Advertisement

ಐತಿಹಾಸಿಕ ಗ್ರಂಥಾಲಯ ನವೀಕರಣ ಬಹುತೇಕ ಪೂರ್ಣ

12:01 PM Aug 21, 2018 | |

ಬೆಂಗಳೂರು: ದಕ್ಷಿಣ ಏಷ್ಯಾದ ಅತಿ ಹಳೆಯ ಗ್ರಂಥಾಲಯಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಮಾತ್ರವಲ್ಲದೆ, ಉದ್ಯಾನ ವಿನ್ಯಾಸ ಹಾಗೂ ಸಸ್ಯ ಪ್ರಭೇದದ ಮಾಹಿತಿಗಳ ಭಂಡಾರವಾಗಿರುವ ಬ್ರಿಟಿಷರ ಕಾಲದ ಡಾ.ಎಂ.ಎಚ್‌.ಮರಿಗೌಡ ರಾಷ್ಟ್ರೀಯ ತೋಟಗಾರಿಕೆ ಗ್ರಂಥಾಲಯ ತನ್ನ ಜ್ಞಾನ ಪಸರಿಸುವ ಕಾಯಕಕ್ಕೆ ಮತ್ತೆ ಸಜ್ಜಾಗಲಿದೆ.

Advertisement

ಶಿಥಿಲಾವಸ್ಥೆಗೆ ತಲುಪಿದ್ದ ಈ ಗ್ರಂಥಾಲಯದ ನವೀಕರಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಡಿಸೆಂಬರ್‌ ಅಂತ್ಯದ ವೇಳೆ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ. ಗ್ರಂಥಾಲಯದ ಚಾರಿತ್ರಿಕ ಹಿನ್ನೆಲೆಗೆ ಧಕ್ಕೆಯಾಗದಂತೆ ಮತ್ತು ಅಲ್ಲಿದ್ದ ಅಪರೂಪದ ಚಿತ್ರಗಳಿಗೆ ಹಾನಿಯಾಗದಂತೆ ಇದನ್ನು ನವೀಕರಣಗೊಳಿಸುತ್ತಿರುವುದು ವಿಶೇಷ.

ಸುಮಾರು 120 ಕ್ಕೂ ಹೆಚ್ಚು ವರ್ಷದ ಇತಿಹಾಸ ಹೊಂದಿರುವ ಡಾ.ಎಂ.ಎಚ್‌.ಮರಿಗೌಡ ರಾಷ್ಟ್ರೀಯ ತೋಟಗಾರಿಕೆ ಗ್ರಂಥಾಲಯ ಸಸ್ಯಶಾಸ್ತ್ರ ಲೋಕದ ಮಾಹಿತಿಯ ಆಗರ. ಪ್ರತಿಯೊಂದು ಸಸ್ಯಪ್ರಭೇದಕ್ಕೂ ಪ್ರತ್ಯೇಕ ಮಾಹಿತಿ ಗ್ರಂಥ ಲಭಿಸಬೇಕೆಂಬ ಉದ್ದೇಶದಿಂದ ಸ್ಥಾಪಕರು ಹಾಗೂ ಹಿಂದಿನ ಮೇಲ್ವಿಚಾರಕರು ಕಲೆಹಾಕಿದ ಮಾಹಿತಿಯ ಸಂಪತ್ತು ಈ ಗ್ರಂಥಾಲಯದಲ್ಲಿದೆ.

ಉದ್ಯಾನ ವಿನ್ಯಾಸ, ಸಸ್ಯಪ್ರಭೇದ, ವಿಶ್ವಕೋಶ, ಪಾರಾಮರ್ಶನ ಗ್ರಂಥಗಳು, ಉದ್ಯಾನ ವಿನ್ಯಾಸ ಕೋಶಗಳು, ಕೆಲವು ಪ್ರಭೇದಗಳಿಗೆ ಸಂಬಂಧಿಸಿದ ಗೆಜೆಟಿಯರ್‌ ಒಳಗೊಂಡಂತೆ ವಿಶೇಷ ಮಾಹಿತಿಗಳನ್ನೊಳಗೊಂಡ ದಾಖಲೆಗಳ ಕಣಜವೇ ಇಲ್ಲಿದೆ. ಡಾ.ಎಂ.ಎಚ್‌.ಮರಿಗೌಡ ರಾಷ್ಟ್ರೀಯ ತೋಟಗಾರಿಕೆ ಗ್ರಂಥಾಲಯ 2007ರಿಂದ ಶಿಥಿಲಾವಸ್ಥೆಯಲ್ಲಿತ್ತು.

ಮಳೆ ಬಿದ್ದಾಗ ಗೋಡೆಗಳು ಪೂರ್ತಿ ಒದ್ದೆಯಾಗಿ ಒಳಗೆ ನೀರಿಳಿಯುತ್ತಿತ್ತು. ಕಟ್ಟಡದ ಛಾವಣಿಯಲ್ಲಿ ನೀರು ಸೋರಿಕೆಯಾಗುತ್ತಿತ್ತು. ಇದರಿಂದ ಗ್ರಂಥಾಲಯದ ಅಪರೂಪದ ಕೃತಿಗಳಿಗೆ ಹಾನಿಯಾಗುವ ಆತಂಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ 2017 ಮಾರ್ಚ್‌ನಲ್ಲಿ ಗ್ರಂಥಾಲಯವನ್ನು ತಾತ್ಕಾಲಿಕವಾಗಿ ಮುಚ್ಚಿದ ತೋಟಗಾರಿಕಾ ಇಲಾಖೆ ಅದರ ನವೀಕರಣಕ್ಕೆ ಮುಂದಾಯಿತು.

Advertisement

ಅದರಂತೆ ಮೂಲಭೂತ ಅಭಿವೃದ್ಧಿ ಯೋಜನೆಯ ಅನುದಾನದಲ್ಲಿ 95 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿಯನ್ನು ಪ್ರಾಚ್ಯವಸ್ತು ಇಲಾಖೆಗೆ ವಹಿಸಲಾಗಿತ್ತು. ಇದೀಗ ಕಟ್ಟಡದ ಛಾವಣಿ ಹೊದಿಸುವುದು ಹಾಗೂ ಬಣ್ಣ ಹಚ್ಚುವ ಕಾರ್ಯ ಮುಗಿದಿದೆ. ಸದ್ಯ ಮರದ ಕೆಲಸಗಳು (ವುಡನ್‌ ವರ್ಕ್‌) ಹಾಗೂ ನೆಲಹಾಸು ಕಾರ್ಯ ಮಾಡಬೇಕಿದೆ.

ಪೂರ್ಣ ಕಾಮಗಾರಿ ಮುಗಿದ ನಂತರ ಪುಸ್ತಕ ಇಡುವ ಕಪಾಟುಗಳನ್ನು ಖರೀದಿಸಬೇಕೇ ಅಥವಾ ಹೊಸತಾಗಿ ನಿರ್ಮಿಸಬೇಕೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ನವೀಕರಣ ಕಾರ್ಯಕ್ಕಾಗಿ ಗ್ರಂಥಾಲಯದಲ್ಲಿದ್ದ ಲಾಲ್‌ಬಾಗ್‌ನಲ್ಲಿರುವ ತೋಟಗಾರಿಕೆ ತರಬೇತಿ ಸಂಸ್ಥೆಯಲ್ಲಿ ಇರಿಸಲಾಗಿದೆ.

ಮುಂದಿನ ದಿನಗಳಲ್ಲಿ ಗ್ರಂಥಾಲಯದಲ್ಲಿರುವ  8 ಸಾವಿರ ಕೃತಿಗಳನ್ನು ಗಣಕೀಕರಣ ಮಾಡಲು ಚಿಂತನೆ ನಡೆಸಲಾಗಿದೆ. ಡಿಸೆಂಬರ್‌ ಅಂತ್ಯ ಅಥವಾ ಜನವರಿ ಆರಂಭದಲ್ಲಿ  ಗ್ರಂಥಾಲಯದ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಲಭಿಸಲಿದೆ. ಬೆಳಗ್ಗೆ 9 ರಿಂದ ಸಂಜೆ 6ರವರೆಗೂ ಗ್ರಂಥಾಲಯ ತೆರೆದಿಡಲು ಚಿಂತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಂಥಾಲಯದ ಇತಿಹಾಸ: ಪ್ರತಿ ಸಸ್ಯ ಪ್ರಭೇದವನ್ನು ಶಾಸ್ತ್ರೀಯವಾಗಿ ಅರಿಯಲು ಅಥವಾ ಅಧ್ಯಯನ ನಡೆಸಲು ಗ್ರಂಥಗಳು ಅವಶ್ಯಕ ಎಂದು ಯೋಚಿಸಿದ್ದ ಲಾಲ್‌ಬಾಗ್‌ ಉದ್ಯಾನವನದ ಮೇಲ್ವಿಚಾರಕರಾಗಿದ್ದ ವಿಲಿಯಂ ನ್ಯೂ (1863-73) ಎಂಬುವರು ಈ ಗ್ರಂಥಾಲಯ ಸ್ಥಾಪಿಸಿದ್ದರು. ಗ್ರಂಥಾಲಯ ನಿರ್ಮಾಣಕ್ಕೆ ಮುನ್ನ ದೇಶವಿದೇಶಗಳ ಅನೇಕ ಗ್ರಂಥಾಲಯಗಳಿಗೆ ತೆರಳಿ ಅಧ್ಯಯನ ನಡೆಸಿ, ಅಲ್ಲಿನ ವ್ಯವಸ್ಥೆ, ಸೌಲಭ್ಯ ವೀಕ್ಷಿಸಿ ನಂತರ ಉತ್ತಮ ಗಾಳಿ, ಬೆಳಕು ಲಭ್ಯವಿರುವಂತಹ ಕಟ್ಟಡ ನಿರ್ಮಿಸಿದರು.

ನಂತರ ಎಂ.ಎಚ್‌. ಮರಿಗೌಡರು ಈ ಗ್ರಂಥಾಲಯ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ಗ್ರಂಥಾಲಯ ಮಾಹಿತಿ ಭಂಡಾರವಾಗಬೇಕೆಂದು ಅನೇಕ ಕ್ರಮಗಳನ್ನು ಕೈಗೊಂಡಿದ್ದರು. ಅವುಗಳಲ್ಲಿ ಲಾಲ್‌ಬಾಗ್‌ ಜರ್ನಲ್‌ ಆರಂಭ ಕೂಡ ಒಂದು. ತಾವು ಉನ್ನತ ಅಧ್ಯಯನಕ್ಕೆಂದು ಹಾರ್ವರ್ಡ್‌ಗೆ ತೆರಳಿದ್ದಾಗ ಸಿಗುತ್ತಿದ್ದ ವಿದ್ಯಾರ್ಥಿವೇತನದಲ್ಲಿ ಗ್ರಂಥಗಳನ್ನು ಖರೀದಿಸಿ ಲಾಲ್‌ಬಾಗ್‌ಗೆ ಕಳುಹಿಸುತ್ತಿದ್ದರು.

ನೂರು ವರ್ಷಕ್ಕೂ ಹಿಂದಿನ 19ನೇ ಶತಮಾನದ ಚಿತ್ರಗಳು, ಸುಮಾರು 750 ತೈಲಚಿತ್ರ ಹಾಗೂ ಪೆನ್ಸಿಲ್‌ ಸ್ಕೆಚ್‌ಗಳು ಇಲ್ಲಿನ ಮತ್ತೂಂದು ವಿಶೇಷ. ಇವು ಗ್ರಂಥಾಲಯಕ್ಕೆ ಇನ್ನಷ್ಟು ಕಳೆ ತಂದುಕೊಟ್ಟಿವೆ. ಆದರೆ ಚಿತ್ರ ಬರೆದವರ ಮಾಹಿತಿ ಇಲ್ಲದಿರುವುದು ಪ್ರಚಾರಕ್ಕೆ ತೊಂದರೆಯಾಗಿದೆ. ಆದರೆ, ನವೀಕೃತ ಗ್ರಂಥಾಲಯಗಳಲ್ಲಿ ಮತ್ತೆ ಇವೆಲ್ಲವನ್ನೂ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಸದ್ಯ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ನೆಲಹಾಸ ಹಾಗೂ ಮರದ ಕೆತ್ತನೆಗಳ ಕೆಲಸವಾಗಬೇಕಿದೆ. ಅವುಗಳನ್ನು ಮುಗಿಸಲು ನಾಲ್ಕುವರೆ ತಿಂಗಳಷ್ಟು ಸಮಯಬೇಕಾಗಿದೆ ಎಂದು ತೋಟಗಾರಿಕೆ ಇಲಾಖೆ ವಿಭಾಗದ ಇಂಜಿನಿಯರ್‌ಗಳು ತಿಳಿಸಿದ್ದಾರೆ. ಡಿಸೆಂಬರ್‌ ಅಂತ್ಯದ ವೇಳೆಗೆ ಗ್ರಂಥಾಲಯ ಸಾರ್ವಜನಿಕ ಬಳಕೆಗೆ ಲಭಿಸಲಿದೆ.
-ಡಾ.ಜಗದೀಶ್‌, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ

* ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next