ರಬಕವಿ ಬನಹಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಮತ್ತು ಮಹಾರಾಷ್ಟ್ರದ ವಿವಿಧ ಜಲಾಶಯಗಳು ತುಂಬಿ ಹರಿಯುತ್ತಿರುವುದರಿಂದ ಕೃಷ್ಣಾ ನದಿಗೆ ನೀರನ್ನು ಬಿಟ್ಟಿರುವುದರಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ತಾಲ್ಲೂಕಿನ ಹಿಪ್ಪರಗಿ ಜಲಾಶಯಕ್ಕೆ ಶುಕ್ರವಾರ 86 ಸಾವಿರ ಕ್ಯೂಸೆಕ್ ಒಳ ಹರಿವು ಇದ್ದು, ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದ್ದರಿಂದ ನೀರಿನ ಸಂಗ್ರಹ ಮಾಡದೆ ಅಷ್ಟೆ ಪ್ರಮಾಣದಲ್ಲಿ ನೀರಿನ ಹೊರ ಬೀಡಲಾಗುತ್ತಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.
ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ: 84 ಮಿ.ಮೀ, ನವುಜಾ: 95 ಮಿಮೀ, ಮಹಾಬಳೇಶ್ವರ 103 ಮಿಮೀ, ವಾರಣಾ: 50 ಮಿ.ಮೀ, ರಾಧಾನಗರಿ: 157 ಮಿ.ಮೀ, ಮಳೆಯಾದ ವರದಿಯಾಗಿದೆ.
ಕೃಷ್ಣಾ ನದಿಗೆ ಭೇಟಿ ನೀಡಿದ ತಹಶೀಲ್ದಾರ್; ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ರಬಕವಿ ಬನಹಟ್ಟಿ ತಹಶೀಲ್ದಾರ್ ಡಾ.ಡಿ.ಎಚ್. ಹೂಗಾರ ಭೇಟಿ ನೀಡಿ ನದಿ ನೀರಿನ ಮಟ್ಟವನ್ನು ಪರಿಶೀಲನೆ ಮಾಡಿದರು.
ಕೃಷ್ಣಾ ನದಿಗೆ ಯಾವುದೇ ರೀತಿಯಲ್ಲಿ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ. ನದಿ ತೀರದ ಗ್ರಾಮಸ್ಥರು ನದಿ ತೀರಕ್ಕೆ ಬಟ್ಟೆ ಶುಚಿ ಗೊಳಿಸಲು, ದನ ಕರುಗಳನ್ನು ಶುಚಿ ಗೊಳಿಸಲು ಮತ್ತು ನೀರು ಕುಡಿಸಲು ತೆಗೆದುಕೊಂಡು ಹೋಗಬಾರದು. ನೀರಿನ ವೇಗ ಸಾಕಷ್ಟು ಪ್ರಮಾಣದಲ್ಲಿದ್ದು, ನದಿಯಲ್ಲಿ ಈಜಾಡುವುದನ್ನು ಮಾಡಬಾರದು ಎಂದು ಡಾ.ಹೂಗಾರ ತಿಳಿಸಿದರು.