Advertisement

ಹಿಂದೂಗಳು ಒಂದಾಗುವುದೇ ಎಲ್ಲದಕ್ಕೂ ಉತ್ತರ: ಡಾ|ಕಲ್ಲಡ್ಕ ಪ್ರಭಾಕರ್‌ ಭಟ್‌

06:42 PM Jan 29, 2023 | Team Udayavani |

ಮಣಿಪಾಲ: ಹೋಮ, ಹವನಗಳನ್ನು ಮೂಢನಂಬಿಕೆ ಎಂದು ಬಿಂಬಿಸುವ ಪ್ರಯತ್ನಗಳು ಇಂದಿಗೂ ನಡೆಯುತ್ತಿವೆ. ಹಿಂದೂ ಸಮಾಜವನ್ನು ಸಂಘಟಿಸುವ ಮೂಲಕ ಇದಕ್ಕೆ ಉತ್ತರ ನೀಡಬೇಕು. ಜಗತ್ತಿನ ಹಿತದೃಷ್ಟಿಯಿಂದ ಹಿಂದೂಗಳೆಲ್ಲರೂ ಜಾತಿ, ಮತ, ಪ್ರಾಂತ್ಯ ಭೇದ ಮರೆತು ಒಂದಾಗಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಆರೆಸ್ಸೆಸ್‌ನ ಹಿರಿಯರಾದ ಡಾ| ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದರು.

Advertisement

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್‌ ಮತ್ತು ಮೃತ್ತಿಕಾ ಪೂಜೆಯ ಅಂಗವಾಗಿ ರವಿವಾರ ನಡೆದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂ ಧರ್ಮ ಜಗ್ಗತ್ತಿನ ಹಿತ ಬಯಸುತ್ತದೆ. ಹಿಂದೂ ಧರ್ಮ ಎಂದೂ ಜಾತ್ಯಾತೀತತೆಯ ವಿರುದ್ಧವಿರಲು ಸಾಧ್ಯವಿಲ್ಲ. ತಾಯಿಯನ್ನು ಆರಾಧಿಸುವ ಏಕೈಕ ದೇಶ ಭಾರತ. ಇದನ್ನು ಪಾಶ್ಚಾತ್ಯರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ಆಚರಣೆಗಳನ್ನು ಮೂಢನಂಬಿಕೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದೂ ರಿಲಿಜಿಯನ್‌ ಅಲ್ಲ. ಅದೊಂದು ಜೀವನ ಪದ್ಧತಿ. ಎಲ್ಲರ ಹಿತ ಬಯಸುವ ಏಕಮೇವ ಸಂಸ್ಕೃತಿ, ಧರ್ಮ ಹಿಂದೂ ಸಮಾಜದ್ದಾಗಿದೆ. ಹಿಂದೂ ಸಮಾಜವನ್ನು ಸಂಘಟಿಸುವ ಭಾಗವಾಗಿ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಶುಭಹಾರೈಸಿದರು.

ಶೃಂಗೇರಿ ಮಠದ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ್‌ ಶಾಸ್ತ್ರೀಯವರು ಅತಿರುದ್ರ ಮಹಾಯಾಗದ ಹಿನ್ನೆಲೆ, ಮಹಿಮೆ, ಪ್ರಯೋಜನ ಮತ್ತು ನಡೆಯುವ ವಿಧಾನ ಇತ್ಯಾದಿಗಳ ವಿವರ ನೀಡಿದರು.ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌, ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್‌ ಶುಭಹಾರೈಸಿದರು.ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಕೆ.ರಘುಪತಿ ಭಟ್‌ ಅಧ್ಯಕ್ಷೆತೆ ವಹಿಸಿದ್ದರು.

Advertisement

ಆರೆಸ್ಸೆಸ್‌ ಜಿಲ್ಲಾ ಸಂಘಚಾಲಕ ಡಾ| ನಾರಾಯಣ ಶೆಣೈ, ವಿಧಾನ ಪರಿಷತ್‌ ಮಾಜಿ ಸದಸ್ಯ ದಯಾನಂದ ರೆಡ್ಡಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ಪ್ರಸಾದ್‌ ನೇತ್ರಾಲಯದ ಡಾ| ಕೃಷ್ಣ ಪ್ರಸಾದ್‌ ಕೂಡ್ಲು, ಉದ್ಯಮಿಗಳಾದ ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಪರ್ವತ್‌ ಶೆಟ್ಟಿ, ಬಾಲಕೃಷ್ಣ ಭಂಡಾರಿ, ಕಾರ್ತಿಕ್‌ ಆರ್‌. ನಾಯಕ್‌, ನಿರ್ಮಿತಿ ಕೇಂದ್ರದ ಅರುಣ್‌ ಕುಮಾರ್‌, ನಗರಸಭೆ ಸದಸ್ಯೆಯರಾದ ವಿಜಯಲಕ್ಷ್ಮೀ, ಕಲ್ಪನಾ ಸುಧಾಮ, ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ದೇವಸ್ಥಾನದ ಆಡಳಿತ ಮೊಕ್ತೇಸರ ದಿನೇಶ್‌ ಪ್ರಭು, ಶೃಂಗೇರಿ ಮಠದ ವಿಶ್ವನಾಥ ಶಾಸ್ತ್ರೀ,ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ಉಡುಪಿ ಜಿಲ್ಲಾ ಸಂಚಾಲಕ ವಿಶ್ವನಾಥ್ ಶ್ಯಾನುಭೋಗ್ ಉಪಸ್ಥಿತರಿದ್ದರು.

ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಠಾಕೂರ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ್‌ ಸಾಮಂತ್‌ ವಂದಿಸಿದರು. ಪ್ರಾಧ್ಯಾಪಕ ಡಾ| ಬಾಲಕೃಷ್ಣ ಮುದ್ದೊಡ್ಡಿ ನಿರೂಪಿಸಿದರು.

ಸಮರ್ಪಣ ದಿವಸ್‌
ಅತಿರುದ್ರ ಮಹಾಯಾಗದ ಪೂರ್ಣಾಹುತಿಗೆ ಬಳಸುವ ಭತ್ತ, ತುಪ್ಪ ಮತ್ತು ಎಳ್ಳು ಇತ್ಯಾದಿಗಳನ್ನು ಫೆ. 12ರ ಬೆಳಗ್ಗೆ 9 ಗಂಟೆಯಿಂದ ಸ್ವೀಕರಿಸಲಾಗುವುದು. ”ಸಮರ್ಪಣ್‌ ದಿವಸ್‌” ಆಚರಣೆಯ ಭಾಗವಾಗಿ ಇದು ಅತಿರುದ್ರ ಯಾಗ ಮುಗಿಯವವರೆಗೂ ನಡೆಯಲಿದೆ. ಹಾಗೆಯೇ ಭಕ್ತರಿಗೆ ಬೆಳ್ಳಿ ಲೇಪಿತ ರುದ್ರಾಕ್ಷಿಯನ್ನು ಸಂಕಲ್ಪ ಸಹಿತವಾಗಿ ದೇವಸ್ಥಾನದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಠಾಕೂರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next