ಅಮೃತ್ ಸರ್(ಪಂಜಾಬ್): ಆಡಳಿತ ಮಂಡಳಿ ವಿಚಾರಕ್ಕೆ ಸಂಬಂಧಿಸಿದಂತೆ ದೇವಾಲಯದ ಹೊರಭಾಗದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಲಪಂಥೀಯ ಸಂಘಟನೆಯ(ಶಿವಸೇನಾ) ಮುಖಂಡ ಸುಧೀರ್ ಸೂರಿ ಎಂಬವರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಶುಕ್ರವಾರ (ನವೆಂಬರ್ 04) ನಡೆದಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಒಬ್ಬ ಪರದೇಶಿ ಗಿರಾಕಿ: ಏಕವಚನದಲ್ಲೇ ವ್ಯಂಗ್ಯವಾಡಿದ ಶ್ರೀರಾಮುಲು
ಸ್ಥಳೀಯ ಅಂಗಡಿಯಾತ ಸುಧೀರ್ ಸೂರಿ ಅವರ ಮೇಲೆ ಐದು ಬಾರಿ ಗುಂಡಿನ ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ. ಸೂರಿಗೆ ಪೊಲೀಸ್ ಭದ್ರತೆ ಕಲ್ಪಿಸಿದ್ದರೂ ಕೂಡಾ ದಾಳಿಕೋರ ಸುಧೀರ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಮಾರ್ಗ ಮಧ್ಯದಲ್ಲಿಯೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಆರೋಪಿ ಸಂದೀಪ್ ಸಿಂಗ್ ಎಂಬಾತನನ್ನು ಕೂಡಲೇ ಬಂಧಿಸಲಾಗಿದ್ದು, ಆತನ ದಾಳಿಗೆ ಉಪಯೋಗಿಸಿದ್ದ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿರುವುದಾಗಿ ಸ್ಥಳೀಯ ಪೊಲೀಸ್ ಕಮಿಷನರ್ ತಿಳಿಸಿದ್ದು, ಈವರೆಗೆ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ವರದಿ ಹೇಳಿದೆ.
ಮೂಲಗಳ ಪ್ರಕಾರ, ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿಕೋರ ಸಿಂಗ್ ಹಾಗೂ ಇತರ ಮೂವರು ವ್ಯಕ್ತಿಗಳ ಜತೆ ಎಸ್ ಯುವಿ ಕಾರಿನಲ್ಲಿ ಆಗಮಿಸಿದ್ದರು. ಶೂಟೌಟ್ ಬಳಿಕ ಮೂವರು ಕಾರಿನಲ್ಲಿ ಪರಾರಿಯಾಗಿದ್ದರು ಎಂದು ವರದಿ ತಿಳಿಸಿದೆ.