ಸಾಮಾನ್ಯವಾಗಿ ಚಿತ್ರರಂಗದಲ್ಲಿ ಹೀರೋಯಿನ್‌ಗಳು ಬಿಗ್ ಸ್ಟಾರ್ ಚಿತ್ರಗಳಿಗೆ ಹೀರೋಯಿನ್ ಆಗಬೇಕು, ಗ್ಲಾಮರಸ್ ಪಾತ್ರಗಳು ಸಿಗಬೇಕು, ತನಗೆ ಸ್ಕೋಪ್ ಇರುವ ಪಾತ್ರಗಳು ಬರಬೇಕು ಎಂದು ನಿರೀಕ್ಷಿಸುವುದು ಸಾಮಾನ್ಯ. ಆದರೆ ಇದಕ್ಕೆ ಅಪವಾದ ಎನ್ನುವಂತೆ ವಿಭಿನ್ನ ಪಾತ್ರಗಳು ಸಿಗಬೇಕು, ಪ್ರಯೋಗಾತ್ಮಕ ಚಿತ್ರಗಳು ಸಿಗಬೇಕು ಎಂದು ಬಯಸುವ ನಟಿ ಮಣಿಯರು ತುಂಬಾ ವಿರಳ. ಇಂಥ ವಿರಳ ಪಟ್ಟಿಯಲ್ಲಿ ಸಿಗುವ ನಾಯಕಿಯರಲ್ಲಿ ಹರಿಪ್ರಿಯಾ ಕೂಡ ಒಬ್ಬರು.
ಇತ್ತೀಚೆಗಷ್ಟೆ ತೆರೆಕಂಡ ‘ಕುರುಕ್ಷೇತ್ರ’ ಚಿತ್ರದಲ್ಲಿ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಮಿಂಚಿದ್ದ ನಟಿ ಹರಿಪ್ರಿಯಾ, ಈಗ ‘ಬಿಚ್ಚುಗತ್ತಿ’ ಚಿತ್ರದಲ್ಲಿ ಐತಿಹಾಸಿಕ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದಿಂದ ಚಿತ್ರಕ್ಕೆ, ಪಾತ್ರದಿಂದ ಪಾತ್ರಕ್ಕೆ ಹೊಸತನ ಬಯಸುತ್ತಿರುವ ಹರಿಪ್ರಿಯಾ ಚಿತ್ರಗಳಲ್ಲಿ ತಮ್ಮ ಕ್ಯಾರೆಕ್ಟರ್ ಚೇಂಜ್ ಓವರ್ ಬಗ್ಗೆ ಮಾತನಾಡಿದ್ದಾರೆ.
‘ನಾನೊಬ್ಬ ಕಲಾವಿದೆಯಾಗಿ ವಿಭಿನ್ನ ಪಾತ್ರಗಳನ್ನು ಮಾಡಲು ಬಯಸುತ್ತೇನೆ. ಒಂದೇ ಥರದ ಪಾತ್ರಗಳನ್ನು ಮಾಡುವುದು, ಆ ಪಾತ್ರಗಳಿಗೆ ಸ್ಟಿಕ್ ಆನ್ ಆಗಿರುವುದು ನನಗೆ ಇಷ್ಟವಿಲ್ಲ. ಹಾಗಾಗಿ, ಆದಷ್ಟು ಹೊಸಥರದ ಚಿತ್ರಗಳು, ಹೊಸಥರದ ಪಾತ್ರಗಳನ್ನು ಮಾಡೋದಕ್ಕೆ ಇಷ್ಟಪಡ್ತೀನಿ. ಈ ಥರದ ಚೇಂಜ್ ಓವರ್ ನನಗೆ ಖುಷಿ ನೀಡುತ್ತದೆ’ ಎನ್ನುವುದು ಹರಿಪ್ರಿಯಾ ಮಾತು. ‘ಅದರಲ್ಲೂ ಈ ವರ್ಷ ನಾನು ಮಾಡಿರುವ ಎಲ್ಲಾ ಚಿತ್ರಗಳಲ್ಲೂ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು ಸಿಕ್ಕಿರುವುದು ನನ್ನ ಅದೃಷ್ಟ. ‘ಬೆಲ್ಬಾಟಂ’ನಲ್ಲಿ ರೆಟ್ರೋ ಲುಕ್, ‘ಸೂಜಿದಾರ’ದಲ್ಲಿ ಮಿಡಲ್ ಕ್ಲಾಸ್ ಲೇಡಿ, ‘ಡಾಟರ್ ಆಫ್ ಪಾರ್ವತಮ್ಮ’ದಲ್ಲಿ ಆ್ಯಕ್ಷನ್ ಲುಕ್‌ನಲ್ಲಿ, ಇತ್ತೀಚೆಗೆ ರಿಲೀಸ್ ಆಗಿರುವ ‘ಕುರುಕ್ಷೇತ್ರ’ದಲ್ಲಿ ಪೌರಾಣಿಕ ಪಾತ್ರ ಹೀಗೆ ಪ್ರತಿ ಚಿತ್ರದಲ್ಲೂ ಹೊಸಥರದ ಕ್ಯಾರೆಕ್ಟರ್, ಹೊಸಲುಕ್ ಸಿಕ್ಕಿದೆ’ ಎನ್ನುತ್ತಾರೆ ಹರಿಪ್ರಿಯಾ.
ಇನ್ನು ಮುಂಬರಲಿರುವ ‘ಬಿಚ್ಚುಗತ್ತಿ’ ಚಿತ್ರದಲ್ಲಿ ಹರಿಪ್ರಿಯಾ ಐತಿಹಾಸಿಕ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಹರಿಪ್ರಿಯಾ, ‘ಈ ಚಿತ್ರದಲ್ಲಿ ಸಿದ್ಧಾಂಬೆ ಎನ್ನುವ ರಾಣಿಯ ಪಾತ್ರ ನನ್ನದು. ರಾಣಿ ಅಂದಾಕ್ಷಣ ಕೇವಲ ಅರಮನೆಯಲ್ಲಿ ಅಲಂಕಾರ ಮಾಡಿಕೊಂಡು ಕೂತಿರುವುದಿಲ್ಲ. ಬದಲಾಗಿ ಇದರಲ್ಲಿ ಅರಮನೆಯಿಂದ ಹೊರಗೆ ಹೋಗಿ ರಾಜನನ್ನು ಉಳಿಸಿಕೊಳ್ಳಲು ಕುದುರೆ ಸವಾರಿ ಮಾಡಿಕೊಂಡು ಹೋಗುತ್ತೇನೆ. ಕತ್ತಿವರಸೆ ಮಾಡುತ್ತೇನೆ, ಯುದ್ಧ ಮಾಡುತ್ತೇನೆ. ಇಲ್ಲಿಯವರೆಗೆ ರಾಣಿ ಅಂದ್ರೆ ಅನೇಕರು ಕಲ್ಪಿಸಿಕೊಂಡಿರುವುದಕ್ಕಿಂತ ತುಂಬ ವಿಭಿನ್ನವಾದ ಪಾತ್ರವನ್ನು ಈ ಚಿತ್ರದಲ್ಲಿ ನೋಡಬಹುದು’ ಅನ್ನೋದು ಹರಿಪ್ರಿಯಾ ಮಾತು.
ಇನ್ನು ‘ಬಿಚ್ಚುಗತ್ತಿ’ ಚಿತ್ರದಲ್ಲಿ ಹರಿಪ್ರಿಯಾ ತಮ್ಮ ಪಾತ್ರದ ನಿರ್ವಹಣೆಗಾಗಿ ಸಾಕಷ್ಟು ತರಬೇತಿ ಮತ್ತು ತಯಾರಿ ಮಾಡಿಕೊಂಡಿದ್ದಾರಂತೆ. ಚಿತ್ರದುರ್ಗದ ಇತಿಹಾಸದಲ್ಲಿ ಬರುವ ನೈಜ ಘಟನೆಯ ಚಿತ್ರ ಇದಾಗಿದ್ದರಿಂದ, ಇದರ ಪಾತ್ರಗಳು ಕೂಡ ಅಷ್ಟೇ ನೈಜತೆಯನ್ನು ಬಯಸುತ್ತವೆ. ಹಾಗಾಗಿ ಇದನ್ನು ಮಾಡುವ ಮೊದಲು ಸಾಕಷ್ಟು ಹೋಂವರ್ಕ್, ಪ್ರಿಪರೇಶನ್ ಮಾಡಿಕೊಳ್ಳಬೇಕಾಯಿತು. ಕುದುರೆ ಸವಾರಿ, ಕತ್ತಿ ವರಸೆ ಅಭ್ಯಾಸ ಮಾಡಬೇಕಾಯಿತು. ನಿರ್ದೇಶಕ ಸಂತು ಮತ್ತು ಚಿತ್ರತಂಡ ಸಾಕಷ್ಟು ಪರಿಶ್ರಮ ವಹಿಸಿ ಅತ್ಯಂತ ಅಚ್ಚುಕಟ್ಟಾಗಿ ಚಿತ್ರವನ್ನು ಮಾಡಿ ಮುಗಿಸಿದ್ದಾರೆ’ ಎಂದು ‘ಬಿಚ್ಚುಗತ್ತಿ’ ಚಿತ್ರದ ತಯಾರಿಯನ್ನು ತೆರೆದಿಡುತ್ತಾರೆ.
ಜಿ.ಎಸ್. ಕಾರ್ತಿಕ ಸುಧನ್