Advertisement

ಸ್ವಚ್ಛತೆಗೆ ಆದ್ಯತೆ ನೀಡಲು ಸದಸ್ಯರ ಒತ್ತಾಯ

12:04 PM Mar 21, 2020 | Team Udayavani |

ಹಿರಿಯೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿ ಸ್ವತ್ಛತೆಗೆ ಹೆಚ್ಚು ಆದ್ಯತೆ ಕೊಡಬೇಕು ಹಾಗೂ ನಗರದ ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನು ಯಾವುದೇ ತಾರತಮ್ಯ ಆಗದ ರೀತಿಯಲ್ಲಿ ಪೂರೈಕೆ ಮಾಡಬೇಕು ಎಂದು ನಗರಸಭಾ ಸದಸ್ಯರುಗಳಾದ ಅನಿಲ್‌ಕುಮಾರ್‌, ಎಂ.ಡಿ. ಸಣ್ಣಪ್ಪ, ಗುಂಡೇಶ್‌ಕುಮಾರ್‌, ಮಹೇಶ್‌ ಪಲ್ಲವ್‌ ಮತ್ತಿತರರು ನಗರಸಭೆ ಪೌರಾಯುಕ್ತರನ್ನು ಒತ್ತಾಯಿಸಿದರು.

Advertisement

ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಗರಸಭೆ ಸದಸ್ಯ ಎಚ್‌.ಎಸ್‌. ಅನಿಲ್‌ಕುಮಾರ್‌, 11ನೇ ವಾರ್ಡ್‌ನಲ್ಲಿ ನಲ್ಲಿಗಳಲ್ಲಿ ಕೊಳಕು ನೀರು ಬರುತ್ತಿದೆ. ಆರು ತಿಂಗಳಿಂದ ಹೇಳುತ್ತಿದ್ದರೂ ಸರಿಪಡಿಸಿಲ್ಲ. ಜನರಿಗೆ ನಾವು ಏನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.

ನಗರದಲ್ಲಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ. ಈ ಬಗ್ಗೆ ಹೇಳಿದಾಗೆಲ್ಲ ಸಿಬ್ಬಂದಿ ಕೊರತೆ ಎನ್ನುತ್ತೀರಿ. ಪೌರಾಯುಕ್ತರು ನಗರಸಭೆ ಸದಸ್ಯರು ಹಾಗೂ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ನಿಮ್ಮ ಬಗ್ಗೆ ಸಾಕಷ್ಟು ಸಾರ್ವಜನಿಕರಿಂದ ದೂರು ಬರುತ್ತಿವೆ, ಸಿಬ್ಬಂದಿ ಕೊಡುವಂತೆ ಜಿಲ್ಲಾಧಿಕಾರಿಗಳ ಬಳಿ ನಿಯೋಗ ಹೋಗೋಣ ಎಂದು ಸದಸ್ಯ ಅಜಯ್‌ ಕುಮಾರ್‌ ತಿಳಿಸಿದರು.

ಸದಸ್ಯ ಎಸ್‌.ಪಿ.ಟಿ ದಾದಾಪೀರ್‌ ಮಾತನಾಡಿ, ನಗರಸಭೆಯಲ್ಲಿ ಇ-ಸ್ವತ್ತು ಮಾಡುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕವಾಗಿ ದೂರುಗಳು ಬರುತ್ತಿದೆ. ಇ-ಸ್ವತ್ತು ಮಾಡಿಸಲು ಬೇಕಿರುವ ದಾಖಲೆಗಳ ಪಟ್ಟಿಯನ್ನು ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸಿ. ನಿಗದಿತ ದಿನಾಂಕದೊಳಗೆ ಖಾತೆ ಮಾಡಿ ಕೊಡಿ. ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ನಡೆಸುವ ಮೂಲಕ ಜನಸ್ನೇಹಿ ಆಡಳಿತ ನೀಡಿ ಎಂದು ಸಲಹೆ ನೀಡಿದರು.

ಸದಸ್ಯೆ ಶಿವರಂಜಿನಿ ಮಾತನಾಡಿ, ನಗರದಲ್ಲಿ ಎಂಟು ಸಾರ್ವಜನಿಕ ಶೌಚಾಲಯಗಳಿದ್ದರೂ ಒಂದೆರಡು ಮಾತ್ರ ಬಳಕೆಯಲ್ಲಿವೆ. ಪ್ರಧಾನ ರಸ್ತೆಯಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸಬೇಕು. ನಗರದ ಎಲ್ಲ ವಾರ್ಡ್‌ಗಳಿಗೂ ತಾರತಮ್ಯ ಮಾಡದೆ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ಸದಸ್ಯರ ಮಾತಿಗೆ ಸ್ಪಂದಿಸದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸದಸ್ಯೆಯರಾದ ಎನ್‌. ಮಮತಾ, ಎಂ. ಸುರೇಖಾ ಆಗ್ರಹಿಸಿದರು.

ಪೌರಾಯುಕ್ತ ಶಿವಪ್ರಸಾದ್‌ ಮಾತನಾಡಿ, ನಮ್ಮ ನಗರಸಭೆಗೆ ಕೆಲಸ ನಿರ್ವಹಿಸಲು ಕನಿಷ್ಠ 100 ಜನ ಪೌರಕಾರ್ಮಿಕರು, 16 ಲೋಡರ್‌
ಗಳು ಬೇಕು. ಪ್ರಸ್ತುತ 34 ಕಾಯಂ ನೌಕರರು ಸೇರಿ 63 ಜನರಿದ್ದಾರೆ. ನಮ್ಮಲ್ಲಿ ಕನಿಷ್ಠ 6ಜನ ಆರೋಗ್ಯ ನಿರೀಕ್ಷಕರು ಇರಬೇಕು, ಸದ್ಯಕ್ಕೆ ಒಬ್ಬರು ಮಾತ್ರ ಕೆಲಸ ಮಾಡುತ್ತಿದ್ದು, ಸದಸ್ಯರು ಸಹಕರಿಸಬೇಕು. ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗಳ ಬಳಿ ನಿಯೋಗ ಹೋಗಲು ಸದಸ್ಯರು ಸಲಹೆ ನೀಡಿದ್ದು ಇದಕ್ಕೆ ಸಹಮತವಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next