ಮಂಗಳೂರು: ದೇಶದ ಸಂಪನ್ಮೂಲಗಳನ್ನು ಕಾರ್ಪೊರೇಟ್ ಕುಳಗಳು ನಿಯಂತ್ರಿಸುತ್ತಿದ್ದು, ಕೇಂದ್ರ ಸರಕಾರ ಹಿಂದುತ್ವದ ಅಜೆಂಡಾ ಜಾರಿಗೆ ಮುಂದಾಗುತ್ತಿದೆ. ಆದರೆ ಇವೆಲ್ಲದರ ನಿಗ್ರಹಕ್ಕೆ ಪಣ ತೊಟ್ಟಿರುವ ಪಿಎಫ್‌ಐ ಸಂಘಟನೆ ಸಮಾಜದಲ್ಲಿ ಶೋಷಿತರ, ಬಡವರ ಉದ್ಧಾರಕ್ಕೆ ದಾರಿದೀಪವಾಗಿ ಕಾರ್ಯನಿರ್ವಹಿಸಲಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ. ಶರೀಫ್ ತಿಳಿಸಿದರು.
ಅವರು ಶುಕ್ರವಾರ ನಗರದ ನೆಹರೂ ಮೈದಾನದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 10ನೇ ವರ್ಷಾ ಚರಣೆಯ ಅಂಗವಾಗಿ ನಡೆದ ಪಾಪ್ಯುಲರ್ ಫ್ರಂಟ್ ಡೇಯ ಸಮಾವೇಶದಲ್ಲಿ ಮಾತನಾಡಿದರು.
ದೇಶದ ಕೆಂಪುಕೋಟೆ, ವಿಧಾನಸೌಧಗಳ ಕೇಸರೀಕರಣಕ್ಕೆ ಕೆಲವೊಂದು ಸಂಘಟನೆಗಳು ಪ್ರಯತ್ನಿಸುತ್ತಿವೆ. ಸಂಸತ್ತಿನ ಒಪ್ಪಿಗೆ ಇಲ್ಲದೆ ಕೇವಲ ಸಣ್ಣ ಗುಂಪಿನ ಒಪ್ಪಿಗೆ ಪಡೆದು ಪ್ರಧಾನಿ ಮೋದಿ ಅವರು ಕೈಗೊಳ್ಳುವ ತೀರ್ಮಾನಗಳು ದೇಶದ ಅಭಿವೃದ್ಧಿಗೆ ತೀವ್ರ ಹೊಡೆತ ನೀಡುತ್ತಿವೆ. ಕೆಲವು ಸಂಸದರು ತಮ್ಮ ಪ್ರಚೋದನಕಾರಿ ಭಾಷಣಗಳ ಮೂಲಕ ದೇಶದ ಜನರನ್ನು ಧರ್ಮದ ಹೆಸರಿನಲ್ಲಿ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಯುನಿವೆಫ್ ಸಂಘಟನೆಯ ರಾಜ್ಯಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ ಮಾತನಾಡಿ, ದೇಶ ದಲ್ಲಿ ಎಷ್ಟೇ ಕ್ರಾಂತಿಕಾರಿಗಳು ಹುಟ್ಟಿದರೂ ಅವರು ಅಷ್ಟೇ ವೇಗದಲ್ಲಿ ಮರೆಯಾಗಿದ್ದಾರೆ. ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗಿರುವ ಜನತೆಗೆ ಸಾಗುವ ಹಾದಿಯಲ್ಲಿ ಎಷ್ಟೇ ಆತಂಕಗಳು ಬಂದರೂ ಹತಾಶರಾಗಬಾರದು ಎಂದರು.
ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಿರ್ದೇಶಕ ಯೋಗೇಶ್ ಮಾಸ್ಟರ್, ಮಲಪ್ಪುರಂ ಎಚ್‌ಆರ್‌ಡಿಎಫ್ ಎಂ.ಕೆ. ಅಬ್ದುಲ್ ಮಜೀದ್ ಖಾಸಿಮಿ, ಸಮಾಜ ಪರಿವರ್ತನಾ ವೇದಿಕೆಯ ಅಧ್ಯಕ್ಷ ಧಿಮಾನ್ ಡೀಕಯ್ಯ, ಇಬ್ರಾಹಿಂ ಮಜೀದ್ ತುಂಬೆ, ಸಾದುದ್ದೀನ್ ಸ್ವಾಲಿಹ್, ಇಕ್ಬಾಲ್ ಅಹ್ಮದ್ ಮೂಲ್ಕಿ, ಹಮೀದ್ ಕಂದಕ್ ಮೊದಲಾದವರು ಉಪಸ್ಥಿತರಿದ್ದರು.
ಸಮಾವೇಶದ ಆರಂಭದಲ್ಲಿ ಮೈದಾನದ ಸುತ್ತ ಯೂನಿಟಿ ಮಾರ್ಚ್ ನಡೆಸಲಾಯಿತು. ಬಳಿಕ ಆಫೀಸರ್ ಮಾರ್ಚ್, ಬ್ಯಾಂಡ್ ಡೆಮೊ ಏರ್ಪಡಿಸಲಾಗಿತ್ತು.
ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಹನೀಫ್ ಕಾಟಿಪಳ್ಳ ಸ್ವಾಗತಿಸಿ, ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ ವಂದಿಸಿದರು. ಎ.ಕೆ. ಅಶ್ರಫ್ ಹಾಗೂ ಅಸ್ರಫ್ ಮಾಚಾರ್ ನಿರ್ವಹಿಸಿದರು. ಭದ್ರತೆಯ ದೃಷ್ಟಿಯಿಂದ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.