Advertisement

ಐತಿಹಾಸಿಕ ಮಹತ್ವದ ನಗರ ಕೋಟೆ

11:12 PM Dec 18, 2019 | mahesh |

ನಮ್ಮ ರಾಜ್ಯ ಹಿಂದಿನಿಂದಲೂ ಸಮೃದ್ಧವಾಗಿತ್ತು ಎನ್ನುವುದಕ್ಕೆ ಅಲ್ಲಲ್ಲಿ ಸಾಕ್ಷಿ ಸಿಗುತ್ತದೆ. ಅರಮನೆ, ಸ್ಮಾರಕಗಳು ಶ್ರೀಮಂತ ಕಲೆಗಳ ಕುರುಹಾಗಿ ಇಂದಿಗೂ ರಾಜ್ಯಾದ್ಯಂತ ಕಾಣ ಸಿಗುತ್ತವೆ. ಅಂತಹ ಐತಿಹಾಸಿಕ ಮಹತ್ವ ಹೊಂದಿದ ಸ್ಥಳಗಳಲ್ಲಿ ನಗರ ಕೋಟೆಯೂ ಒಂದು. ಕುಂದಾಪುರ-ಶಿವಮೊಗ್ಗ ರಸ್ತೆಯ ಮಧ್ಯೆ ಸಿಗುವ ಈ ಕೋಟೆಯೊಳಗೆ ಒಂದು ಸುತ್ತು…

Advertisement

ನಮ್ಮ ರಾಜ್ಯದಲ್ಲಿ ಗತಕಾಲದ ಇತಿಹಾಸ ಸಾರುವ ಸ್ಮಾರಕಗಳಿಗೇನೂ ಕೊರತೆಯಿಲ್ಲ. ಕಾಲಾನುಕ್ರಮದಲ್ಲಿ ಅನೇಕ ರಾಜರಿಂದ ಆಳ್ವಿಕೆಗೆ ಒಳಪಟ್ಟ ಕರುನಾಡಿನಲ್ಲಿ ವೀರ ಅರಸರಿಂದ ನಿರ್ಮಿಸಲ್ಪಟ್ಟ ಕೋಟೆ-ಕೊತ್ತಲಗಳು ಅಲ್ಲಲ್ಲಿ ಕಾಣಸಿಗುತ್ತವೆ. ಇತ್ತೀಚೆಗೆ ನಾನು ಹೊಸನಗರಕ್ಕೆ ಹೋಗಬೇಕಾಗಿ ಬಂದಾಗ ರಸ್ತೆ ಬದಿಯಲ್ಲಿ ಕೋಟೆಯೊಂದರ ಬೃಹತ್‌ ಪ್ರವೇಶ ದ್ವಾರವನ್ನು ನೋಡಿ ಬೆರಗಾದೆ! ಕೋಟೆಯನ್ನು ಪ್ರವೇಶಿಸಿ ಪರಿಶೀಲಿಸಿದಾಗ ಅದು ಕೆಳದಿ ಸಂಸ್ಥಾನಕ್ಕೆ ಸೇರಿದ ಸ್ಮಾರಕವೆಂದು ಅರಿವಾಯಿತು. ಆ ಕೋಟೆಯೇ ಬಿದನೂರಿನ ಕೋಟೆ, ಶಿವಪ್ಪ ನಾಯಕನ ಕೋಟೆಯೆಂದು ಕರೆಯಲ್ಪಡುವ “ನಗರ ಕೋಟೆ’.

ಕೋಟೆಯ ಹಿನ್ನೆಲೆ
ಕೆಳದಿಯ ಪ್ರಸಿದ್ಧ ಅರಸ ಶಿವಪ್ಪ ನಾಯಕನು ಹದಿನೇಳನೇ ಶತಮಾನದಲ್ಲಿ ಈ ಕೋಟೆಯನ್ನು ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ. ಆತನು ಬಿದನೂರಿನಲ್ಲಿ ರಾಜಧಾನಿಯನ್ನು ನಿರ್ಮಿಸಲು ಉಪಕ್ರಮಿಸಿದಾಗ ಈ ಷಟ್ಕೊನ ತಳವಿನ್ಯಾಸವಿರುವ ಕೋಟೆಯನ್ನು ಅನೇಕ ಬದಲಾವಣೆಗಳೊಂದಿಗೆ ಭದ್ರಪಡಿಸಿದನು. ಕೋಟೆಯ ಉತ್ತರ ಭಾಗದಲ್ಲಿ ಕಂದಕಗಳು ಹಾಗೂ ಬತೇರಿಗಳಿಂದ ಆವೃತವಾದ ಪ್ರವೇಶದ್ವಾರವಿದ್ದು, ಇದರ ಜೊತೆಗೆ ಕಾವಲುಗಾರರ ಕೋಣೆಗಳು ಹಾಗೂ ಅರಮನೆಯ ಭಗ್ನಾವಶೇಷಗಳು ಕಾಣಸಿಗುತ್ತವೆ. ಕೋಟೆಯೊಳಗೆ ಪಶ್ಚಿಮಕ್ಕೆ ತೆರೆದಿರುವ ಸ್ಥಳವು ರಾಜರ ಕಾಲದಲ್ಲಿ ಸಭೆಯನ್ನು ನಡೆಸುವ ತಾಣವಾಗಿತ್ತೆಂದು ಊಹಿಸಲಾಗಿದೆ. ಇಷ್ಟೆಲ್ಲ ವಿಶೇಷತೆಗಳಿಂದ ಕೂಡಿದ ಈ ಕೋಟೆಯು, ಹದಿನೇಳನೇ ಶತಮಾನದ ಅದ್ಭುತ ನಿರ್ಮಾಣ ಶೈಲಿಗೆ ಸಾಕ್ಷಿಯಾಗಿದೆ!

ಪ್ರವಾಸಿ ಆಕರ್ಷಣೆಗಳು
ಈ ಕೋಟೆಯು ಪ್ರಮುಖ ರಸ್ತೆಯ ಬದಿಯಲ್ಲಿಯೇ ಇದ್ದು, ಸಂಪರ್ಕ ಸುಲಭ ಸಾಧ್ಯವಾಗಿದೆ. ಕೋಟೆಯ ಪ್ರವೇಶದ್ವಾರವು ಚಿತ್ರದುರ್ಗದ ಕೋಟೆಯನ್ನು ನೆನಪಿಸುತ್ತದೆ. ಒಳಹೊಕ್ಕುತ್ತಿದ್ದಂತೆ ವಿಶಾಲವಾದ ಕೋಟೆಯ ಆವರಣವು ಒಮ್ಮೆ ಗತಕಾಲದ ವೈಭವವನ್ನು ಕಣ್ಣಮುಂದೆ ಸಾಕ್ಷೀಕರಿಸುತ್ತದೆ. ದಿಬ್ಬಗಳು ಹಾಗೂ ಭಗ್ನ ಕಟ್ಟಡದ ಅವಶೇಷಗಳನ್ನು ಕೋಟೆಯ ಉದ್ದಗಲಕ್ಕೂ ಕಾಣಬಹುದು. ಇಲ್ಲಿ ಶಿವಪ್ಪ ನಾಯಕನ ದಬಾರ ಹಾಲ್‌ ಹಾಗೂ ಅದರ ಪಳೆಯುಳಿಕೆಗಳು ವಿಶೇಷ ಆಕರ್ಷಣೆಗಳಾಗಿವೆ. ಜತೆಗೆ ಇಲ್ಲಿರುವ ಫಿರಂಗಿಯು ಶಿವಪ್ಪ ನಾಯಕನ ಸೇನಾ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಕೋಟೆಯ ತುತ್ತತುದಿಗೆ ತಲುಪಿದಾಗ ಸುತ್ತಲಿನ ನದಿ ಹಾಗೂ ಬೆಟ್ಟ- ಗುಡ್ಡಗಳ ವಿಹಂಗಮ ದೃಶ್ಯ ಕಣ್ಮನ ಸೆಳೆಯುತ್ತದೆ.

ನಿರಾಶಾದಾಯಕ ನಿರ್ವಹಣೆ
ನಗರ ಕೋಟೆಯು ಎಲ್ಲ ರೀತಿಯಿಂದಲೂ ಪ್ರವಾಸಿಗರನ್ನು ಸೆಳೆಯಲು ಸಮರ್ಥವಾಗಿದ್ದರೂ, ಇಲ್ಲಿನ ನಿರ್ವಹಣೆಯು ತೀರಾ ನಿರಾಶಾದಾಯಕವಾಗಿದೆ. ಇಲ್ಲಿ ಕೋಟೆಯನ್ನು ಕಾಯಲು ಕಾವಲುಗಾರರಿಲ್ಲ. ಜತೆಗೆ ಇತರ ಯಾವುದೇ ಸಿಬಂದಿಯೂ ಕಾಣಸಿಗುವುದಿಲ್ಲ! ಕೋಟೆಯೊಳಗೆ ಸರಿಯಾದ ಮಾಹಿತಿ ಫ‌ಲಕಗಳಿಲ್ಲದೇ ಇರುವುದು ಪ್ರವಾಸಿಗರಲ್ಲಿ ಬೇಸರ ಮೂಡಿಸಿದೆ. ಕೋಟೆಯ ತುಂಬೆಲ್ಲ ದನಕರುಗಳು ಓಡಾಡುತ್ತಾ ಇಲ್ಲಿನ ಅವ್ಯವಸ್ಥೆಯನ್ನು ಸಾರಿ ಹೇಳುತ್ತಿವೆ. ಮಾತ್ರವಲ್ಲ ಇಲ್ಲಿ ಪ್ರವಾಸಿಗರಿಗೆ ಮಾಹಿತಿ ನೀಡಲು ಪ್ರವಾಸಿ ಮಾರ್ಗದರ್ಶಕರನ್ನೂ ನೇಮಿಸದೆ ಇರುವುದು, ಇಲ್ಲಿಯ ಕುರಿತಾದ ಸರಕಾರದ ಅಸಡ್ಡೆಗೆ ಉದಾಹರಣೆ. ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸಿ ವ್ಯಾಪಕ ಪ್ರಚಾರ ಕೈಗೊಂಡಲ್ಲಿ, ನಗರ ಕೋಟೆಯು ಕರ್ನಾಟಕದ ಮತ್ತೂಂದು ಜನಪ್ರಿಯ ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ!

Advertisement

ರೂಟ್‌ ಮ್ಯಾಪ್‌
 ಮಂಗಳೂರಿನಿಂದ 143 ಕಿ.ಮೀ. ದೂರ
 ಶಿವಮೊಗ್ಗದಿಂದ 83 ಕಿ.ಮೀ. ದೂರ
 ಕುಂದಾಪುರ-ಶಿವಮೊಗ್ಗ ರಸ್ತೆಯಲ್ಲಿ ಈ ಕೋಟೆ ಕಾಣಸಿಗುತ್ತದೆ.
 ಕೋಟೆ ಪ್ರವೇಶಕ್ಕೆ ಶುಲ್ಕವಿಲ್ಲ.
 ಹತ್ತಿರದ ಪ್ರವಾಸಿ ತಾಣಗಳು- ಜೋಗ್‌ ಜಲಪಾತ, ಕವಲೆದುರ್ಗ, ಕೆಳದಿ ಅರಮನೆ,   ತೀರ್ಥಹಳ್ಳಿ, ವರಂಗ ಜೈನ ಬಸದಿ.

ನೀವು ಇತ್ತೀಚೆಗೆ ಸ್ನೇಹಿತರು ಬಂಧುಗಳೊಂದಿಗೆ ತೆರಳಿರುವ ಪ್ರವಾಸಿತಾಣಗಳಲ್ಲಿ ಕಂಡು ಬಂದ ಅದ್ಭುತ ವಿಚಾರಗಳ ಜತೆಗೆ ಅಲ್ಲಿ ನಿಮಗೇನು ಖುಷಿ ಕೊಟ್ಟಿತು ಎಂಬುದನ್ನು ಸೇರಿಸಿ ಇಲ್ಲಿ ನಿಮ್ಮ ಪ್ರವಾಸ ಕಥನಗಳನ್ನು ಬರೆಯಬಹುದು. ನಿಮ್ಮ ಅನುಭವ ಮತ್ತು ನೀವು ದಾಖಲಿಸಿದ ಮಾಹಿತಿಯೊಂದಿಗೆ ಒಳ್ಳೆಯ ಫೋಟೊ ಕೊಡಿ ಪ್ರಕಟಿಸುತ್ತೇವೆ. ನಮ್ಮ ಇ-ಮೇಲ್‌ ವಿಳಾಸ:
mlr.sudina@ udayavani.com

– ಸುದೀಪ್‌ ಶೆಟ್ಟಿ ಪೇರಮೊಗ್ರು

Advertisement

Udayavani is now on Telegram. Click here to join our channel and stay updated with the latest news.

Next