Advertisement

ಧ್ಯಾನ್‌ಚಂದ್‌ ವ್ಯಕ್ತಿತ್ವ ಮಾದರಿ

03:41 PM Aug 30, 2019 | Naveen |

ಹಿರಿಯೂರು: ವಿಶ್ವ ಶ್ರೇಷ್ಠ ಹಾಕಿ ಆಟಗಾರ ಧ್ಯಾನಚಂದ್‌ರವರ ವ್ಯಕ್ತಿತ್ವ, ಆದರ್ಶ ಗುಣಗಳು ಮತ್ತು ಅವರ ದೇಶಪ್ರೇಮ ದೇಶದ ಯುವ ಸಮೂಹಕ್ಕೆ ಮಾದರಿ ಎಂದು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಡಿ. ಧರಣೇಂದ್ರಯ್ಯ ಹೇಳಿದರು.

Advertisement

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಧ್ಯಾನಚಂದ್‌ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೈನಿಕರಾಗಿದ್ದ ಧ್ಯಾನ್‌ಚಂದ್‌, ಶ್ರದ್ಧೆ, ಆಸಕ್ತಿಯಿಂದ ಹಾಕಿ ಆಟವನ್ನು ಕಲಿತು ಆಟದ ನೈಪುಣ್ಯ ರೂಢಿಸಿಕೊಂಡು ಭಾರತಕ್ಕೆ ಮೂರು ಒಲಿಂಪಿಕ್‌ಗಳಲ್ಲಿ ಬಂಗಾರದ ಪದಕವನ್ನು ತಂದುಕೊಟ್ಟ ಮಹಾನ್‌ ಕ್ರೀಡಾಪಟುವನ್ನು ನೆನೆಯುವುದು ಅತ್ಯಂತ ಸೂಕ್ತ. ಅವರ ಆಟವನ್ನು ನೋಡಿದ ಇತರೆ ರಾಷ್ಟ್ರದವರು ನೀನು ಭಾರತದಲ್ಲಿ ಸಾಧಾರಣ ಸೈನಿಕನಾಗಿದ್ದೀಯಾ, ನಮ್ಮ ದೇಶದ ಪರ ಆಟವಾಡು, ಸೈನ್ಯದ ಮೇಜರ್‌ ಹುದ್ದೆಯನ್ನೇ ನೀಡುತ್ತವೆಂದು ಆಹ್ವಾನ ನೀಡಿದ್ದರು. ಧ್ಯಾನಚಂದ್‌ರವರು ಅದನ್ನು ತಿರಸ್ಕರಿಸಿ ನನ್ನ ಆಟ ಭಾರತಕ್ಕೆ ಮಾತ್ರ ಮೀಸಲು ಎಂದು ಹೇಳಿ ದೇಶಪ್ರೇಮ ಮೆರೆದಿದ್ದರು. ಅಲ್ಲದೆ ಧ್ಯಾನ್‌ಚಂದ್‌ ಅವರ ಸನ್ಮಾನ ಸಮಾರಂಭದಲ್ಲಿ ಭಾರತದ ಧ್ವಜ ಇಲ್ಲದ್ದಕ್ಕೆ ಸನ್ಮಾನವನ್ನು ತಿರಸ್ಕರಿಸಿದ್ದರು. ಇಂತಹ ಮಹಾನ್‌ ವ್ಯಕ್ತಿಯ ಜನ್ಮದಿನವನ್ನು ಭಾರತ ಸರ್ಕಾರ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಣೆ ಅರ್ಥಪೂರ್ಣ ಎಂದರು.

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಿರಿಯ ದೈಹಿಕ ಶಿಕ್ಷಕ ಆರ್‌. ಶಿವಶಂಕರ ಮಠದ್‌ ಅವರನ್ನು ಸನ್ಮಾನಿಸಲಾಯಿತು. ಡಾ| ಸಿದ್ಧಲಿಂಗಯ್ಯ, ಎಚ್. ತಿಪ್ಪೇಸ್ವಾಮಿ, ಪ್ರೊ| ಜನಾರ್ದನ, ಪ್ರೊ| ರಾಮಪ್ಪ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ: ತಿಪ್ಪೇಸ್ವಾಮಿ
ರಾಷ್ಟ್ರಪ್ರೇಮ, ರಾಷ್ಟ್ರೀಯ ಭಾವೈಕ್ಯತೆ, ಏಕತೆ, ಐಕ್ಯತೆ ಬೆಳೆಸಲು ಕ್ರೀಡೆ ಸಹಕಾರಿ. ಯುವಕ-ಯುವತಿಯರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಪರಸ್ಪರ ಸಹಕಾರ ಮನೋಭಾವನೆ, ತಿಳಿವಳಿಕೆ, ನಾಯಕತ್ವದ ಗುಣ, ಧೈರ್ಯ, ಸಾಹಸ ಗುಣಗಳನ್ನು ಬೆಳೆಸಿಕೊಳ್ಳಬಹುದು. ಅಲ್ಲದೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಬಹುದು. ಧ್ಯಾನಚಂದ್‌ ವ್ಯಕ್ತಿತ್ವ ಹಾಗೂ ಆದರ್ಶ ಗುಣ ಹಾಗೂ ಕ್ರೀಡಾ ಮನೋಭಾವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ತಿಪ್ಪೇಸ್ವಾಮಿ ಕರೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next