Advertisement

ಕೇಂದ್ರದ ಮೇಲೆ ಹಿಂದಿ ಹೇರಿಕೆ; ಕರ್ನಾಟಕ, ತಮಿಳುನಾಡುಗಳಿಂದ ಆಕ್ರೋಶ

07:00 AM Jul 22, 2017 | Team Udayavani |

ನವದೆಹಲಿ: ಹಿಂದಿಯೇತರ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪ ಸಂಸತ್‌ನ ಮೇಲ್ಮನೆಗೂ ತಲುಪಿದೆ.

Advertisement

ಬೆಂಗಳೂರಿನ ಮೆಟ್ರೋದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಜತೆಗೆ ಹಿಂದಿಯನ್ನು ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಹಿಂದಿ ಹೇರಿಕೆ ನಡೆಸಲಾಗುತ್ತಿದೆ ಎಂದು ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿವೆ.

ಈ ಬಗ್ಗೆ ರಾಜ್ಯಸಭೆಯಲ್ಲಿ ಸಂವಿಧಾನದ 8ನೇ ಶೆಡ್ನೂಲ್‌ನಲ್ಲಿ ಈಗ ಸೇರಿರುವ 32 ಭಾಷೆಗಳ ಜತೆ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಕೊಡವ ಮತ್ತು ತುಳುವನ್ನು ಸೇರಿಸಬೇಕು ಎಂದು ಖಾಸಗಿ ಮಸೂದೆ ಮಂಡಿಸಿದ ಬಿ.ಕೆ. ಹರಿಪ್ರಸಾದ್‌ ಅವರು, ಹಿಂದಿ ಹೇರಿಕೆ ಬಗ್ಗೆ ಪ್ರಸ್ತಾಪಿಸಿದರು.

ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಬಿಂಬಿಸಿ ಹಿಂದಿಯೇತರ ರಾಜ್ಯಗಳಲ್ಲಿ ಬಲವಂತವಾಗಿ ಹೇರಲಾಗುತ್ತಿದೆ. ಆದರೆ, ನಮ್ಮ ಸಂವಿಧಾನದ ಪ್ರಕಾರ ರಾಷ್ಟ್ರಭಾಷೆ ಎಂಬುದು ಇಲ್ಲವೇ ಇಲ್ಲ. ಆದರೂ ಏಕೆ ಹಿಂದಿಯನ್ನು ಬಳಕೆ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಉತ್ತರಿಸಿದ ಕೇಂದ್ರ ಗೃಹ ಇಲಾಖೆಯ ಸಹಾಯಕ ಮತ್ತು ಅಧಿಕೃತ ಭಾಷೆಗಳ ವಿಭಾಗದ ಉಸ್ತುವಾರಿ ಕಿರಣ್‌ ರಿಜಿಜು ಅವರು, ನಾವು ಹಿಂದಿಯನ್ನು ಇನ್ನೊಬ್ಬರ ಮೇಲೆ ಹೇರಿಕೆ ಮಾಡಲು ಹೊರಟಿಲ್ಲ. ಅಲ್ಲದೆ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದೂ ಕರೆದಿಲ್ಲ. ಭಾರತದಲ್ಲಿ ಇರುವ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಆಗಿವೆ. ಆದರೆ ಹಿಂದಿಯನ್ನು ಆಡಳಿತ ಭಾಷೆ ಎಂದು ಒಪ್ಪಿಕೊಳ್ಳಲಾಗಿದೆ ಎಂದು ಹೇಳಿದರು. ಜತೆಗೆ, ಹಿಂದಿ ವಿಶೇಷ ಸ್ಥಾನಮಾನವನ್ನೂ ನೀಡಿಲ್ಲ ಎಂದರು.

Advertisement

ಜತೆಗೆ 8ನೇ ಶೆಡ್ನೂಲ್‌ ಪ್ರಕಾರ ಇನ್ನೂ 38 ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಬೇಕಾಗಿದೆ. ಈ ಬಗ್ಗೆ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಅಲ್ಲದೆ, ಕೊಡವ ಮತ್ತು ತುಳುವನ್ನು ಸೇರಿಸಲು ಮಂಡಿಸಲಾಗಿರುವ ಖಾಸಗಿ ಮಸೂದೆಯನ್ನು ವಾಪಸ್‌ ತೆಗೆದುಕೊಳ್ಳುವಂತೆ ಬಿ.ಕೆ. ಹರಿಪ್ರಸಾದ್‌ ಅವರಿಗೆ ರಿಜಿಜು ಮನವಿ ಮಾಡಿದರು. ಒಂದೇ ಬಾರಿಗೆ ಎರಡು ಭಾಷೆಗಳನ್ನು ಸೇರಿಸಲು ಆಗುವುದಿಲ್ಲ ಎಂದರು. ಆದರೆ ವಾಪಸ್‌ ಪಡೆಯಲು ಸಾಧ್ಯವೇ ಇಲ್ಲ ಎಂದು ಹರಿಪ್ರಸಾದ್‌ ಸ್ಪಷ್ಟವಾಗಿ ಹೇಳಿದರು.

ಈ ಮಧ್ಯೆ, ತ್ರಿಭಾಷಾ ಸೂತ್ರದ ಬಗ್ಗೆ ಮಾತನಾಡಿದ ಕಿರಣ್‌ ರಿಜಿಜು ಅವರು, ಈಗಾಗಲೇ ಎಲ್ಲ ರಾಜ್ಯಗಳಲ್ಲಿ ಇದು ಜಾರಿಯಲ್ಲಿದೆ. ಇದರಂತೆ ಇಂಗ್ಲಿಷ್‌ ಮತ್ತು ಹಿಂದಿ ಜತೆಗೆ ಸ್ಥಳೀಯ ಪ್ರಾದೇಶಿಕ‌ ಭಾಷೆಯನ್ನೂ ಬಳಸಬಹುದಾಗಿದೆ ಎಂದರು. ಅಲ್ಲದೆ ಭಾಷೆ ವಿಚಾರ ತೀರಾ ಸೂಕ್ಷ್ಮವಾಗಿದ್ದು ಸ್ವಲ್ಪ ತಪ್ಪಾದರೂ ಒಕ್ಕೂಟ ವ್ಯವಸ್ಥೆಯಲ್ಲಿ ಭಾರಿ ಅನಾಹುತಗಳೇ ಆಗುತ್ತವೆ ಎಂದೂ ಹೇಳಿದರು.

ಸರ್ಕಾರದ ಅಧಿಕೃತ ನಿಲುವಿನ ಬಗ್ಗೆ ಮಾತನಾಡಿದ ಅವರು, ನಾವು ಹಿಂದಿಯನ್ನು ಬೇರೆ ಭಾಷೆ ಮೇಲೆ ಹೇರಿಕೆ ಮಾಡುತ್ತಿಲ್ಲ. ಆದರೆ ಹಿಂದಿಯನ್ನು ಸಂಸತ್‌ನ ಕಾರ್ಯಕಲಾಪಗಳನ್ನು ನಡೆಸುವ ಸಲುವಾಗಿ ಆಡಳಿತ ಭಾಷೆಯಾಗಿ ಒಪ್ಪಿಕೊಂಡಿದ್ದೇವೆ. ಈ ಮೂಲಕ ಹಿಂದಿ ಭಾಷೆಯ ಬೆಳವಣಿಗೆಗೆ ಉತ್ತೇಜಿಸುತ್ತಿದ್ದೇವೆ. ಹಾಗೆಯೇ ಪ್ರಾದೇಶಿಕ ಭಾಷೆಗಳನ್ನೂ ಇದೇ ರೀತಿಯಲ್ಲೇ ಉತ್ತೇಜಿಸುತ್ತೇವೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಹರಿಪ್ರಸಾದ್‌ ಅವರು, “”ಸರಿ ನಾವು ಹಿಂದಿಯನ್ನು ಒಪ್ಪಿಕೊಳ್ಳುತ್ತೇವೆ, ಆದರೆ ನೀವು ದಕ್ಷಿಣ ಭಾರತದ ಒಂದು ಭಾಷೆಯನ್ನು ಉತ್ತರ ಭಾರತದಲ್ಲಿ ಕಡ್ಡಾಯ ಭಾಷೆಯನ್ನಾಗಿ ಮಾಡಿ,” ಎಂದರು.

ಬಿಜೆಪಿಯ ಶಿವ್‌ ಪ್ರತಾಪ್‌ ಶುಕ್ಲಾ ಅವರು, ಎಲ್ಲಾ ಭಾಷೆಗಳ ಮೇಲೆ ಸರ್ಕಾರ ಆಸ್ಥೆ ವಹಿಸಿದ್ದರೆ ಈ ಸ್ಥಿತಿ ನಿರ್ಮಾಣವಾಗುತ್ತಲೇ ಇರಲಿಲ್ಲ ಎಂದರು. ಜತೆಗೆ ಮತ್ತು ತುಳುವನ್ನು 8ನೇ ಶೆಡ್ನೂಲ್‌ಗೆ ಸೇರಿಸಿ ಎಂದು ಒತ್ತಾಯಿಸಿದರು. ಕಾಂಗ್ರೆಸ್‌ನ ಆನಂದ್‌ ಭಾಸ್ಕರ್‌ ರಾಪೋಲು ಅವರು, ಕೆಲವೇ ಕೆಲವು ಮಂದಿ ಮಾತನಾಡುವ ಭಾಷೆಗಳನ್ನೂ ಸಂರಕ್ಷಿಸಬೇಕಾದ ಅಗತ್ಯವಿದೆ ಎಂದರು.

ಮತ್ತೂಬ್ಬ ಬಿಜೆಪಿ ಸಂಸದ ಲಾ ಗಣೇಶನ್‌ ಅವರು, ದೇಶದಲ್ಲಿ ಇಂಗ್ಲಿಷ್‌ನ ಹೇರಿಕೆ ಬಗ್ಗೆ ಮಾತನಾಡಿದರು. ತಮಿಳುನಾಡಿನಲ್ಲಿ ತಮಿಳು ಮಾತೃಭಾಷೆಯಾದರೂ, ಹೊಸ ಪೀಳಿಗೆಯವರಿಗೆ ತಮಿಳಿನಲ್ಲಿ ಓದಲು, ಬರೆಯಲು ಬರುವುದೇ ಇಲ್ಲ. ಇವರೆಲ್ಲ ಇಂಗ್ಲಿಷ್‌ಗೆ ಮಾರುಹೋಗಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ವಿವಾದದ ಮೂಲ
ಹಿಂದಿಯ ಬಳಕೆ ಬಗ್ಗೆ ಅಧಿಕೃತ ಭಾಷೆ ಮೇಲಿನ ಸಂಸತ್‌ನ ಸಮಿತಿ ಮಾಡಿದ್ದ ಶಿಫಾರಸಿಗೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಒಪ್ಪಿಗೆ ನೀಡಿದಾಗಿನಿಂದ ಈ ವಿವಾದ ಎದ್ದಿದೆ. ಇದರಂತೆ, ರಾಷ್ಟ್ರಪತಿ ಅವರೂ ಸೇರಿದಂತೆ ಎಲ್ಲಾ ಸಚಿವರು ಹಿಂದಿಯಲ್ಲೇ ಮಾತನಾಡಬೇಕು ಮತ್ತು ಹಿಂದಿಯಲ್ಲೇ ಬರೆಯುವುದನ್ನು ಕಲಿಯಬೇಕು ಎಂದು ಸೂಚಿಸಲಾಗಿದೆ. ಜತೆಗೆ ಭಾಷಣ ಮಾಡುವಾಗಲೂ ಹಿಂದಿಯನ್ನೇ ಬಳಕೆ ಮಾಡಬೇಕು ಎಂದೂ ಹೇಳಲಾಗಿದೆ. ಇದಷ್ಟೇ ಅಲ್ಲ, ಇನ್ನು 15 ವರ್ಷಗಳಲ್ಲಿ ಇಂಗ್ಲಿಷ್‌ ಅನ್ನು ಆಡಳಿತ ಭಾಷೆ ಪಟ್ಟದಿಂದ ಕೆಳಗಿಳಿಸಿ ಇಲ್ಲಿಗೆ ಹಿಂದಿಯನ್ನು ತರಬೇಕು ಎಂಬ ವಿಷಯವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next