ಹಿರಿಯೂರು: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ರೈತ ಸಂಘದ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಶ್ರೀ ತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ನಂತರ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು. ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ತಾಲೂಕಿನಲ್ಲಿ ಹಲವಾರು ದಶಕಗಳಿಂದ ಬೆಳೆಸಿರುವ ನಾಲ್ಕು ಲಕ್ಷ ತೆಂಗಿನಮರಗಳು ಮಳೆ ಇಲ್ಲದೆ, ವಿವಿ ಸಾಗರ ಜಲಾಶಯದಲ್ಲಿ ನೀರಿಲ್ಲದೆ ನಾಶವಾಗಿವೆ.
ಸರ್ಕಾರ ಈ ಬಗ್ಗೆ ಸರಿಯಾಗಿ ಸರ್ವೆ ನಡೆಸದೆ ಕೇವಲ ಒಂದು ಲಕ್ಷ ತೆಂಗಿನಮರಗಳಿಗೆ ತಲಾ 400 ರೂ.ನಂತೆ ಅವೈಜ್ಞಾನಿಕವಾಗಿ ಪರಿಹಾರ ನೀಡಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಆಗಿರುವ ಬೆಳೆ ನಷ್ಟ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಮುಖಂಡ ಕೆ.ಸಿ. ಹೊರಕೇರಪ್ಪ ಮಾತನಾಡಿ, ತಾಲೂಕಿನಲ್ಲಿ ತೆಂಗು ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಪುನಃ ತೆಂಗು ಬೆಳೆಯಲು ರೈತರಿಗೆ ಸಹಾಯಧನ ನೀಡಬೇಕು. ರೈತರ ತೋಟದ ಬೆಳೆಗಳು ಹಾಳಾಗಿದ್ದು, ತೋಟದ ಬೆಳೆಗೆ ಪುನಶ್ಚೇತನ ಯೋಜನೆಯಡಿ ಪ್ರತಿ ಹೆಕ್ಟೇರ್‌ಗೆ 50,000 ರೂ. ಸಹಾಯಧನ ನೀಡಬೇಕು. ಫಸಲ್ ಬಿಮಾ ಯೋಜನೆಯಡಿ ರೈತರಿಂದ ವಿಮಾ ಹಣವನ್ನು ಕಟ್ಟಿಸಿಕೊಂಡಿದ್ದು ವಿಮಾ ಹಣ ಬಂದಿಲ್ಲ. ಈ ಬಗ್ಗೆ ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯವರು ರೈತರನ್ನು ಅಲೆದಾಡಿಸುತ್ತಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆ ಅಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರಧನ ರೈತರಿಗೆ ಸಮಪರ್ಕವಾಗಿ ಹಂಚಿಕೆಯಾಗಿಲ್ಲ ಎಂದು ಆರೋಪಿಸಿದರು. ರೈತ ಮುಖಂಡ ಸಿದ್ದರಾಮಣ್ಣ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರಕ್ಕೆ 2 ಟಿಎಂಸಿ ನೀರು ಹರಿಸಲಾಗುತ್ತಿದೆ. ಇದು ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ನಗರಗಳಿಗೆ ಹಾಗೂ ಕುದಾಪುರ ಡಿಆರ್‌ಡಿಒ ಯೋಜನೆಗೆ ಕುಡಿಯಲು ಮಾತ್ರ ಸಾಕಾಗುತ್ತಿದೆ.
ಆದ್ದರಿಂದ ನೀರಾವರಿ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲು 5 ಟಿಎಂಸಿ ನೀರನ್ನು ವಿವಿ ಸಾಗರಕ್ಕೆ ಹರಿಸಬೇಕು. ನಾಲೆಗಳ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಮುಂದಾಗಬೇಕು. ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ನಾಗರಿಕರಿಗೆ ಹಾಗೂ ರೈತರಿಗೆ ಪರಿಹಾರ ನೀಡುವಾಗ ತಾರತಮ್ಯ ಮಾಡಲಾಗಿದೆ. ಎಲ್ಲಾ ಭೂಮಾಲೀಕರಿಗೆ ನ್ಯಾಯುತವಾಗಿ ಪರಿಹಾರ ವಿತರಣೆ ಮಾಡಬೇಕೆಂದು ತಿಳಿಸಿದರು.
ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ರೈತ ಮುಖಂಡರಾದ ಎಂ.ಆರ್. ಪುಟ್ಟಸ್ವಾಮಿ, ಸಿ.ಒ. ಶಿವಕುಮಾರ್, ದಸ್ತ್ಗಿರಿ ಸಾಬ್, ಆರನಕಟ್ಟೆ ಶಿವಕುಮಾರ್, ತಿಮ್ಮಾ ರೆಡ್ಡಿ, ಶ್ರೀನಿವಾಸ್, ಕಸುವನಹಳ್ಳಿ ರಮೇಶ್, ಎಚ್.ಆರ್. ತಿಮ್ಮಯ್ಯ, ಕಲ್ಪನಾ, ಲತಾ, ಲಕ್ಷ್ಮಕ್ಕ ಮತ್ತಿತರರು ಇದ್ದರು.