ಹಿರಿಯೂರು: ತಾಲೂಕು ರೈತ ಸಂಘದ ವತಿಯಿಂದ ಶುಕ್ರವಾರ ನಗರದ ಹೊರವಲಯದ ಬಬ್ಬೂರು ಬಳಿ ಇರುವ ಎಪಿಎಂಸಿ ಮಾರುಕಟ್ಟೆ ಎದುರು ಧರಣಿ ನಡೆಸಲಾಯಿತು.
ಕಳೆದ 4 ತಿಂಗಳ ಹಿಂದೆ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಯವರಿಗೆ ಮನವಿ ಮಾಡಿ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸಲಾಗಿತ್ತು. ಆದರೆ ಸ್ಥಳಿಯ ಮಾರುಕಟ್ಟೆ ಕಾರ್ಯದರ್ಶಿಯವರು ಯಾವುದೆ ಕ್ರಮ ಕೈಗೊಂಡಿಲ್ಲ. ಮಾರಕಟ್ಟೆ ಸಮಿತಿ ರೈತರು ಬೆಳೆದ ದವಸ ಧಾನ್ಯಗಳನ್ನು ಖರೀದಿಸುವಂತೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಮುತ್ತಿಗೆ ಹಾಕಿ ಹೋರಾಟ ನಡೆಸುವುದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದರು.
ನಗರದ ಪ್ರಧಾನ ರಸ್ತೆಯಲ್ಲಿ ರೈತರು ಬೆಳೆದ ಕಾಳು-ಕಡಿ, ದವಸ, ಧಾನ್ಯಗಳನ್ನು ಕೆಲವು ಅಂಗಡಿಯವರು ಖರೀದಿಸಿ ರೈತರಿಗೆ ನ್ಯಾಯಯುತ ಬೆಲೆ ನೀಡದೆ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಎಲ್ಲ ತರಹದ ಬೆಳೆಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೆ ಖರೀದಿಸುವಂತೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿದ ಎಪಿಎಂಸಿ ಮಾರುಕಟ್ಟೆ ಅಧಿಕಾರಿ ಶ್ರೀನಿವಾಸ್ ರೆಡ್ಡಿ ಅವರಿಗೆ ತಿಳಿಸಿದರು.
ಹುಣಸೆಹಣ್ಣು ಕೆಜಿ.ಗೆ 200-250 ರೂ. ಇದ್ದು, ಅಂಗಡಿಯವರು ರೈತರಿಗೆ ಕೇವಲ 100 ರೂ. ನೀಡುತ್ತಾರೆ, ಈ ಬಗ್ಗೆ ಮಾರುಕಟ್ಟೆ ಸಮಿತಿ ಅಂತಹ ಅಂಗಡಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು. ಜಿಲ್ಲಾ ಮಾರುಕಟ್ಟೆ ಸಮಿತಿ ಅಧಿಕಾರಿ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಈ ಬಗ್ಗೆ ಅಂಗಡಿ ಮಾಲೀಕರಿಗೆ ಹಲವಾರು ಬಾರಿ ನೋಟಿಸ್ ನೀಡಲಾಗಿದೆ. ಮಾ. 18 ರಂದು ಎಪಿಎಂಸಿ ಆಡಳಿತ ಮಂಡಳಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಲಾಗುವುದೆಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಆರ್. ನಾಗೇಂದ್ರ ನಾಯ್ಕ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಜಗನ್ನಾಥ್, ರೈತ ಮುಖಂಡರಾದ ಸಿದ್ದರಾಮಣ್ಣ, ಬಿ.ಒ. ಶಿವಕುಮಾರ್, ಲಕ್ಷ್ಮೀಕಾಂತ್, ಕಲ್ಪನಾ, ಶ್ರೀನಿವಾಸ್, ರಂಗಸ್ವಾಮಿ, ತಿಮ್ಮಣ್ಣ ಇತರರು ಇದ್ದರು.