ವಿಜಯಪುರ: ಐತಿಹಾಸಿಕ ದಾಖಲೆಗಳು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮಾಹಿತಿ ನೀಡುವ ಮಹತ್ವದ ಕೆಲಸ ಮಾಡುತ್ತಿವೆ. ಹೀಗಾಗಿ ಐತಿಹಾಸಿಕ ದಾಖಲೆಗಳ ರಕ್ಷಣೆ ಇಂದಿನ ಅಗತ್ಯವಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಸಬಿಹಾಗೌಡ ಅಭಿಪ್ರಾಯಪಟ್ಟರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಬೆಂಗಳೂರಿನ ರಾಜ್ಯ ಪತ್ರಗಾರ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚರಿತ್ರೆಯ ಸಂಗತಿಗಳನ್ನು ತಿಳಿಯಲು ಸಾಹಿತ್ಯಿಕ, ಮೌಖೀಕ ಪರಂಪರೆ, ಲಿಖೀತ ಮಾಹಿತಿ, ದಾಖಲೆಗಳು ಅವಶ್ಯಕ. ಇವುಗಳು ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಯಲ್ಲಿ ಜ್ಞಾನ ವಿಕಾಸಗೊಳಿಸುತ್ತವೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ| ಎಸ್.ಬಿ. ಮಾಡಗಿ ಮಾತನಾಡಿ, ದಾಖಲೆ ಪ್ರಕ್ರಿಯೆ ಕಡಿಮೆಯಾಗಿ ಅನೇಕ ವಿಷಯಗಳು ದಾಖಲೆಗಳಿಲ್ಲದೇ ನಶಿಸಿ ಹೋಗಿವೆ. ಗ್ರಾಮೀಣ ಪ್ರದೇಶದಲ್ಲಿನ ಆರೋಗ್ಯ ಔಷಧಗಳ ಮಾಹಿತಿಗಳು ಭವಿಷಯದಲ್ಲಿ ಅಗತ್ಯ. ಅವುಗಳನ್ನು ದಾಖಲಿಸಿಕೊಂಡು ಉಳಿಸಬೇಕು ಎಂದು ಹೇಳಿದರು.
ದಾಖಲೆಗಳು ಮುಂದಿನ ಪೀಳಿಗೆಗೆ ಬಹು ಮುಖ್ಯವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ವಿಭಿನ್ನವಾದ ಪ್ರಾಣಿ, ಪಕ್ಷಿ, ಆಹಾರ, ಜೀವನ ಕ್ರಮಗಳು ಇವೆ. ಆದರೆ ಅವುಗಳು ದಾಖಲೆಯಲ್ಲಿ ಉಳಿಯಬೇಕಾಗಿದೆ. ಇತ್ತೀಚಿನ ಮಕ್ಕಳಲ್ಲಿ ಕುತೂಹಲಕರ ಪ್ರಶ್ನೆಗಳಿವೆ. ಉತ್ತರಿಸಲು ನಮಗೆ ಮಾಹಿತಿ ಬೇಕು. ಆ ಮಾಹಿತಿಯನ್ನು ನಮ್ಮದಾಗಿಸುವ ವೇದಿಕೆ ಇದು. ದಾಖಲೆಗಳ
ಮೌಖೀಕ, ಲಿಖೀತ ಆಕರಗಳನ್ನು ತಿಳಿದುಕೊಳ್ಳುವುದು ಅಗತ್ಯ ಎಂದು ವಿದ್ಯಾರ್ಥಿನಿಯರಿಗೆ ಹೇಳಿದರು. ರಾಜ್ಯ ಪತ್ರಗಾರ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತಿ ಹಿರೇಮಠ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಡಾ| ಹನುಮಂತಯ್ಯ ಪೂಜಾರಿ ವಂದಿಸಿದರು.