ಇಟಲಿಯ ರೆನಾಜೋ  ಎಂಬ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ 1916ರಲ್ಲಿ ಜನಿಸಿದ್ದರು. ಇವರ ತಂದೆ ಕೃಷಿಯನ್ನು ಅವಲಂಬಿಸಿ ಜೀವನ ಮಾಡುತ್ತಿದ್ದರು. ಫೆರೊಶಿಯಾ ಲ್ಯಾಂಬೋರ್ಗಿನಿ ಚಿಕ್ಕ ವಯಸ್ಸಿನಿಂದಲೂ ಎಂಜಿನ್ ಗಳತ್ತ ಮತ್ತು ಮೆಕ್ಯಾನಿಸಮ್ ನತ್ತ  ಹೆಚ್ಚು ಆಕರ್ಷಿತನಾಗಿದ್ದ. ಅದೇ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿ ತದನಂತರ ಇಟಲಿಯ ರಾಯ್ ಏರ್ ಪೋರ್ಸ್ ನಲ್ಲಿ ಕೆಲಸ ಮಾಡುತ್ತಾನೆ. ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿ, ಯುದ್ಧ ಮುಗಿದ ನಂತರ ಸಣ್ಣ ಗ್ಯಾರೆಜ್ ಇಟ್ಟುಕೊಂಡು ಜೀವನ ನಿರ್ವಹಿಸುತ್ತಿದ್ದ.

ಇದೇ ವೇಳೆ ಒಂದು ಉತ್ತಮ ಕಾರನ್ನು ಕೊಂಡುಕೊಂಡು ಅದನ್ನು ರೂಪಾಂತರ ಮಾಡಿಕೊಂಡು ಚಲಾಯಿಸುತ್ತಿದ್ದರು. ಈ ಹಿಂದೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಅಲ್ಲಿದ್ದ  ಹಳೆ ಇಂಜಿನ್ ಗಳನ್ನು ತೆಗೆದುಕೊಂಡು ಟ್ರ್ಯಾಕ್ಟರ್ ಗಳನ್ನು ಉತ್ಪಾದಿಸುವ ಕೆಲಸ ಆರಂಭಿಸಿದರು. ಆಗಷ್ಟೆ ಯುದ್ಧ ಮುಗಿದು ಜನರು ಕೃಷಿಯತ್ತ ಗಮನ ಹರಿಸಿದ್ದರಿಂದ ಇದು ಬಹಳ ಬೇಡಿಕೆ ಪಡೆಯಿತು. 1946 ರಲ್ಲಿ ಲ್ಯಾಂಬೋರ್ಗಿನಿ ಟ್ರ್ಯಾಕ್ಟರ್ ಎಂಬ ಕಂಪೆನಿಯನ್ನು ಆರಂಭಿಸುತ್ತಾರೆ. ಇಟಲಿಯ ಬಹಳ ದೊಡ್ಡ  ಟ್ರ್ಯಾಕ್ಟರ್ ಕಂಪೆನಿಗಳಲ್ಲಿ ಇದು ಕೂಡ ಒಂದಾಗಿ ಬೆಳೆಯುತ್ತದೆ ಮಾತ್ರವಲ್ಲದೆ ಆದಾಯ ಕೂಡ ದ್ವಿಗುಣಗೊಂಡಿತು.

ನಂತರದ ದಿನಗಳಲ್ಲಿ ಯಾವುದಾದರೂ ಸ್ಪೋರ್ಟ್ಸ್ ಕಾರನ್ನು ಕೊಳ್ಳಬೇಕೆಂದು ಆಲೋಚಿಸಿದ ಫೆರೊಶಿಯಾ,  ಫೆರಾರಿ 250 ಯನ್ನು ಖರೀದಿ ಮಾಡುತ್ತಾರೆ. ಆದರೇ ಕೆಲವೇ ತಾಸಿನಲ್ಲಿ ಕಾರಿನ ಕ್ಲಚ್ ಸರಿಯಿಲ್ಲ ಎಂದು ತಿಳಿದು ಬರುತ್ತದೆ. ಆಗ ಫೆರಾರಿ ಸಂಸ್ಥೆಯ ಸಂಸ್ಥಾಪಕ  ಆ್ಯಂಜೋ ಫೆರಾರಿ ಬಳಿ ತನ್ನ ಸಮಸ್ಯೆ ಹೇಳಿದಾಗ “ನೀವೆಲ್ಲಾ ಟ್ರ್ಯಾಕ್ಟರ್ ಅನ್ನು ಓಡಿಸಲು ಮಾತ್ರ ಲಾಯಕ್ಕು,  ಫೆರಾರಿಯಂತಹ ಸೂಪರ್ ಕಾರನ್ನು ಓಡಿಸಲು ಯೋಗ್ಯತೆಯಿಲ್ಲಾ” ಎಂಬಂತೆ ಅವಮಾನ ಮಾಡುತ್ತಾರೆ.

Advertisement

ಇದರಿಂದ ತಾನೇ ಒಂದು ಕಾರು ಉತ್ಪಾದನೆ ಮಾಡಿ ಫೆರಾರಿಗೆ ಬುದ್ದಿ ಕಲಿಸಬೇಕೆಂದು ಯೋಚಿಸಿದ ಫೆರೊಶಿಯಾ, ಇಟಲಿಯ ಸೆಂಟ್ ಅಗಾಟ ಎಂಬಲ್ಲಿ ಲ್ಯಾಂಬೋರ್ಗಿನಿ ಆಟೋಮೊಬೈಲ್ ಎಂಬ ಕಾರ್ಖಾನೆಯನ್ನು ಆರಂಭಿಸುತ್ತಾರೆ. ಅದಕ್ಕೆ ಫೆರಾರಿ ಕಂಪೆನಿಯ ಹಳೆಯ ಉದ್ಯೋಗಿಗಳನ್ನು ಸೇರಿಸಿಕೊಂಡು ಕಾರಿನ ಉತ್ಪಾದನೆಯನ್ನು ಆರಂಭಿಸಿದರು. ಹೀಗೆ ಲ್ಯಾಂಬೋರ್ಗಿನಿಯ ಮೊದಲ ಕಾರು ಲ್ಯಾಂಬೋರ್ಗಿನಿ 350 ಜಿಟಿ 1964ರಲ್ಲಿ ಬಿಡುಗಡೆಯಾಗುತ್ತದೆ. ಆದರೇ ಲ್ಯಾಂಬೋರ್ಗಿನಿ ಸಂಸ್ಥೆಗೆ ಹೆಸರು ತಂದುಕೊಟ್ಟಿದ್ದು 1966ರಲ್ಲಿ ಬಿಡುಗಡೆಯಾದ ಲ್ಯಾಂಬೋರ್ಗಿನಿ ಮ್ಯೂರಾ ಸ್ಪೋರ್ಟ್ಸ್ ಕಾರ್. ಈ ಕಾರಿನ ಹೈ ಪರ್ಫಾಮೆನ್ಸ್, ಲುಕ್ಸ್, ವಿಶೇಷ ತಂತ್ರಜ್ಙಾನಗಳಿಂದ ಇದು ಗ್ರಾಹಕರ ಮನಗೆಲ್ಲಲು ಯಶಸ್ವಿಯಾಯಿತು. ಈ ಮೂಲಕ ಫೆರೊಶಿಯಾ ಲ್ಯಾಂಬೋರ್ಗಿನಿ ಜಗತ್ಪ್ರಸಿದ್ಧರಾದರು.

ಆ ಬಳಿಕ ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಸೂಪರ್ ಕಾರು, ಲ್ಯಾಂಬೋರ್ಗಿನಿ ಹುರಾಕಾನ EVO ಸ್ಪೈಡರ್ ಸೂಪರ್ ಕಾರ್. ಲ್ಯಾಂಬೋರ್ಗಿನಿ ಉರುಸ್ ಕಾರುಗಳು ವಿಭಿನ್ನ ಶೈಲಿಯಲ್ಲಿ ಬಿಡುಗಡೆಯಾದವು. ವಿಶೇಷ ಎಂದರೇ  ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಸೂಪರ್ ಕಾರನ್ನು ಮೊದಲು ಖರೀದಿಸಿದ ಹೆಗ್ಗಳಿಕೆ ಬೆಂಗಳೂರಿಗೆ ಸಲ್ಲುತ್ತದೆ.

ಆ ಮೂಲಕ  ಫೆರೊಶಿಯಾ ಲ್ಯಾಂಬೋರ್ಗಿನಿ, ಕಾರು  ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದರು. ಅಂದು ಅವಮಾನವನ್ನೇ ಸವಾಲಾಗಿ ಸ್ವೀಕರಿಸದಿದ್ದರೇ ಇಂದು ಲ್ಯಾಂಬೋರ್ಗಿನಿ ಕಾರು ಇರುತ್ತಿರಲಿಲ್ಲ. ಅವಮಾನದಿಂದಲೇ ಸನ್ಮಾನ ಎಂಬ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next